ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಢ್ಯದಿಂದ ಹೊರಬರದಿದ್ದರೆ ಕಾನೂನು ಕ್ರಮ: ನ್ಯಾ.ನೂರುನ್ನಿಸ್ಸಾ ಎಚ್ಚರಿಕೆ

ಕಾಡುಗೊಲ್ಲರ ಹಟ್ಟಿಗಳಲ್ಲಿ ನಡೆದ ಸಂವಾದದಲ್ಲಿ ನ್ಯಾ.ನೂರುನ್ನಿಸ್ಸಾ ಎಚ್ಚರಿಕೆ
Published 18 ಆಗಸ್ಟ್ 2023, 6:37 IST
Last Updated 18 ಆಗಸ್ಟ್ 2023, 6:37 IST
ಅಕ್ಷರ ಗಾತ್ರ

ಕೋರ: ‘ನಮ್ಮ ದೇವರು ಒಪ್ಪಲ್ಲ. ಮುಟ್ಟಾದಾಗ ಮೂರು ದಿನ, ಹೆರಿಗೆಯಾದ ಮೂರು ತಿಂಗಳು ಮನೆಯೊಳಗೆ ಬರಲು ಸಾಧ್ಯವಿಲ್ಲ. ಜುಂಜಪ್ಪ ಒಳ್ಳೆಯದು ಮಾಡುವುದಿಲ್ಲ. ಊರೊಳಗೆ ಬಾರದ ನಾವು ಮನೆಯೊಳಗೆ ಬರಲಾರೆವು...’

ಇದು ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಹಾಗೂ ತುಮಕೂರು ವಿ.ವಿ. ಕಲಾ ಕಾಲೇಜು ಸ್ನಾತಕ ಸಮಾಜಕಾರ್ಯ ವಿಭಾಗದಿಂದ ಬುಧವಾರ ನಡೆದ ಕಾಡುಗೊಲ್ಲರ ಹಟ್ಟಿಗಳಲ್ಲಿ ಅರಿವು ಹಾಗೂ ಸಂವಾದದಲ್ಲಿ ಕಾಡುಗೊಲ್ಲ ಸಮುದಾಯದ ಹೆಣ್ಣುಮಕ್ಕಳು ಹೇಳಿದ ಮಾತು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ನೂರುನ್ನಿಸ್ಸಾ ಮಾತನಾಡಿ, ‘ಜುಂಜಪ್ಪ ನಿಮ್ಮ ರಕ್ಷಣೆಗೆ ಇರುವುದು ಹೊರತು ಶೋಷಣೆಗಲ್ಲ. ಮೌಢ್ಯ, ಸಂಪ್ರದಾಯದ ಹೆಸರಿನ ಕಂದಾಚಾರದಿಂದ ಹೊರಬನ್ನಿ. ಇಲ್ಲವೇ ಕಾನೂನಿನ ಶಿಕ್ಷೆ ಅನುಭವಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಹೆಣ್ಣು ಮುಟ್ಟಾಗದಿದ್ದರೆ ಜಗತ್ತು ಉಳಿಯಲ್ಲ. ಮಗುವಿನ ಹುಟ್ಟು ತಾಯಿಗೆ ಶಾಪವಾಗಬೇಕೆ? ಮನೆಯವರಿಂದ ದೂರವಿದ್ದಾಗ ಬಾಣಂತಿ ಸನ್ನಿ ಕಾಡುವ ಸಾಧ್ಯತೆ ಹೆಚ್ಚು. ನಿಮ್ಮ ಹೆಂಡತಿ, ಮಗಳು, ಸಹೋದರಿಯನ್ನು ಊರಾಚೆ ಕಾಡು ಪ್ರಾಣಿಗಳ ದಾಳಿ, ದೃಷ್ಟರ ದೌರ್ಜನ್ಯದಿಂದ ರಕ್ಷಿಸಿ ಎಂದರು.

‘ಮೈನೆರೆದಾಗ ಬಾಲಕಿಯರನ್ನು ದೂರವಿಟ್ಟರೆ ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ. ಮೌಲ್ಯ ನಶಿಸುತ್ತಿವೆ, ಮೌಢ್ಯ ವಿಜೃಂಭಿಸುತ್ತಿದೆ. ಇಂತಹ ಆಚರಣೆಗಳಿಂದ ಪ್ರಾಣ ಬಿಟ್ಟವರ ಸಂಖ್ಯೆ ಹೆಚ್ಚಾಗಬೇಕಾ? ಬಾಣಂತಿ ವಸಂತಳ ಮಡಿಲು ಬರಿದಾಗಿದೆ. ಎರಡೂ ಮಕ್ಕಳು ಮೃತರಾಗಿವೆ. ಅರ್ಥ ಮಾಡಿಕೊಳ್ಳಿ’ ಎಂದು ಮನವಿ ಮಾಡಿದರು.

ಡಮರುಗ ರಂಗ ಸಂಪನ್ಮೂಲ ಕೇಂದ್ರದ ಮೆಳೇಹಳ್ಳಿ ದೇವರಾಜು ನೇತೃತ್ವದಲ್ಲಿ ‘ಮುಟ್ಟಾದಳೇ ಪುಟ್ಟಿ’ ಪ್ರದರ್ಶನ ನಡೆಯಿತು. ಯುವ ಕಲಾವಿದ ಮೋಹನ್‌ ಅವರು ಜುಂಜಪ್ಪನ ಹಾಡಿಗೆ ನೆರೆದಿದ್ದವರು ಕುಣಿದರು.

‘ನಮ್ಮ ಮಕ್ಕಳಿಗೆ ಹಾಸ್ಟೆಲ್‌ ಸೌಲಭ್ಯವಿಲ್ಲ. ಸ್ಮಶಾನಕ್ಕೆ ಜಾಗ ನೀಡಿ. ಮನೆ, ಗುಡಿಸಲು ಕಟ್ಟಿರುವ ಜಾಗವನ್ನು ಇ– ಸ್ವತ್ತು ಖಾತಾ ಮಾಡಿಕೊಡಲು ಹಲವು ದಾಖಲೆ ಕೇಳುತ್ತಿದ್ದಾರೆ. ಸರಳೀಕರಣಗೊಳಿಸಿ’ ಎಂದು ಗ್ರಾಮಸ್ಥರು ನ್ಯಾಯಾಧೀಶರಿಗೆ ಮನವಿ ಮಾಡಿದರು.

ತುಮಕೂರು ತಾಲ್ಲೂಕು ಗ್ರೇಡ್-2 ತಹಶೀಲ್ದಾರ್ ಕಮಲಮ್ಮ, ತಾಪಂ ಇಒ ಹರ್ಷಕುಮಾರ್‌, ತಾಲ್ಲೂಕು ಬಿಸಿಎಂ ಅಧಿಕಾರಿ ಗೀತಾ, ಸೋರೆಕುಂಟೆ ಗ್ರಾ.ಪಂ. ಅಧ್ಯಕ್ಷೆ ಸೌಮ್ಯ, ಪಿಡಿಒ ಸವಿತಾಬಾಯಿ, ಗಾಯಕ ಮೋಹನ್, ಬೆಳ್ಳಾವಿ ಪಿಎಚ್‌ಸಿ ವೈದ್ಯಾಧಿಕಾರಿ ಡಾ.ರಾಧಕೃಷ್ಣ, ತುಮಕೂರು ವಿ.ವಿ. ಸಮಾಜ ಕಾರ್ಯ ಶಿಬಿರಾಧಿಕಾರಿ ಸಿದ್ದೇಶ್‌ ಸಿ. ಇದ್ದರು.

ಏಕಾಏಕಿ ಊರಾಚೆಯ ಗುಡಿಸಲುಗಳನ್ನು ತೆರವುಗೊಳಿಸುವುದು ಸರಿಯಲ್ಲ. ಜೊತೆಗೆ ಒಂದೇ ದಿನದಲ್ಲಿ ಸಂಪ್ರದಾಯದಿಂದ ಹೊರ ಬನ್ನಿ ಎಂದು ಹೇಳುವುದು ಸರಿಯಲ್ಲ. ಅರಿವು ಸಹಕಾರ ಮಾರ್ಗದರ್ಶನ ಅಗತ್ಯ.

-ಮಂಜುನಾಥ್ ಸಮಾಜ ಕಾರ್ಯ ಪ್ರಶಿಕ್ಷಣಾರ್ಥಿ

ಸೌಲಭ್ಯ ಕಲ್ಪಿಸುವುದರ ಜೊತೆಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದು ಹೈಕೋರ್ಟ್‌ಗೆ ಪತ್ರ ಬರೆಯಲಾಗಿದೆ. ಸರ್ಕಾರದ ಗಮನಕ್ಕೂ ತರಲಾಗಿದೆ. ಶ್ರೀಘ್ರ ಎರಡು ಹಾಸ್ಟೆಲ್‌ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು.

-ನೂರುನ್ನಿಸ್ಸಾ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT