ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದರೈಸ್ತ್ರೀ’ ಪರ ಹೋರಾಟದ ನೆನಪು...

Last Updated 18 ಅಕ್ಟೋಬರ್ 2019, 10:30 IST
ಅಕ್ಷರ ಗಾತ್ರ

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಮತ್ತು ಕೆ.ಬಿ.ಸಿದ್ದಯ್ಯ ಬಹುಕಾಲದ ಒಡನಾಡಿಗಳು. ದಲಿತ ರೈತ ಹಾಗೂ ಸ್ತ್ರೀಯರ ಪರವಾಗಿ ಸಿದ್ದಯ್ಯನಡೆಸಿದ ಹೋರಾಟಗಳು ಅನೇಕ. ‘ದರೈಸ್ತ್ರೀ’ (ದಲಿತ ರೈತ ಹಾಗೂ ಸ್ತ್ರೀ) ಎನ್ನುವು ಬಿರುದು ಸಹ ಅವರಿಗೆ ಇತ್ತು ಎಂದು ನೆನಪಿಸಿಕೊಳ್ಳುತ್ತಾರೆ ಕುಂದೂರು ತಿಮ್ಮಯ್ಯ

***

ತುಮಕೂರು: ‘ಈ ನಾಡ ಮಣ್ಣಿನಲ್ಲಿ ಮಣ್ಣಾದ ಜನಗಳ ಕತೆಯ, ಈ ನಾಡಿನ ಮಣ್ಣಿನಲ್ಲಿ ಹೂವಾಗಿ ಅರಳಿದೋರ, ಹಣ್ಣಿನ ಗಿಡಗಳಲ್ಲಿ ಹಣ್ಣಾಗಿ ಉರುಳಿದೋರ ಕಥೆಯನ್ನು ಹೇಳುತ್ತೀನಿ ಕಿವಿಗೊಟ್ಟು ಕೇಳಿರಣ್ಣಾ...’

ಕುಣಿಗಲ್‌ ತಾಲ್ಲೂಕು ದಾಸನಪುರದಲ್ಲಿ ನಡೆದ ಚಿಕ್ಕತಿಮ್ಮಯ್ಯ ಕೊಲೆ ಪ್ರಕರಣ ವಿವರಿಸುವ ಈ ಹಾಡು ದಲಿತ ಸಂಘರ್ಷ ಸಮಿತಿಯ ರಾಷ್ಟ್ರಗೀತೆಯಂತಿದೆ. ಇಂದಿಗೂ ಅನೇಕ ದಲಿತಪರ ಹೋರಾಟಗಳಿಗೆ ಈ ಗೀತೆಯೇ ಸ್ಫೂರ್ತಿ.

ಚಿಕ್ಕತಿಮ್ಮಯ್ಯ ಕೊಲೆ ಪ್ರಕರಣದ ಸಮಗ್ರ ಅಧ್ಯಯನ ಮಾಡಿ ಹಾಡು ಕಟ್ಟಿದ್ದ ಸಾಹಿತಿ ಕೆ.ಬಿ. ಸಿದ್ದಯ್ಯ. ದೌರ್ಜನ್ಯದ ಪರಿಯನ್ನು ಪರಿಚಯಿಸುತ್ತಲೇ ಆ ಮೂಲಕವೇ ತುಮಕೂರು ಜಿಲ್ಲೆಯಲ್ಲಿ ದಲಿತ, ರೈತ ಮತ್ತು ಮಹಿಳೆ ಪರ ಹೋರಾಟಕ್ಕೆ ಅಡಿಪಂಕ್ತಿ ಹಾಕಿಕೊಟ್ಟರು.

ಈ ಘಟನೆ ಖಂಡಿಸಿ ನಡೆದ ಹೋರಾಟದಲ್ಲಿ ಸಿದ್ದಯ್ಯ ಅವರೊಂದಿಗೆ ತುಳಿತಕ್ಕೆ ಒಳಗಾದ ನೂರಾರು ಜನರು ಹೋರಾಟದ ಹಾದಿ ತುಳಿದರು. ಜಿಲ್ಲೆಯಲ್ಲಿ ದಲಿತ ಚಳುವಳಿಗೆ ಜೀವ ತುಂಬಿದರು. ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿಸಂಘಟಿಸಲು ಬಿ. ಕೃಷ್ಣಪ್ಪ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿದರು.

ಮಾಲೂರು ತಾಲ್ಲೂಕಿನ ಟೇಕಲ್‌ ಹೋಬಳಿಯ ಹುಣಸಿಕಟ್ಟೆಯಲ್ಲಿ ಕುಂಬಾರ ಸಮುದಾಯದ ಮಹಿಳೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಹಾಗೂ ಮಗಳ ಮೇಲಿನ ಅತ್ಯಾಚಾರ ಪ್ರಶ್ನಿಸಿದ ತಂದೆ ಕೊಲೆ ಆಗಿತ್ತು. ಈ ಘಟನೆ ಸಿದ್ದಯ್ಯ ಅವರು ಹೆಣ್ಣು ಮಕ್ಕಳ ಪರ ಹೋರಾಟಕ್ಕೆ ಧುಮಕಲು ಕಾರಣವಾಯಿತು. ಟೇಕಲ್‌ನಿಂದ ಬೆಂಗಳೂರಿನವರೆಗೆ ಕಾಲ್ನಡಿಗೆ ಜಾಥಾ ಆರಂಭಿಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದರು. ಸಾವಿರಾರು ಸಮಾನ ಮನಸ್ಕರು ಇವರೊಂದಿಗೆ ಹೆಜ್ಜೆ ಹಾಕಿದ್ದರು.

ಬೆಂಡಿಗೇರಿಯಲ್ಲಿ ಐವರು ದಲಿತರಿಗೆ ಮಲ ತಿನ್ನಿಸಿದ್ದನ್ನು ಪ್ರತಿಭಟಿಸಿ ನಡೆದ ಹೋರಾಟದ ನೇತೃತ್ವ ವಹಿಸಿದ್ದರು. ಆಂಧ್ರಪ್ರದೇಶದ ಕಾರಂಚೇಡುವಲ್ಲಿ ನಡೆದ ದಲಿತ ಹತ್ಯೆ ವಿರುದ್ಧವೂ ಧ್ವನಿ ಎತ್ತಿದ್ದರು. ರಾಜ್ಯದಲ್ಲಿ ನಡೆಯುವ ಬಹುತೇಕ ದಲಿತ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು.

ರೈತ ಚಳುವಳಿಗಳಲ್ಲೂ ಸಕ್ರಿಯರಾಗಿದ್ದ ಸಿದ್ದಯ್ಯ, ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಎಲ್ಲ ಹೋರಾಟಗಳಿಗೂ ಜೊತೆಯಾಗಿದ್ದರು.

ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನೀಲಗಿರಿ ಮರಗಳನ್ನು ಬೆಳೆಸಲು ಉತ್ತೇಜನ ನೀಡಿದ್ದನ್ನು ವಿರೋಧಿಸಿ ಮಧುಗಿರಿ ಮತ್ತು ಕೊರಟಗೆರೆಯಲ್ಲಿ ರೈತ ಸಂಘ ಹಾಗೂ ದಲಿತ ಸಂಘರ್ಷ ಸಮಿತಿಯ ಜೊತೆಗೂಡಿ ಹೋರಾಟ ಸಂಘಟಿಸಿದ್ದರು. ಭೂ ಸುಧಾರಣೆ ಹೋರಾಟಗಳಲ್ಲೂ ಧ್ವನಿ ಎತ್ತಿದ್ದರು. ಆಗ ತಿಂಗಳುಗಟ್ಟಲೆ ಧರಣಿ ಕುಳಿತು ಭೂಮಿಯ ಒಡೆತನ ಎಲ್ಲರಿಗೂ ದಕ್ಕಬೇಕೆಂದು ಪ್ರತಿಪಾದಿಸಿದ್ದರು. ಜಿಲ್ಲೆಯ ಎಲ್ಲ ಭೂ ಹೋರಾಟಗಳಲ್ಲೂ ಮುಂಚೂಣಿ ನಾಯಕರಾಗಿದ್ದರು. ಅವರನ್ನು ‘ದರೈಸ್ತ್ರೀ’ ಹೋರಾಟಗಾರ ಎಂದೇ ಗುರುತಿಸಲಾಗುತ್ತಿತ್ತು.

ತುರುವೇಕೆರೆ ತಾಲ್ಲೂಕು ದುಂಡಾ ಗ್ರಾಮದಲ್ಲಿ ದಲಿತರ ಮೇಲಿನ ಸಾಮಾಜಿಕ ಬಹಿಷ್ಕಾರ ಖಂಡಿಸಿ ನಡೆದ ಕಾಲ್ನಡಿಗೆ ಜಾಥಾ ನಡೆಸಿದ್ದರು. ಗುಬ್ಬಿ ತಾಲ್ಲೂಕು ಬಿದಿರೆ ಕಾವಲ್‌ನಲ್ಲಿ ಸರ್ಕಾರ ಎಚ್‌ಎಎಲ್‌ ಸ್ಥಾಪಿಸಿ ದಲಿತರ ಜಮೀನು ವಶಪಡಿಸಿಕೊಳ್ಳಲು ಹವಣಿಸಿದಾಗ ಇದನ್ನು ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಿ ಕೃಷಿ ಜಮೀನು ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗಬಾರದು ಎನ್ನುವ ಅವರ ಗಟ್ಟಿ ನಿಲುವನ್ನು ಪ್ರತಿಪಾದಿಸಿದ್ದರು.

ಮೈಸೂರಿನಲ್ಲಿ ವಿದ್ಯಾರ್ಥಿ ಜೀವನದಿಂದ ಆರಂಭವಾದ ಸಿದ್ದಯ್ಯ ಅವರ ಹೋರಾಟದ ಬದುಕು ಎ.ಜೆ. ಸದಾಶಿವ ಆಯೋಗದ ವರದಿಯನ್ವಯ ಒಳ ಮೀಸಲಾತಿ ಜಾರಿಯಾಬೇಕು ಎನ್ನುವವರೆಗೂ ಅಚಲವಾಗಿಯೇ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT