ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಅಪಘಾತ ಚಿಕಿತ್ಸಾ ಕೇಂದ್ರ ಇದ್ದರೂ ಬೆಂಗಳೂರಿಗೆ ಅಲೆಯುವುದು ತಪ್ಪಿಲ್ಲ

ಗಾಯಾಳುಗಳ ಪರದಾಟ; ಸಿಗದ ತುರ್ತು ಚಿಕಿತ್ಸೆ: ₹56 ಕೋಟಿ ವೆಚ್ಚದಲ್ಲಿ ಟ್ರಾಮಾ ಕೇರ್‌ ಸೆಂಟರ್‌ ನಿರ್ಮಾಣ
Published 6 ಡಿಸೆಂಬರ್ 2023, 5:08 IST
Last Updated 6 ಡಿಸೆಂಬರ್ 2023, 5:08 IST
ಅಕ್ಷರ ಗಾತ್ರ

ತುಮಕೂರು: ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ಅಪಘಾತ ಚಿಕಿತ್ಸಾ ಕೇಂದ್ರ (ಟ್ರಾಮಾ ಕೇರ್‌ ಸೆಂಟರ್) ಗಾಯಗಳಿಗೆ ಕಟ್ಟು ಕಟ್ಟಲು, ಮುಲಾಮು ಹಚ್ಚಲು ಮಾತ್ರ ಸೀಮಿತವಾಗಿದೆ. ಜಿಲ್ಲೆಯ ಗಾಯಾಳುಗಳು ಬೆಂಗಳೂರಿಗೆ ಹೋಗುವುದು ಮಾತ್ರ ತಪ್ಪಿಲ್ಲ.

ಜಿಲ್ಲಾ ಆಸ್ಪತ್ರೆ ಒಂದು ರೀತಿಯಲ್ಲಿ ಅಂಚೆ ಕಚೇರಿಯಂತಾಗಿದೆ. ಸ್ವಲ್ಪ ಗಂಭೀರ ಪ್ರಕರಣಗಳು ಕಂಡು ಬಂದ ಕೂಡಲೇ ರೋಗಿಗಳನ್ನು ಬೆಂಗಳೂರು ಕಡೆಗೆ ಸಾಗಹಾಕಲಾಗುತ್ತಿದೆ. ಅಪಘಾತದಲ್ಲಿ ಗಾಯಗೊಂಡವರಿಗೆ ತುರ್ತು ಸಮಯದಲ್ಲಿ ಚಿಕಿತ್ಸೆ ನೀಡುವ ಉದ್ದೇಶದಿಂದ ಆರಂಭಿಸಿರುವ ಅಪಘಾತ ಚಿಕಿತ್ಸಾ ಕೇಂದ್ರದ ಉದ್ದೇಶವೇ ಈಡೇರಿಲ್ಲ. ಆಸ್ಪತ್ರೆ ಆರಂಭಕ್ಕೂ ಮುನ್ನ ಇದ್ದ ಸ್ಥಿತಿಯೇ ಈಗಲೂ ಮುಂದುವರಿದಿದೆ. ಅಗತ್ಯ ಸೇವೆಗಾಗಿ ಬೆಂಗಳೂರಿಗೆ ಹೋಗುವುದು ಅನಿವಾರ್ಯವಾಗಿದೆ.

ಪ್ರತಿ ನಿತ್ಯ ಸುಮಾರು 150ರಿಂದ 200 ಜನರು ಟ್ರಾಮಾ ಸೆಂಟರ್‌ಗೆ ದಾಖಲಾಗುತ್ತಿದ್ದಾರೆ. ಅವರಲ್ಲಿ ಕೈ, ಕಾಲು ಮುರಿದುಕೊಂಡವರು, ಸಣ್ಣ–ಪುಟ್ಟ ಗಾಯಗಳಾದವರನ್ನು ಮಾತ್ರ ಕೇಂದ್ರದಲ್ಲಿ ಉಳಿಸಿ ಕೊಳ್ಳಲಾಗುತ್ತಿದೆ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ, ಕ್ಲಿಷ್ಟಕರ ಸನ್ನಿವೇಶದಲ್ಲಿ ಇರುವವರನ್ನು ತಕ್ಷಣವೇ ಬೆಂಗಳೂರು ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ.

ಟ್ರಾಮಾ ಕೇರ್‌ ಸೆಂಟರ್‌ ಅನ್ನು ಎರಡೆರಡು ಬಾರಿ ಉದ್ಘಾಟಿಸಲಾಗಿತ್ತು. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲ ಬಾರಿಗೆ ಕೇಂದ್ರಕ್ಕೆ ಚಾಲನೆ ನೀಡಿದ್ದರು. ಇದಾಗಿ 6 ತಿಂಗಳು ಕಳೆದ ನಂತರ ಸೆ. 20ರಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಮತ್ತೊಮ್ಮೆ ಕೇಂದ್ರ ಉದ್ಘಾಟಿಸಿದ್ದರು. ಎರಡು ಸಲ ಉದ್ಘಾಟನೆಯಾದರೂ ಈವರೆಗೆ ಪೂರ್ಣಪ್ರಮಾಣದಲ್ಲಿ ಕಾರ್ಯ ನಿರ್ವಹಣೆ ಸಾಧ್ಯವಾಗಿಲ್ಲ.

ಸ್ಮಾರ್ಟ್‌ ಸಿಟಿ ಯೋಜನೆಯಡಿ ₹56 ಕೋಟಿ ವೆಚ್ಚದಲ್ಲಿ ಚಿಕಿತ್ಸಾ ಕೇಂದ್ರ ನಿರ್ಮಿಸಲಾಗಿದ್ದು, ಅತ್ಯಾಧುನಿಕ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ‘ಇಲ್ಲಿಗೆ ಬಂದವರಿಗೆ ಎಲ್ಲ ರೀತಿಯ ಚಿಕಿತ್ಸೆ ನೀಡಲಾಗುತ್ತದೆ. ಜನರ ಜೀವ ಉಳಿಸುವ ಕೆಲಸವಾಗಲಿದೆ’ ಎಂದು ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳು ಹೇಳಿಕೊಂಡಿದ್ದರು. ಇದನ್ನೇ ನಂಬಿ ಆಸ್ಪತ್ರೆಗೆ ಬರುವ ಜನರಿಗೆ ನಿರಾಸೆಯಾಗುತ್ತಿದೆ.

ಅಪಘಾತದಲ್ಲಿ ಗಾಯಗೊಂಡವರು, ಹಾವು ಕಚ್ಚಿದವರಿಗೆ ತುರ್ತು ಸಮಯದಲ್ಲಿ ಸ್ಪಂದಿಸಲು ಪ್ರತ್ಯೇಕ ಕೇಂದ್ರ ಆರಂಭಿಸಲಾಗಿದ್ದು, ಕೇಂದ್ರಕ್ಕೆ ಬೇಕಾದ ಅಗತ್ಯ ಸಿಬ್ಬಂದಿ ನೇಮಿಸಿಕೊಂಡು ಅವರಿಗೆ ತರಬೇತಿಯನ್ನೂ ನೀಡಲಾಗಿದೆ. ಇಷ್ಟೆಲ್ಲಾ ಕ್ರಮಗಳನ್ನು ಕೈಗೊಂಡರೂ ಕೂಡ ಗಾಯಾಳುಗಳಿಗೆ ಟ್ರಾಮಾ ಸೆಂಟರ್‌ನಲ್ಲಿ ತುರ್ತು ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ.

‘ಸಾವು–ಬದುಕಿನ ಮಧ್ಯೆ ಹೋರಾಡುತ್ತಿರುವವರು ತುಮಕೂರಿನಿಂದ ಬೆಂಗಳೂರಿನ ಆಸ್ಪತ್ರೆಗೆ ಸೇರುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದ ಉದಾಹರಣೆಗಳು ಸಾಕಷ್ಟಿವೆ. ಗುಣಮಟ್ಟದ ಚಿಕಿತ್ಸೆ ದೊರೆಯುತ್ತದೆ ಎಂದು ಗ್ರಾಮೀಣ ಭಾಗದಿಂದ ಬಂದವರು ಅನಿವಾರ್ಯವಾಗಿ ಬೇರೆ ಕಡೆಗೆ ತೆರಳಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ಆಂಬುಲೆನ್ಸ್‌ ಚಾಲಕರೊಬ್ಬರು ತಮ್ಮ ಅನುಭವದ ಮಾತುಗಳನ್ನಾಡಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಜಿಲ್ಲಾ ಶಸ್ತ್ರ ಚಿಕಿತ್ಸಕರು ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT