ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಎಲ್ಲೆಡೆ ಮೊಳಗಿತು ಕನ್ನಡದ ಕಹಳೆ

ಮಾತೃಭಾಷೆಯಲ್ಲಿ ಶಿಕ್ಷಣ ನೀಡಿದರೆ ಮಕ್ಕಳ ಕಲಿಕಾಮಟ್ಟ ವೃದ್ಧಿ: ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಮತ
Last Updated 2 ನವೆಂಬರ್ 2020, 3:05 IST
ಅಕ್ಷರ ಗಾತ್ರ

ತುಮಕೂರು: ನಗರ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಭಾನುವಾರ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದವರು, ಸಾಹಿತಿಗಳು, ಕವಿಗಳು, ಕನ್ನಡ ಹೋರಾಟಗಾರರಿಗೆ ನಮನ ಸಲ್ಲಿಸಲಾಯಿತು.

ಜಿಲ್ಲಾಡಳಿತ: ‘ಪೋಷಕರು ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಕೊಡಿಸಬೇಕು. ಇದರಿಂದ ಅವರ ‌‌ಕಲಿಕಾ ಮತ್ತು ಚಿಂತನಾ ಸಾಮರ್ಥ್ಯ ವೃದ್ಧಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ 65ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಯಾವ ಮಗು ಮಾತೃಭಾಷೆಯನ್ನು ಸಮರ್ಥವಾಗಿ ಬಳಸಬಲ್ಲದೋ ಆ ಮಗು ಇತರ ಭಾಷೆಗಳನ್ನು ಸುಲಲಿತವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಜಿಲ್ಲೆಯು ಕಲಾವಿದರ ತವರು. ಗುಬ್ಬಿ ವೀರಣ್ಣ, ನರಸಿಂಹರಾಜು, ಮಲ್ಲಪ್ಪ ಅವರಂತಹ ರಂಗಕರ್ಮಿಗಳು ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಅಧ್ಯಕ್ಷತೆವಹಿಸಿದ್ದರು. ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಜಿ.ಪಂ.ಸಿಇಒ ಶುಭಾ ಕಲ್ಯಾಣ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.‌ಚನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್, ಪಾಲಿಕೆ ಆಯುಕ್ತೆ ರೇಣುಕಾ, ತಹಶೀಲ್ದಾರ್ ಮೋಹನ್ ಕುಮಾರ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಪಾಲ್ಗೊಂಡಿದ್ದರು. ಕವಾಯಿತಿನಲ್ಲಿ ಪೊಲೀಸ್ ಇಲಾಖೆಯ 7 ತುಕಡಿಗಳು ಭಾಗವಹಿಸಿದ್ದವು.

ಕನ್ನಡ ಸಾಹಿತ್ಯ ಪರಿಷತ್ತು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ‌‌ಕೆ.ಪಿ.ಲಕ್ಷ್ಮಿಕಾಂತರಾಜೇ ಅರಸ್, ಮೆಳೆಹಳ್ಳಿ ದೇವರಾಜ್, ನಾಗಾರ್ಜುನ ಸಾಗ್ಗೆರೆ, ಕರಿಕೆರೆ ಪಾಲಾಕ್ಷ, ಸುಗುಣಾದೇವಿ, ಡಾ.ಅರುಂಧತಿ, ರಂಗಮ್ಮ ಹೊದೇಕಲ್, ಮರಿಯಾಂಬಿ, ಮಂಜುಳಾದೇವಿ, ಪಿ.ಉಮಾದೇವಿ ಕವನ ವಾಚಿಸಿದರು. ಪಾರ್ವತಮ್ಮ ರಾಜಕುಮಾರ್, ಗಂಗಲಕ್ಷ್ಮಿ, ಕಾವ್ಯ ಮತ್ತು ಸಂಗಡಿಗರು ಕನ್ನಡ ಗೀತೆ ಹಾಗೂ ನಾಡಗೀತೆಯನ್ನು ಹಾಡಿದರು.

ತುಮಕೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಿ.ಸಿ.ಶೈಲಾನಾಗರಾಜ್, ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಬಾ.ಹ.ರಮಾಕುಮಾರಿ ನಾಡು, ನುಡಿಯ ಕುರಿತು ಅಭಿಪ್ರಾಯ ಹಂಚಿಕೊಂಡರು. ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ರಾಕ್‍ಲೈನ್ ರವಿಕುಮಾರ್, ರಾಣಿ ಚಂದ್ರಶೇಖರ್ ಪಾಲ್ಗೊಂಡಿದ್ದರು.

ವಿಶ್ವವಿದ್ಯಾಲಯ: ತುಮಕೂರು ವಿಶ್ವವಿದ್ಯಾಲಯದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಮಾತನಾಡಿ, ಕನ್ನಡ ಚಾರಿತ್ರಿಕ ಹಿರಿಮೆ ಹೊಂದಿದ ಭಾಷೆ. ಶಾಸ್ತ್ರೀಯ ಸ್ಥಾನ ಪಡೆದಿದೆ ಎಂದರು.

ಈ ನೆಲದ ಭಾಷೆ, ಸಂಸ್ಕೃತಿ, ಸಾಹಿತ್ಯದ ಅಭಿವೃದ್ಧಿಗೆ ಅನೇಕ ಕವಿ, ಸುಧಾರಕರ ಶ್ರಮವಿದೆ. ಅವರನ್ನು ನೆನೆಯುವುದು ಮತ್ತು ಅವರ ಸಾಧನೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಉನ್ನತ ಶಿಕ್ಷಣದ ಕರ್ತವ್ಯ ಆಗಬೇಕು ಎಂದು
ಹೇಳಿದರು.

ಪರೀಕ್ಷಾಂಗ ಕುಲಸಚಿವ ಪ್ರೊ.ಎಂ.ಕೊಟ್ರೇಶ್, ಪ್ರಾಂಶುಪಾಲ ರಾಮಚಂದ್ರಪ್ಪ, ಪ್ರಕಾಶ ಭಜಂತ್ರಿ, ಸುದೀಪ್ ರವಿಕುಮಾರ್, ಲಕ್ಷ್ಮಿರಂಗಯ್ಯ ಇದ್ದರು.

ಶೇಷಾದ್ರಿಪುರಂ ಕಾಲೇಜು: ನಗರದ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ ಎಚ್‌.ಶ್ವೇತಾರಾಣಿ ಉಪನ್ಯಾಸಕರಿಗೆ ಕನ್ನಡ ಉಳಿಸುವ ಬಳಸುವ ಪ್ರತಿಜ್ಞಾವಿಧಿ ಬೋಧಿಸಿದರು. ಉಪನ್ಯಾಸಕ ಬಿ.ಎ.ವಾಸುದೇವ ಹಾಗೂ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.

ಪ್ರಯಾಣಿಕರ ವೇದಿಕೆ: ‘ನಮ್ಮ ತುಮಕೂರು-ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆ’ ಆಶ್ರಯದಲ್ಲಿ ನಗರದ ರೈಲು‌ ನಿಲ್ದಾಣ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಯೋಗದಲ್ಲಿ ರಾಜ್ಯೋತ್ಸವ ಆಚರಿಸಲಾಯಿತು. ನಾಡದೇವಿ ಪೂಜೆ ಸಲ್ಲಿಸಿದ ನಂತರ ವೇದಿಕೆ ಹಿರಿಯ ಉಪಾಧ್ಯಕ್ಷ ಪರಮೇಶ್ವರ್ ಹಾಗೂ ನಿಲ್ದಾಣದ ವ್ಯವಸ್ಥಾಪಕ ರಮೇಶ್ ಬಾಬು ನಾಡ‌ ಧ್ವಜಾರೋಹಣ ನೆರವೇರಿಸಿದರು. ಭಾಗ್ಯಲಕ್ಷ್ಮಿ ನಾಗರಾಜ್ ಹಾಗೂ ಸಂಜನ್ ನಾಗರಾಜ್ ನೇತೃತ್ವದಲ್ಲಿ ನಾಡಗೀತೆ ಸಾಮೂಹಿಕ ಗಾಯ‌ನ ನಡೆಯಿತು. ಕಾರ್ಯದರ್ಶಿ ಕರಣಂ ರಮೇಶ್ ಇದ್ದರು.

ಸಿದ್ಧಗಂಗಾ ಆಸ್ಪತ್ರೆ: ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‌ಡಾ.ಸಿ.ವಿ.ಸ್ವಾಮಿ ಕನ್ನಡ ಮಾತೆಯ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿದರು. ಕೋವಿಡ್‌ನಿಂದ ಗುಣಮುಖರಾದ ಶ್ರೀನಿವಾಸ ಮೂರ್ತಿ ಧ್ವಜಾರೋಹಣ ನೆರವೇರಿಸಿದರು. ಡಾ.ಶಾಲಿನಿ, ಆಸ್ಪತ್ರೆಯ ಕಾರ್ಯನಿರ್ವಹಣಾಧಿಕಾರಿ ಡಾ.ಸಂಜೀವ್ ಕುಮಾರ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT