ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗರ ಉಳಿಸಿದರೆ ಕನ್ನಡದ ಉಳಿವು: ಪ್ರೊ. ಬರಗೂರು

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಸಾಹಿತ್ಯ ಸಭಾಂಗಣ ಉದ್ಘಾಟನೆ, ಸನ್ಮಾನ ಸಮಾರಂಭ
Last Updated 20 ಮೇ 2019, 11:25 IST
ಅಕ್ಷರ ಗಾತ್ರ

ತುಮಕೂರು: 'ಭಾಷೆಯ ಮುಖಾಂತರ ಜನರನ್ನು ನೋಡಬೇಕು. ಕನ್ನಡ ಜನರನ್ನು ಉಳಿಸಿದರೆ ಕನ್ನಡ ಉಳಿಯುತ್ತದೆ. ಅವರನ್ನು ಉಳಿಸದೇ ಕನ್ನಡ ಉಳಿಸಿ ಎಂದು ಹೇಳಿದರೆ ಹೇಗೆ' ಎಂದು ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ವರ್ಷಾಚರಣೆ ಪ್ರಯುಕ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸೋಮವಾರ ಆಯೋಜಿಸಿದ್ಧ ಸುವರ್ಣ ಸಂಭ್ರಮ, ಸುವರ್ಣ ಸಾಹಿತ್ಯ ಸಭಾಂಗಣ ಉದ್ಘಾಟನೆ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಉದ್ಯೋಗ, ಆಡಳಿತ ಮತ್ತು ಶಿಕ್ಷಣದಲ್ಲಿ ಕನ್ನಡ ಉಳಿಸಿದರೆ ಕನ್ನಡ ತಾನಾಗಿಯೇ ಉಳಿಯುತ್ತದೆ’ ಎಂದು ಪ್ರೊ.ಬರಗೂರು ಹೇಳಿದರು.

‘ಅವಸಾನದ ಅಂಚಿನಲ್ಲಿರುವ ಭಾಷೆಗಳಲ್ಲಿ ಕನ್ನಡವೂ ಒಂದು ಕೆಲ ನವೆಂಬರ್ ತಿಂಗಳ ನಾಯಕರು ಹೇಳುತ್ತಾರೆ. ಆದರೆ, ಭಾಷಾ ವಿಜ್ಞಾನಿಗಳು ಸಮೀಕ್ಷೆ ಮಾಡಿರುವ ಪ್ರಕಾರ ಜಗತ್ತಿನಲ್ಲಿ ಅತ್ಯಂತ ಜೀವಂತವಿರುವ ಭಾಷೆಗಳಲ್ಲಿ ಕನ್ನಡವೂ ಒಂದಾಗಿದೆ. ಆಳಲು ಬಂದವರನ್ನು ಅರಗಿಸಿಕೊಂಡಿದೆ’ ಎಂದು ಹೇಳಿದರು.

‘ಸಾಹಿತ್ಯ ಪರಿಷತ್ತಿನ 50ನೇ ವರ್ಷದ ಸಂಭ್ರಮ ವಿಶೇಷವಾದುದು. ಪರಿಷತ್ ಸ್ಥಾಪನೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಮೂಲ ಕಾರಣರು’ ಎಂದು ನುಡಿದರು.

ಜಿಲ್ಲಾ ಲೇಖಕರ ಪುಸ್ತಕ ಕಣಜ ಉದ್ಘಾಟಿಸಿದ ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್. ಸಿದ್ಧೇಗೌಡ ಮಾತನಾಡಿ, ‘ಕನ್ನಡ ಉಳಿಸಲು ಎಲ್ಲರೂ ಹೊಣೆಗಾರಿಕೆ ಮೆರೆಯಬೇಕು. ಬೆಂಗಳೂರಿನ ನಂತರ ಹೊಡೆತ ಬೀಳುವುದೇ ತುಮಕೂರಿಗೆ. ಕನ್ನಡ ಉಳಿವಿಗೆ ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

ಕಸಾಪ ಹಿರಿಯ ಸದಸ್ಯರಿಗೆ, ಪದಾಧಿಕಾರಿಗಳಿಗೆ, ತಾಲ್ಲೂಕು ಘಟಕ ಮಾಜಿ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಅಧ್ಯಕ್ಷತೆವಹಿಸಿದ್ದರು.

ಕನ್ನಡ ಭವನ ಕಟ್ಟಡ ಸಮಿತಿ ಕಾರ್ಯಾಧ್ಯಕ್ಷ ಎಸ್.ನಾಗಣ್ಣ, ಸಾಹಿತಿ ಡಾ.ಕವಿತಾ ಕೃಷ್ಣ, ನಿವೃತ್ತ ಶಿಕ್ಷಕಿ ಪ್ರೇಮಾ ಮಲ್ಲಣ್ಣ, ನಿರ್ಮಿತಿ ಕೇಂದ್ರ ಯೋಜನಾ ವ್ಯವಸ್ಥಾಪಕ ಡಿ.ರಾಜಶೇಖರ್, ಗೌರವ ಕಾರ್ಯದರ್ಶಿ ಎಚ್.ಗೋವಿಂದಯ್ಯ ವೇದಿಕೆಯಲ್ಲಿದ್ದರು.

ಕೋಶಾಧ್ಯಕ್ಷ ಬಿ.ಮರುಳಯ್ಯ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಕೆ.ರವಿಕುಮಾರ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT