ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಬಿತ್ತನೆ ಸಮಯಕ್ಕೆ ಕೈ ಕೊಟ್ಟ ವರುಣ

ಶೇಂಗಾ, ದ್ವಿದಳ ಧಾನ್ಯ ಬಿತ್ತನೆಗೆ ಹಿನ್ನಡೆ, ಎರಡು ವಾರದಿಂದ ಮಳೆ ಇಲ್ಲ
Published 2 ಜುಲೈ 2024, 16:23 IST
Last Updated 2 ಜುಲೈ 2024, 16:23 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಬಿತ್ತನೆ ಸಮಯದಲ್ಲೇ ಮಳೆ ಕೈ ಕೊಟ್ಟಿದ್ದು, ರೈತರು ಆಕಾಶದತ್ತ ಮುಖ ನೆಟ್ಟಿದ್ದಾರೆ. ಕಳೆದ ಎರಡು ವಾರದಿಂದ ವರುಣ ಮುನಿಸಿಕೊಂಡಿದ್ದು, ಬಿತ್ತನೆಗೆ ಹಿನ್ನಡೆಯಾಗಿದೆ.

ಸಕಾಲಕ್ಕೆ ಮಳೆಯಾಗಿದ್ದರೆ ಜೂನ್ ತಿಂಗಳ ಅಂತ್ಯದೊಳಗೆ ಶೇಂಗಾ ಬಿತ್ತನೆ ಬಹುತೇಕ ಪೂರ್ಣಗೊಳ್ಳುವ ಹಂತ ತಲುಪುತಿತ್ತು. ಆದರೆ ಅಲ್ಲಲ್ಲಿ ಅಲ್ಪಸ್ವಲ್ಪ ಬಿತ್ತನೆ ಮಾಡಿರುವುದನ್ನು ಬಿಟ್ಟರೆ ಬಹುತೇಕ ಕಡೆಗಳಲ್ಲಿ ಬಿತ್ತನೆ ಕಾರ್ಯ ಕುಂಠಿತಗೊಂಡಿದೆ. ಜುಲೈ ಮೊದಲ ವಾರಕ್ಕೆ ಕಾಲಿಟ್ಟಿದ್ದು, ಕೇವಲ ಗಾಳಿ ಬೀಸುತ್ತಿದೆ. ಮಳೆಯ ಮುನ್ಸೂಚನೆ ಕಾಣದಾಗಿದ್ದು, ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಮುಂಗಾರು ಪೂರ್ವ ಮಳೆ ಆರಂಭದಲ್ಲಿ ಕೈಕೊಟ್ಟರೂ ಮೇ ಮೊದಲ ವಾರ ಸ್ವಲ್ಪ ಪ್ರಮಾಣದಲ್ಲಿ ಬಿತ್ತು. ಮೇನಲ್ಲಿ ಕಣ್ಣಾಮುಚ್ಚಾಲೆ ಮುಂದುವರಿದೇ ಇತ್ತು. ಜೂನ್‌ ತಿಂಗಳ ಮೊದಲ ಎರಡು ವಾರಗಳಲ್ಲಿ ಉತ್ತಮ ಮಳೆಯಾಯಿತು. ಇದರಿಂದ ರೈತರ ಮುಖದಲ್ಲಿ ಆಶಾಭಾವನೆ ಮೂಡಿತು. ಭೂಮಿಯನ್ನು ಉಳುಮೆ ಮಾಡಿ, ಸಿದ್ಧತೆ ಮಾಡಿಕೊಂಡು ಬಿತ್ತನೆಗಾಗಿ ಕಾಯುತ್ತಿದ್ದಾರೆ. ಜೂನ್ ಎರಡನೇ ವಾರದ ನಂತರ ನಿಧಾನವಾಗಿ ಕಡಿಮೆಯಾಗುತ್ತಾ ಬಂದಿದ್ದು, ಈಗ ಎರಡು ವಾರದಿಂದ ಮಳೆಯ ಸುಳಿವೇ ಇಲ್ಲವಾಗಿದೆ.

ಮುಂಗಾರು ಪೂರ್ವ ಮಳೆಗೆ ಹೆಸರು, ಉದ್ದು, ಅಲಸಂದೆ, ಎಳ್ಳು, ತೊಗರಿ ಬಿತ್ತನೆ ಮಾಡುತ್ತಿದ್ದರು. ಈ ಬಾರಿ ಮಳೆ ಇಲ್ಲದೆ ಬಹುತೇಕ ಬಿತ್ತನೆ ಸಾಧ್ಯವಾಗಿಲ್ಲ. ಹೆಸರು 10,300 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದರೂ, ಕೇವಲ 2,448 ಹೆಕ್ಟೇರ್‌ನಲ್ಲಷ್ಟೇ ಬಿತ್ತನೆ ಸಾಧ್ಯವಾಗಿದೆ. ಈಗ ಮಳೆ ಇಲ್ಲದೆ ಆ ಬೆಳೆಯೂ ಒಣಗಲಾರಂಭಿಸಿದೆ. ಮೆಕ್ಕೆಜೋಳ 30,578 ಹೆಕ್ಟೇರ್ ಗುರಿಗೆ ಕೇವಲ 4,657 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ತೊಗರಿ 15,778 ಹೆಕ್ಟೇರ್ ಬಿತ್ತನೆ ನಿರೀಕ್ಷಿಸಿದ್ದರೂ, 3,275 ಹೆಕ್ಟೇರ್‌ನಲ್ಲಷ್ಟೇ ಬಿತ್ತನೆ ಮಾಡಲಾಗಿದೆ. ಒಟ್ಟು 42,993 ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯದ ಬಿತ್ತನೆಗೆ ಗುರಿ ಹೊಂದಿದ್ದರೂ ಕೇವಲ 8,324 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಈ ಬಾರಿ ಜಿಲ್ಲೆಯಲ್ಲಿ ದ್ವಿದಳ ಧಾನ್ಯಗಳ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.

ಶೇಂಗಾ ಹಿನ್ನಡೆ: ಪಾವಗಡ, ಶಿರಾ, ಮಧುಗಿರಿ, ಕೊರಟಗೆರೆ ಭಾಗದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಶೇಂಗಾ ಬೆಳೆಯಲಾಗುತ್ತದೆ. ಹಿಂದಿನ ವರ್ಷ ಬರದಿಂದ ಇಡೀ ಬೆಳೆ ಹಾಳಾಗಿತ್ತು. ಈ ಸಲ ಸಕಾಲಕ್ಕೆ ಮಳೆಯಾಗದೆ ಬಿತ್ತನೆ ಮಾಡಿಲ್ಲ. 76,570 ಹೆಕ್ಟೇರ್ ಗುರಿಗೆ, 16,171 ಹೆಕ್ಟರ್‌ನಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. ಆರಿದ್ರಾ ಮಳೆಯ ಹಿಂದೆ ಮುಂದೆ ಬಿತ್ತನೆ ಮಾಡಿದರೆ ಉತ್ತಮ ಇಳುವರಿ ಬರುತ್ತದೆ. ನೀರಾವರಿ ಸೌಲಭ್ಯ ಇದ್ದವರು ಅಲ್ಲಲ್ಲಿ ಬಿತ್ತನೆ ಮಾಡಿದ್ದಾರೆ.

ಜೂನ್ ಅಂತ್ಯಕ್ಕೆ ಬಹುತೇಕ ಶೇಂಗಾ ಬಿತ್ತನೆ ಕೆಲಸ ಮುಗಿಸುತ್ತಿದ್ದರು. ಈಗ ಜುಲೈ ಮೊದಲ ವಾರಕ್ಕೆ ಕಾಲಿಟ್ಟಿದ್ದರೂ ವರುಣನ ಸುಳಿವೇ ಕಾಣುತ್ತಿಲ್ಲ. ತಕ್ಷಣಕ್ಕೆ ಮಳೆಯಾದರೆ ಬಿತ್ತನೆಗೆ ಸ್ವಲ್ಪ ಮಟ್ಟಿಗಾದರೂ ನೆರವಾಗಬಹುದು. ತಡವಾದರೆ ಹಿನ್ನಡೆಯಾಗಲಿದೆ ಎಂದು ಪಾವಗಡ ತಾಲ್ಲೂಕು ಪಳವಳ್ಳಿ ರೈತ ವೀರಣ್ಣ ಹೇಳುತ್ತಾರೆ.

ರಾಗಿ: ಜಿಲ್ಲೆಯ ಪ್ರಮುಖ ಆಹಾರ ಬೆಳೆ ರಾಗಿಯನ್ನು ಜುಲೈನಲ್ಲಿ ಬಿತ್ತನೆ ಮಾಡುವುದು ವಾಡಿಕೆ. 1,51,375 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಈವರೆಗೆ 2,026 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಆಷಾಢ ಮಾಸದಲ್ಲಿ ಮಳೆ ಕೈಕೊಟ್ಟರೆ ಬಿತ್ತನೆ ಕಷ್ಟಕರ. ಹಿಂದಿನ ವರ್ಷ ಬರದಿಂದ ಹೊಲಕ್ಕೆ ಹಾಕಿದ ಬೀಜವೂ ಸಿಗಲಿಲ್ಲ. ಈ ವರ್ಷವೂ ಅದೇ ಪರಿಸ್ಥಿತಿ ಎದುರಾದರೆ ಎಂಬ ಆತಂಕ ರೈತರನ್ನು ಕಾಡುತ್ತಿದೆ.

ಜಿಲ್ಲೆಯಲ್ಲಿ ದ್ವಿದಳ ಧಾನ್ಯ, ಆಹಾರ ಬೆಳೆಗಳು, ಎಣ್ಣೆ ಕಾಳುಗಳು ಸೇರಿದಂತೆ ಒಟ್ಟು 3,20,455 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿದೆ. ಈವರೆಗೆ ಅತ್ಯಲ್ಪ ಪ್ರಮಾಣದಲ್ಲಿ 34,460 ಹೆಕ್ಟೇರ್‌ನಲ್ಲಿ (ಶೇ 10.75) ಬಿತ್ತನೆಯಾಗಿದೆ.

ಮಳೆ ಕೊರತೆ: ಮೇ ಕೊನೆ, ಜೂನ್ ಆರಂಭದಲ್ಲಿ ಒಮ್ಮೆಲೆ ಮಳೆ ಸುರಿದಿದೆ. ಸತತವಾಗಿ, ಕೃಷಿಗೆ ಪೂರಕವಾಗುವಂತೆ ಮಳೆಯಾಗಿಲ್ಲ. ಜಿಲ್ಲೆಯ ಇತರೆ ಭಾಗಕ್ಕೆ ಹೋಲಿಸಿದರೆ ಕುಣಿಗಲ್ ತಾಲ್ಲೂಕಿನಲ್ಲಿ ಮಳೆ ಕೊರತೆ ಎದುರಾಗಿದ್ದು, ಮೇ ಅಂತ್ಯದ ವರೆಗೆ 175 ಮಿ.ಮೀ ಮಳೆಯಾಗಬೇಕಿತ್ತು. ಆದರೆ 141 ಮಿ.ಮೀ (ಶೇ 20ರಷ್ಟು ಕೊರತೆ) ಮಳೆಯಾಗಿದೆ. ಜೂನ್‌ನಲ್ಲೂ ಉತ್ತಮ ಪ್ರಮಾಣದಲ್ಲಿ ಮಳೆಯಾಗಿಲ್ಲ.

ಜೂನ್ ತಿಂಗಳ ಮಳೆ ವಿವರ (ಮಿ.ಮೀ)

ತಾಲ್ಲೂಕು;ಸರಾಸರಿ;ಬಿದ್ದಮಳೆ;ವ್ಯತ್ಯಾಸ

ಚಿಕ್ಕನಾಯಕನಹಳ್ಳಿ;70;107;53

ಗುಬ್ಬಿ;80;184;130

ಕೊರಟಗೆರೆ;72;174;141

ಕುಣಿಗಲ್;70;95;36

ಮಧುಗಿರಿ;74;111;50

ಪಾವಗಡ;53;111;109

ಶಿರಾ;61;94;53

ತಿಪಟೂರು;62;98;59

ತುಮಕೂರು;83;185;124

ತುರುವೇಕೆರೆ;65;84;30

ಸರಾಸರಿ;59;124;110

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT