ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುದುರೆ ಬಿಟ್ಟಿದ್ದೇವೆ; ತಾಕತ್ತಿದ್ದರೆ ತಡೆಯಿರಿ? ಜೆಡಿಎಸ್‌ಗೆ ಸದಾನಂದಗೌಡ ಸವಾಲು

Last Updated 1 ಮಾರ್ಚ್ 2023, 14:32 IST
ಅಕ್ಷರ ಗಾತ್ರ

ತುಮಕೂರು: ‘ಧರ್ಮ ಸಂಸ್ಥಾಪನಾರ್ಥವಾಗಿ ಗ್ರಾಮಾಂತರ ಕ್ಷೇತ್ರದಲ್ಲಿ ನಡೆಯುತ್ತಿರುವ ಚುನಾವಣೆ ಎಂಬ ಅಶ್ವಮೇಧ ಯಾಗಕ್ಕೆ ಸುರೇಶ್‌ಗೌಡ ಹೆಸರಿನ ಕುದುರೆಯನ್ನು ಬಿಟ್ಟಿದ್ದೇವೆ. ತಾಕತ್ತು ಇದ್ದರೆ ಈ ಕುದುರೆ ಕಟ್ಟಿ ಹಾಕಲಿ’ ಎಂದು ಸಂಸದ ಡಿ.ವಿ.ಸದಾನಂದಗೌಡ ಅವರು ಜೆಡಿಎಸ್‌ಗೆ ಸವಾಲು ಹಾಕಿದರು.

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೆಬ್ಬೂರು, ಹೊನ್ನುಡಿಕೆ ಹೋಬಳಿ ಮಟ್ಟದ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಬಳ್ಳಗೆರೆಯಲ್ಲಿ ಬುಧವಾರ ಉದ್ಘಾಟಿಸಿ ಮಾತನಾಡಿದರು.

ಸುರೇಶ್‌ಗೌಡ ಶಾಸಕರಾಗಿದ್ದ 10 ವರ್ಷಗಳ ಅವಧಿಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ₹2 ಸಾವಿರ ಕೋಟಿಗೂ ಅಧಿಕ ಅನುದಾನ ತಂದು ರಸ್ತೆ, ಚರಂಡಿ, ಸಮುದಾಯ ಭವನ, ವಿದ್ಯುತ್ ಸಂಪರ್ಕ, ಶಾಲೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಆದರೆ ಈಗಿನ ಶಾಸಕರು ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ₹10 ಕೋಟಿ ಹಣವನ್ನು ಸರಿಯಾಗಿ ಬಳಕೆ ಮಾಡಿಕೊಂಡಿಲ್ಲ. ಕಾಮಗಾರಿ ಗುತ್ತಿಗೆದಾರರು ಕಮಿಷನ್ ಕೊಡಲಿಲ್ಲ ಎಂಬ ಕಾರಣಕ್ಕೆ ಕೆಲಸ ಮಾಡಲು ಬಿಟ್ಟಿಲ್ಲ ಎಂದು ಆರೋಪಿಸಿದರು.

ಜೆಡಿಎಸ್‍ನ ‘ಪಂಚರತ್ನ ಯಾತ್ರೆ’ ಪಂಚರ್ ಆಗಿದೆ. ಕಾಂಗ್ರೆಸ್‍ನ ‘ಪ್ರಜಾಧ್ವನಿ’ಗೆ ಉಸಿರೇ ಇಲ್ಲದಂತಾಗಿದೆ. ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಅವರದ್ದು ಭಿನ್ನ ಧ್ವನಿಯಾಗಿದೆ. ಮೂವರ ನಡುವೆಯೂ ಒಗ್ಗಟ್ಟು ಇಲ್ಲವಾಗಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ರವಿಶಂಕರ್, ‘ಗ್ರಾಮಾಂತರ ಕ್ಷೇತ್ರದಲ್ಲಿ ಸುರೇಶ್‌ಗೌಡ ಶಾಸಕರಾಗಿದ್ದ 2008– 2018ರ ನಡುವೆ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಹೊರತುಪಡಿಸಿದರೆ, ಕಳೆದ ಐದು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ’ ಎಂದು ಆರೋಪಿಸಿದರು.

ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಶಿವಪ್ರಸಾದ್, ಜಿಲ್ಲಾ ಉಪಾಧ್ಯಕ್ಷ ವೈ.ಎಚ್.ಹುಚ್ಚಯ್ಯ, ಮಂಡಲ ಅಧ್ಯಕ್ಷ ಶಂಕರ್, ಎಪಿಎಂಸಿ ಅಧ್ಯಕ್ಷ ಉಮೇಶಗೌಡ, ತುಮುಲ್ ನಿರ್ದೇಶಕ ರೇಣುಕಾಪ್ರಸಾದ್, ಬಿಜೆಪಿ ಮುಖಂಡರಾದ ರಾಜೇಗೌಡ, ರಾಮಸ್ವಾಮಿಗೌಡ, ಅಂದಾನಪ್ಪ, ನರಸಿಂಹಮೂರ್ತಿ, ಕುಮಾರ್, ಪ್ರಕಾಶ್, ಸಿದ್ದೇಗೌಡ, ವೈ.ಟಿ.ನಾಗರಾಜು, ಅರೆಕೆರೆ ರವಿ, ವಿಜಯಕುಮಾರ್, ಮಾಸ್ತಿಗೌಡ, ತಾರಾದೇವಿ, ವೆಂಕಟೇಶ್ ಇತರರು ಭಾಗವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಂಚೆ ರಾಮಚಂದ್ರಯ್ಯ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟೇಶ್ ಸೇರಿದಂತೆ ಹಲವರು ಬಿಜೆಪಿ ಸೇರ್ಪಡೆಯಾದರು.

**

‘ಗುಂಡಿ ಮುಚ್ಚಲು ಯೋಜನೆ ಬೇಕು’
ಗ್ರಾಮಾಂತರ ಕ್ಷೇತ್ರದಲ್ಲಿ 15 ವರ್ಷಗಳ ಹಿಂದೆ ನಿರ್ಮಿಸಿದ ರಸ್ತೆಗಳಲ್ಲಿ ಇಂದಿಗೂ ಗುಂಡಿಗಳು ಕಾಣಿಸುತ್ತಿಲ್ಲ. ಆದರೆ ಈಗಿನ ಶಾಸಕರ ಅವಧಿಯಲ್ಲಿ ನಿರ್ಮಿಸಿದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿಸಲು ಹೊಸ ಯೋಜನೆ ತರಬೇಕಿದೆ ಎಂದು ಮಾಜಿ ಶಾಸಕ ಬಿ.ಸುರೇಶ್‌ಗೌಡ ಅವರು ಶಾಸಕ ಡಿ.ಸಿ.ಗೌರಿಶಂಕರ್ ವಿರುದ್ಧ ವಾಗ್ದಾಳಿ ನಡೆಸಿದರು.

‘ಈ ಬಾರಿ ಶಾಸಕನಾದರೆ ನಾಗವಲ್ಲಿಗೆ ಪ್ರಥಮ ದರ್ಜೆ ಕಾಲೇಜು, ನರಸಾಪುರಕ್ಕೆ ಐಟಿಐ ಕಾಲೇಜು ಸೇರಿದಂತೆ ಕ್ಷೇತ್ರಕ್ಕೆ ಹಲವು ಹೊಸ ಯೋಜನೆಗಳನ್ನು ತರುತ್ತೇನೆ. ಇಡೀ ವಿಶ್ವವೇ ಕ್ಷೇತ್ರದತ್ತ ತಿರುಗಿ ನೋಡುವಂತೆ ಅಭಿವೃದ್ದಿ ಕೆಲಸಗಳನ್ನು ಮಾಡುತ್ತೇನೆ’ ಎಂದು ಭರವಸೆ ನೀಡಿದರು.

‘ನಾನು ಶಾಸಕನಾಗಿದ್ದ 10 ವರ್ಷಗಳ ಆಡಳಿತದಲ್ಲಿ ಕುಡಿಯುವ ನೀರು, ಶಾಲೆಗಳ ಉನ್ನತ್ತೀಕರಣ, ವಿದ್ಯುತ್ ಸ್ಥಾವರಗಳ ನಿರ್ಮಾಣ, ಹೆಬ್ಬೂರು– ಗೂಳೂರು ಏತ ನೀರಾವರಿ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT