ಶನಿವಾರ, ಡಿಸೆಂಬರ್ 5, 2020
25 °C
ಕುಣಿಗಲ್, ಗುಬ್ಬಿ ತಾಲ್ಲೂಕು ವ್ಯಾಪ್ತಿಯಲ್ಲಿ ದೂರು ದಾಖಲು: ತಮಿಳುನಾಡಿನ ತಂಡದ ಶಂಕೆ

ಎಟಿಎಂ ದತ್ತಾಂಶ ಸಂಗ್ರಹ ಜಾಲ ಸಕ್ರಿಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಸ್ಕಿಮ್ಮಿಂಗ್‌ ಸಾಧನದ ಮೂಲಕ ಎಟಿಎಂ ಕಾರ್ಡ್‌ಗಳ ದತ್ತಾಂಶವನ್ನು ಕದ್ದು ಗ್ರಾಹಕರ ಖಾತೆಯಿಂದ ಹಣ ಡ್ರಾ ಮಾಡಿಕೊಳ್ಳುವ ಖದೀಮರ ತಂಡ ಜಿಲ್ಲೆಯಲ್ಲಿ ಮತ್ತೆ ಸಕ್ರಿಯವಾಗಿದೆ. ತಮಿಳುನಾಡು ಮೂಲದ ವಂಚಕರು ಈ ಕೃತ್ಯ ಎಸಗುತ್ತಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಗುಬ್ಬಿ ಮತ್ತು ಕುಣಿಗಲ್ ತಾಲ್ಲೂಕು ವ್ಯಾಪ್ತಿಯಲ್ಲಿಯೇ ಈ ವಂಚನೆ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಹಣ ಕಳೆದುಕೊಂಡ ಹಲವರು ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದಾರೆ.

ಕುಣಿಗಲ್‌ನ ಶಿವಕುಮಾರ್ ಎಂಬುವವರ ಖಾತೆಯಿಂದ
₹ 8,500 ಡ್ರಾ ಆಗಿದೆ. ತಮಿಳುನಾಡಿನ ಗುಡುವಚ್ಚೇರಿ ಕಾಂಚಿಪುರಂನ ಎಟಿಎಂ ಕೇಂದ್ರದಿಂದ ಹಣ ಪಡೆಯಲಾಗಿದೆ. ಗುಬ್ಬಿಯ ಮಹೇಶ್ ಎಂಬುವವರು ಕುಣಿಗಲ್‌ನ ಕುವೆಂಪು ನಗರದ ಎಟಿಎಂ ಕೇಂದ್ರದಿಂದ ಹಣ ಪಡೆದಿದ್ದರು. ಆ ನಂತರ ಅವರ ಖಾತೆಯಿಂದ ₹ 5,000 ಡ್ರಾ ಆಗಿದೆ. ಹೀಗೆ ಹಲವು ಮಂದಿ ಹಣವನ್ನು ಕಳೆದುಕೊಂಡು, ‌ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಕಳೆದ ಮಾರ್ಚ್‌ನಲ್ಲಿ ಹೀಗೆ ಸ್ಕಿಮ್ಮಿಂಗ್‌ ಸಾಧನದ ಮೂಲಕ ಎಟಿಎಂ ಕಾರ್ಡ್‌ಗಳ ದತ್ತಾಂಶವನ್ನು ಕದ್ದು ಗ್ರಾಹಕರ ಖಾತೆಯಿಂದ ಹಣ ಡ್ರಾ ಮಾಡಿಕೊಳ್ಳುತ್ತಿದ್ದ ಉತ್ತರ ಪ್ರದೇಶದ ಇಬ್ಬರನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದರು. ಈಗ ಮತ್ತೆ ವಂಚನೆಯ ಪ್ರಕರಣಗಳು ಜಿಲ್ಲೆಯಲ್ಲಿ ಜರುಗುತ್ತಿವೆ.

‘ಸ್ಕಿಮ್ಮಿಂಗ್‌ ಸಾಧನವನ್ನು ಎಟಿಎಂ ಯಂತ್ರಕ್ಕೆ ಅಳವಡಿಸಲಾಗುತ್ತದೆ. ಗ್ರಾಹಕರು ಕಾರ್ಡ್ ಸ್ವೈಪ್ ಮಾಡಿದಾಗ ಆ ಕಾರ್ಡ್‌ನ ನಂಬರ್ ಸ್ಕಿಮ್ಮಿಂಗ್ ಸಾಧನದಲ್ಲಿ ಅಡಕವಾಗುತ್ತದೆ. ಸ್ಕಿಮ್ಮಿಂಗ್ ಸಾಧನವನ್ನು ಆರೋಪಿಗಳು ಕೊಂಡೊಯ್ದು ನಂತರ ನಕಲಿ ಕಾರ್ಡ್‌ಗಳನ್ನು ಬಳಸಿ ಹಣ ಡ್ರಾ ಮಾಡಿಕೊಳ್ಳುವರು’ ಎಂದು ಬ್ಯಾಂಕ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಗುಬ್ಬಿ, ಕುಣಿಗಲ್, ಕೆ.ಬಿ. ಕ್ರಾಸ್‌ನಲ್ಲಿ ಈ ವಂಚಕರ ಜಾಲ ಸಕ್ರಿಯವಾಗಿರುವ ಶಂಕೆ ಪೊಲೀಸರಿಗೆ ಇದೆ. ಆ ಕಡೆಗಳಿಂದಲೇ ದೂರುಗಳು ದಾಖಲಾಗುತ್ತಿವೆ. ಈಗಾಗಲೇ ನಾವು ಸಹ ವಿಚಾರವನ್ನು ಪೊಲೀಸರ ಗಮನಕ್ಕೆ ತಂದಿದ್ದೇವೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.