ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಾಣ ಮಾನವೀಕರಿಸಿದ ಸಿದ್ದಯ್ಯ

ಬಂಡಾಯ ಸಾಹಿತ್ಯ ಸಂಘಟನೆಯಿಂದ ‘ಕೆ.ಬಿ.ಸಿದ್ದಯ್ಯ ಕಾವ್ಯಗೌರವ’ ಕಾರ್ಯಕ್ರಮದಲ್ಲಿ ಬರಗೂರು ರಾಮಚಂದ್ರಪ್ಪ ಅಭಿಮತ
Last Updated 5 ಡಿಸೆಂಬರ್ 2019, 9:29 IST
ಅಕ್ಷರ ಗಾತ್ರ

ತುಮಕೂರು: ‘ಕೆ.ಬಿ.ಸಿದ್ದಯ್ಯ ಅವರ ಕಾವ್ಯದಲ್ಲಿ ಸಾಮಾಜಿಕ ನ್ಯಾಯ ಇದೆ. ಅವರ ಖಂಡಕಾವ್ಯದಲ್ಲಿ ಕೆಂಡವಿದೆ. ವಿಭಿನ್ನ ವಸ್ತು ಮತ್ತು ವಿನ್ಯಾಸದ ಮೂಲಕ ಕಾವ್ಯಗಳನ್ನು ಕಟ್ಟಿದರು’ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ನಗರದಲ್ಲಿ ಬುಧವಾರ ಬಂಡಾಯ ಸಾಹಿತ್ಯ ಸಂಘಟನೆ ಮತ್ತು ಕನ್ನಡ ಅಧ್ಯಾಪಕರ ಒಕ್ಕೂಟವು ಹಮ್ಮಿಕೊಂಡಿದ್ದ ‘ಕೆ.ಬಿ.ಸಿದ್ದಯ್ಯ ಕಾವ್ಯಗೌರವ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸಿದ್ದಯ್ಯ ಅವರ ಖಂಡಕಾವ್ಯದಲ್ಲಿ ಪುರಾಣ ಪ್ರಸಂಗ, ಜನಪದ, ಐತಿಹ್ಯದ ಜತೆಗೆ ಸಮಕಾಲೀನತೆ ಇದೆ. ನಮ್ಮಲ್ಲಿ ಪುರಾಣಗಳನ್ನು ಗರ್ಭಗುಡಿಯಲ್ಲಿ ಇರಿಸಿ ಪೂಜೆ ಮಾಡುವ ಗರ್ಭಗುಡಿ ಚಿಂತಕರು ಇದ್ದಾರೆ. ಮತ್ತೆ ಪುರಾಣ ಮತ್ತು ಪುರಾಣ ಕಾವ್ಯಗಳನ್ನು ಪೂರ್ಣವಾಗಿ ನಿರಾಕರಣೆ ಮಾಡುವ ಗರ್ಭಪಾತ ಚಿಂತಕರೂ ಇದ್ದಾರೆ. ಸಿದ್ದಯ್ಯ ಈ ಎರಡನ್ನೂ ಮಾಡಲಿಲ್ಲ’ ಎಂದು ವಿಶ್ಲೇಷಿಸಿದರು.

ಇವುಗಳನ್ನು ಇಟ್ಟುಕೊಂಡೇ ದಮನಿತರ ಸಾಮಾಜಿಕ, ಚಾರಿತ್ರಿಕ ಶೋಧ ನಡೆಸಿದರು. ಐತಿಹ್ಯ, ಪುರಾಣಗಳನ್ನು ಮತ್ತೆ ಕಟ್ಟಿಕೊಡುವ ಮೂಲಕ ಪುರಾಣಗಳನ್ನು ಮಾನವೀಕರಣಗೊಳಿಸಿದರು ಎಂದು ಹೇಳಿದರು.

ಪುರಾಣದ ಪರಿವೇಷವಿರುವ ಸಮಕಾಲೀನ ಪರಿಭಾಷೆಯ ಕಾವ್ಯ ಸಿದ್ದಯ್ಯನವರದ್ದು. ಅಲ್ಲಮ, ಬುದ್ಧನನ್ನು ಕ್ಲಿಷ್ಟಗೊಳಿಸುತ್ತಿದ್ದೇವೆ. ಆದರೆ ಸಿದ್ದಯ್ಯ ಅವತ್ತನ್ನು ಇವತ್ತಾಗಿಸಿದ್ದಾರೆ ಎಂದು ಪ್ರತಿಪಾದಿಸಿದರು.

‘ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗ ನಾನು ದೇವರಾಜ ಅರಸು ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷನಾಗಿದ್ದೆ. ಆಗ ನಾನು ಭೂ ಸುಧಾರಣೆಗಾಗಿ ಕೆಲಸ ಮಾಡಿದ ಕೊಣಂದೂರು ಲಿಂಗಪ್ಪ ಅವರಿಗೆ ಪ್ರಶಸ್ತಿ ಕೊಡಬೇಕು ಎಂದು ಕೊಂಡಿದ್ದೆ. ಆ ಆಯ್ಕೆ ಸಮಿತಿಯಲ್ಲಿ ಸಿದ್ದಯ್ಯ ಸದಸ್ಯರಾಗಿದ್ದರು. ನನ್ನ ಮಾತಿಗೆ ಸಹಮತ ವ್ಯಕ್ತಪಡಿಸಿದರು’ ಎಂದರು.

‘ಲಿಂಗಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿದ್ದಯ್ಯ ಬಿಟ್ಟರೆ ಉಳಿದ ಯಾವ ಸದಸ್ಯರೂ ಹಾಜರಾಗಿರಲಿಲ್ಲ’ ಎಂದು ನೆನಪು ಮಾಡಿಕೊಂಡರು.

ಸಿದ್ದಯ್ಯ ಅವರ ಕಾವ್ಯದ ಕುರಿತು ಮಾತನಾಡಿದ ಲೇಖಕ ಕೆ.ಪಿ.ನಟರಾಜ್, ‘ಸಮಾಜೋ ಅಧ್ಯಾತ್ಮ ಪಯಣವನ್ನು ಸಿದ್ದಯ್ಯ ಪ್ರತಿಪಾದಿಸಿದರು. ಏರಲಾರದ ಬೆಟ್ಟ ಮತ್ತು ಹೋಗಲಾರದ ಕಾಡಿನಂತೆ ಅವರ ಖಂಡಕಾವ್ಯ’ ಎಂದರು.

ಲೇಖಕಿ ತಾರಿಣಿ ಶುಭದಾಯಿನಿ, ‘ಕೆ.ಬಿ., ಬುದ್ಧನನ್ನು ಆವಾಹಿಸಿಕೊಂಡವರು. ತಮ್ಮ ಕಾವ್ಯದಲ್ಲಿಯೂ ಅದನ್ನು ಅನುಸಂಧಾನ ಮಾಡಲು ಪ್ರಯತ್ನಿಸಿದರು. ‘ದಕ್ಲದೇವಿ ಕಥನ’ದ ಮೂಲಕ ಹೆಣ್ಣು ಮತ್ತು ದಲಿತ ಲೋಕದ ಕಥನವನ್ನು ಶೋಧಿಸಲು ಮುಂದಾದರು’ ಎಂದು ಹೇಳಿದರು.

ಡಾ.ಅರುಂಧತಿ, ತುಮಕೂರು ವಿಶ್ವವಿದ್ಯಾಲಯದ ಕುಲಪತಿ ವೈ.ಎಸ್.ಸಿದ್ದೇಗೌಡ ಮಾತನಾಡಿದರು.

ಜಿಲ್ಲೆಯ ಮೊದಲ ಸಂಚಾಲಕ
ಸಿದ್ದಯ್ಯ ಇದೇ ಕಾಲೇಜಿನಲ್ಲಿ (ಇಂದಿನ ತುಮಕೂರು ವಿವಿ ಕಾಲೇಜು) ನನ್ನ ವಿದ್ಯಾರ್ಥಿ ಆಗಿದ್ದವರು. ಬಂಡಾಯ ಸಾಹಿತ್ಯ ಸಂಘಟನೆ ಆರಂಭವಾದಾಗ ಜಿಲ್ಲೆಯ ಮೊದಲ ಸಂಚಾಲಕರಾಗಿ ಕೆಲಸ ಮಾಡಿದವರು ಎಂದು ಬರಗೂರು ಸ್ಮರಿಸಿದರು.

‘ಈ ಕಾರಣಕ್ಕೆ ಸಂಘಟನೆಯಿಂದ ಕಾವ್ಯ ಗೌರವ ಕೊಡುವುದು ನಮ್ಮ ಕರ್ತವ್ಯ. ಸಂಘಟನೆ ಮೂಲಕ ನನ್ನ ಮತ್ತು ಅವರ ಸಂಬಂಧ ಆರಂಭವಾಯಿತು’ ಎಂದರು.

ತಾಯಿ ತೀರಿದಾಗ; ಕಿ.ರಂ ಸತ್ತಾಗ ಕಣ್ಣೀರು
‘ಅವರು ತಮ್ಮ ಬರಹಗಳನ್ನು ನನಗೆ ಓದಲು ಹೇಳುತ್ತಿದ್ದರು. ನಿಮ್ಮ ಬರವಣಿಗೆ ಅರ್ಥವಾಗಲ್ಲ ಅಂದರೆ ನಿನಗೆ ಗೊತ್ತಾಗುವಷ್ಟು ಓದು ಎನ್ನುತ್ತಿದ್ದರು. ಓದುವಾಗ ತಪ್ಪಾದಾಗ ನಿನಗೆ ಇಂಗ್ಲಿಷೂ ಬರಲ್ಲ ಕನ್ನಡವೂ ಬರಲ್ಲ’ ಎಂದು ನೆನಪು ಮಾಡಿಕೊಂಡರು ಸಿದ್ದಯ್ಯ ಅವರ ಪತ್ನಿ ಗಂಗರಾಜಮ್ಮ.

‘ತಮ್ಮ ಬದುಕಿನಲ್ಲಿ ಅವರು ಎರಡು ಬಾರಿ ಮಾತ್ರ ಕಣ್ಣೀರು ಹಾಕಿದ್ದಾರೆ. ಒಂದು ಅವರ ತಾಯಿ ತೀರಿಕೊಂಡಾಗ ಮತ್ತೆ ಕಿ.ರಂ.ನಾಗರಾಜ್ ಮೃತಪಟ್ಟಾಗ’ ಎಂದು ಸಿದ್ದಯ್ಯ ಮತ್ತು ತಮ್ಮ ದಾಂಪತ್ಯದ ಬದುಕಿನ ಕೆಲವು ನೆನಪುಗಳನ್ನು ಹಂಚಿಕೊಂಡರು.

ಹೇಮಾವತಿ ಹೋರಾಟಕ್ಕೆ ಬೆಂಬಲ
ಶಿರಾ ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನದಿ ನೀರನ್ನು ಸೂಕ್ತ ಪ್ರಮಾಣದಲ್ಲಿ ಹರಿಸದಿರುವುದನ್ನು ವಿರೋಧಿಸಿ ತಾಲ್ಲೂಕಿನ ರೈತರು ನಡೆಸುತ್ತಿರುವ ಹೋರಾಟಕ್ಕೆ ನನ್ನ ಬೆಂಬಲ ಇದೆ ಎಂದು ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.

ನೀರಾವರಿ ದೃಷ್ಟಿಯಿಂದ ತಾಲ್ಲೂಕು ಸಮೃದ್ಧ ಪ್ರದೇಶವಲ್ಲ. ಮಳೆ ಆಶ್ರಿತ ಕೃಷಿ ಭೂಮಿ ಹೆಚ್ಚಿದೆ. ಆದ್ದರಿಂದ ಈ ಪ್ರದೇಶದಲ್ಲಿ ಕೆರೆಗಳೇ ಜೀವಜಲ. ಆದ್ದರಿಂದ ಸಾಕಷ್ಟು ಕೆರೆಗಳಿಗೆ ಹೇಮಾವತಿ ನೀರು ಹರಿಸಬೇಕು. ಆದ್ದರಿಂದ ಹೇಮಾವತಿ ನದಿ ನೀರಿನ ಹೋರಾಟಕ್ಕೆ ನನ್ನ ಬೆಂಬಲ ಸದಾ ಇರುತ್ತದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT