ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದ್‌: ಎಂದಿನಂತೆ ಇರಲಿದೆ ಜನಜೀವನ

ಸ್ವಹಿತಾಸಕ್ತಿಗಾಗಿ ಬಂದ್‌ ಆರೋಪ, ಕನ್ನಡಪರ ಸಂಘಟನೆಗಳೇ ಬೆಂಬಲ ನೀಡಲು ಹಿಂದೇಟು
Last Updated 12 ಫೆಬ್ರುವರಿ 2020, 15:11 IST
ಅಕ್ಷರ ಗಾತ್ರ

ತುಮಕೂರು: ಸರೋಜಿನಿ ಮಹಿಷಿ ವರದಿಯ ಜಾರಿಗೆ ಆಗ್ರಹಿಸಿ ಕೆಲವು ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಗುರುವಾರ ಬಂದ್‌ಗೆ ಸ್ಥಳೀಯ ಸಂಘಟನೆಗಳು ಬೆಂಬಲ ನೀಡಿಲ್ಲ. ಶಾಲಾ, ಕಾಲೇಜುಗಳು, ಸಾರಿಗೆ ಬಸ್‌ಗಳು, ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಜನಜೀವನ ಸಾಮಾನ್ಯವಾಗಿರಲಿದೆ.

ಬಂದ್‌ ಕರೆಗೆ ಜಿಲ್ಲಾ ಕನ್ನಡ ಪರ ಸಂಘಟನೆಗಳಲ್ಲೇ ಅಸಮಾಧಾನವಿದ್ದು, ಜಿಲ್ಲೆಯ ಪ್ರಮುಖ ಕನ್ನಡಪರ ಸಂಘಟನೆಗಳಾದ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಶೆಟ್ಟಿ ಬಣ), ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ), ಜಯ ಕರ್ನಾಟಕ, ಕನ್ನಡ ಸೇನೆ ಸಂಘಟನೆಗಳು ಬಂದ್‌ಗೆ ಯಾವುದೇ ಬೆಂಬಲ ವ್ಯಕ್ತಪಡಿಸಿಲ್ಲ.

ಬಂದ್ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಶೆಟ್ಟಿ ಬಣ)ದ ಜಿಲ್ಲಾ ಘಟಕದ ಅಧ್ಯಕ್ಷ ರಘುರಾಮ್ ಮಾತನಾಡಿ, ‘ನಾವು ಸರೊಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಹಿಂದಿನಿಂದಲೂ ಹೋರಾಟ ನಡೆಸಿಕೊಂಡು ಬರುತ್ತಿದ್ದೇವೆ. ಆದರೆ, ಬೆಂಗಳೂರಿನ ಕೆಲ ಸಂಘಟನೆಗಳು ತಮ್ಮ ಸ್ವಹಿತಾಸಕ್ತಿಗೋಸ್ಕರ ಬಂದ್‌ಗೆ ಕರೆ ನೀಡಿವೆ. ಆದರೆ, ಈ ಬಂದ್‌ಗೆ ನಮ್ಮ ಯಾವುದೇ ಬೆಂಬಲ ಇಲ್ಲ’ ಎಂದು ತಿಳಿಸಿದರು.

ಕನ್ನಡ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಧನಿಯಾ ಕುಮಾರ್ ಪ್ರತಿಕ್ರಿಯಿಸಿ, ‘ಬಂದ್‌ಗೆ ನಮ್ಮ ಸಂಘಟನೆಯ ಯಾವುದೇ ಬೆಂಬಲವಿಲ್ಲ’ ಎಂದು ತಿಳಿಸಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹಮೂರ್ತಿ ಪ್ರತಿಕ್ರಿಯಿಸಿ, ‘ಬಂದ್‌ಗೆ ಸಂಘದ ನೈತಿಕ ಬೆಂಬಲವಿದೆ. ಆದರೆ, ಎಂದಿನಂತೆ ಸರ್ಕಾರಿ ನೌಕರರು ಕಾರ್ಯ ನಿರ್ವಹಿಸಲಿದ್ದಾರೆ’ ಎಂದು ತಿಳಿಸಿದರು.

ಸಿಐಟಿಯು ಜಿಲ್ಲಾ ಸಂಘಟನೆಯ ಅಧ್ಯಕ್ಷ ಮುಜೀಬ್ ಮಾತನಾಡಿ, ‘ಬಂದ್‌ ಕುರಿತು ನಾವು ಕೇವಲ ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳಲ್ಲಿ ಮಾತ್ರವೇ ಕೇಳುತ್ತಿದ್ದೇವೆ. ಆದರೆ, ಬಂದ್‌ಗೆ ಬೆಂಬಲ ಸೂಚಿಸುವಂತೆ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ. ಜಿಲ್ಲೆಯಲ್ಲಿ ಬಂದ್‌ನ ಸ್ವರೂಪವೇನು? ಯಾವ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದಾರೆ ಎಂಬ ಮಾಹಿತಿಯೂ ಇಲ್ಲ. ಹಾಗಾಗಿ ನಾವು ಈ ವಿಚಾರದಲ್ಲಿ ತಟಸ್ಥರಾಗಿದ್ದೇವೆ’ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ರಂಗಧಾಮಪ್ಪ ಪ್ರತಿಕ್ರಿಯಿಸಿ, ‘ಬಂದ್‌ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿಲ್ಲ. ಎಂದಿನಂತೆ ಕಾರ್ಯ ನಿರ್ವಹಿಸಲಿವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT