ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಿಗಲ್: ಮಂಡಿಕೀಲು ಶಸ್ತ್ರಚಿಕಿತ್ಸೆ ಮಾಡಿದ ಶಾಸಕ ಡಾ.ರಂಗನಾಥ್‌

Published 27 ಜೂನ್ 2023, 14:21 IST
Last Updated 27 ಜೂನ್ 2023, 14:21 IST
ಅಕ್ಷರ ಗಾತ್ರ

ಕುಣಿಗಲ್ (ತುಮಕೂರು): ಕೀಲು ನೋವಿನಿಂದ ಬಳಲುತ್ತಿದ್ದ ಕುಣಿಗಲ್‌ ತಾಲ್ಲೂಕಿನ ಕುಂದೂರು ಗ್ರಾಮದ ಆಶಾ (42) ಎಂಬುವರಿಗೆ ಕೀಲು ಮತ್ತು ಮೂಳೆ ರೋಗ ತಜ್ಞರೂ ಆಗಿರುವ ಕ್ಷೇತ್ರದ ಶಾಸಕ ಡಾ. ರಂಗನಾಥ್ ತಮ್ಮ ವೈದ್ಯ ಮಿತ್ರರೊಂದಿಗೆ ಸೇರಿ ಸೋಮವಾರ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಪತಿ ಅನಾರೋಗ್ಯ ಪೀಡಿತರಾದ ಕಾರಣ ಇಬ್ಬರು ಮಕ್ಕಳ ಪೋಷಣೆಯ ಹೊಣೆ ಆಶಾ ಅವರ ಮೇಲಿದೆ. ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಅವರು, ಹತ್ತು ವರ್ಷದ ಹಿಂದೆ ಮಂಡಿ ಕೀಲು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಈಗ ಮತ್ತೆ ತೀವ್ರ ನೋವು ಕಾಣಿಸಿಕೊಂಡಿತ್ತು.

ಕೀಲು ತಪ್ಪಿದ (ಡಿಸ್‌ಲೊಕೇಟ್‌) ಕಾರಣ ಮತ್ತೆ ಶಸ್ತ್ರಚಿಕಿತ್ಸೆ ಅನಿವಾರ್ಯ. ಅದಕ್ಕೆ ₹3 ಲಕ್ಷ ವೆಚ್ಚವಾಗುತ್ತದೆ ಎಂದು ವೈದ್ಯರು ಹೇಳಿದ್ದರು.  ಹಣ ಹೊಂದಿಸಲಾಗದ ಕಾರಣ ಆಶಾ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರಲಿಲ್ಲ.ಈ ವಿಷಯವನ್ನು ಕುಂದೂರು ಗ್ರಾಮದ ಮುಖಂಡ ವಸಂತ್ ಕುಮಾರ್ ಎಂಬುವರು ರಂಗನಾಥ್ ಅವರ ಗಮನಕ್ಕೆ ತಂದಿದ್ದರು.

‘ವಿಶೇಷ ಪ್ರಕರಣಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಸಹಕಾರೊಂದಿಗೆ ಶಸ್ತ್ರಚಿಕಿತ್ಸೆ ನಡೆಸಲು ಕಾನೂನಿನಲ್ಲಿ ಅವಕಾಶವಿದೆ. ಹಾಗಾಗಿ ಬೌರಿಂಗ್‌ ಆಸ್ಪತ್ರೆಯ ನಿರ್ದೇಶಕ ಮನೋಜ್‌ ಅವರ ಸಲಹೆ ಮೇರೆಗೆ ಡಾ.ದೀಪಕ್‌ ಜೊತೆಗೂಡಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ’ ಎಂದು ಡಾ.ರಂಗನಾಥ್ ‘ಪ್ರಜಾವಾಣಿ’ಗೆ ಹೇಳಿದರು.

‘ಕುಣಿಗಲ್‌ ತಾಲ್ಲೂಕಿನಲ್ಲಿ 50ಕ್ಕೂ ಹೆಚ್ಚು ಮಂದಿಗೆ ಕೀಲು ಸಂಬಂಧಿತ ಎರಡನೇ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಸರ್ಕಾರದ ಉಚಿತ ಚಿಕಿತ್ಸಾ ಯೋಜನೆಯಲ್ಲಿ ಮೊದಲ ಬಾರಿಗೆ ಮಾತ್ರ ಶಸ್ತ್ರಚಿಕಿತ್ಸೆಗೆ ಅವಕಾಶವಿದೆ. ಎರಡನೇ ಶಸ್ತ್ರಚಿಕಿತ್ಸೆಗಾಗಿ ರಾಜ್ಯದಲ್ಲಿ 50 ಸಾವಿರ ರೋಗಿಗಳಿದ್ದಾರೆ. ಸರ್ಕಾರ ಈ ನಿಯಮಗಳನ್ನು ಮರು ಪರಿಶೀಲನೆ ಮಾಡಬೇಕಿದೆ. ಈ ಬಗ್ಗೆ ಸದನದಲ್ಲಿ ದನಿ ಎತ್ತಲಾಗುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT