ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕನಾಯಕನಹಳ್ಳಿ | ಜಾನುವಾರು ಮಾರುಕಟ್ಟೆ ಕಾಯಕಲ್ಪಕ್ಕೆ ಪಶು ಇಲಾಖೆ ಸಂಕಲ್ಪ

Published 1 ಆಗಸ್ಟ್ 2023, 7:19 IST
Last Updated 1 ಆಗಸ್ಟ್ 2023, 7:19 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ಪಟ್ಟಣದ ಸೋಮವಾರದ ಜಾನುವಾರು (ಮರಿ ಸಂತೆ) ಮಾರುಕಟ್ಟೆಗೆ ಕಾಯಕಲ್ಪ ನೀಡಲು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಮುಂದಡಿ ಇಟ್ಟಿದೆ.

ಇಲ್ಲಿಂದ ತಮಿಳುನಾಡು, ಬೆಂಗಳೂರು, ಮೈಸೂರಿಗೆ ಮಾಂಸಕ್ಕಾಗಿ ಮರಿಗಳು ರವಾನೆಯಾಗುತ್ತಿವೆ. ಸಾಕಾಣಿಕೆಗಾಗಿ ಕೋಲಾರ ಜಿಲ್ಲೆಗೆ ಮರಿಗಳನ್ನು ಸಾಗಿಸಲಾಗುತ್ತದೆ. ಸೋಮವಾರ ಬಂತೆಂದರೆ ಮರಿಗಳನ್ನು ಸಾಗಿಸಲು ವಾಹನಗಳು ಸಂತೆಗೆ ದಾಂಗುಡಿ ಇಡುತ್ತವೆ. ಎಪಿಎಂಸಿ ಪ್ರಾಂಗಣದಲ್ಲಿ ಮುಂಜಾನೆಯಿಂದಲೇ ಶುರುವಾಗುವ ಸಂತೆ ಮಧ್ಯಾಹ್ನದ ವೇಳೆಗೆ ಆಖೈರುಗೊಳ್ಳುತ್ತದೆ.

ತಿಂಗಳಿಗೆ ಒಂದು ಕೋಟಿಗಿಂತಲೂ ಹೆಚ್ಚು ವಹಿವಾಟು ನಡೆಯುತ್ತದೆ. ಆದರೂ ಜಾನುವಾರು ಮಾರಾಟಕ್ಕೆ ಬರುವವರಿಗೆ ಸಂತೆಯಲ್ಲಿ ನೀರು, ನೆರಳಿನಂತಹ ಸೌಲಭ್ಯಗಳಿಲ್ಲ. ಬಿರುಬಿಸಿಲು, ಮಳೆಯೆನ್ನದೇ ಬಯಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ. ಇದನ್ನು ಮನಗಂಡ ಪಶು ಇಲಾಖೆ ಶೆಲ್ಟರ್‌, ಕುಡಿವನೀರು, ಜಾನುವಾರು ಮಾಲೀಕರ ವಿಶ್ರಾಂತಿಗೆ ಕಟ್ಟಡ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಿದೆ.

ದೊಡ್ಡ ಮಟ್ಟದಲ್ಲಿ ಜಾನುವಾರು ಸಾಕಣೆದಾರರು ಹಿಂಡುಗಟ್ಟಲೆ ಆಡು ಕುರಿಗಳೊಂದಿಗೆ ಮಾರುಕಟ್ಟೆಗೆ ಬರುತ್ತಾರೆ. ಅಂಥವರು ತಮ್ಮ ಜಾನುವಾರುಗಳನ್ನು ಒಂದುಕಡೆ ನಿಲ್ಲಿಸಿಕೊಳ್ಳಲು ಬ್ಯಾರಕ್‌ಗಳ ನಿರ್ಮಾಣ, ಒಂದು ಘಳಿಗೆ ವಿಶ್ರಮಿಸಲು ಸೂಕ್ತ ವ್ಯವಸ್ಥೆ ಕಲ್ಪಿಸುವ ಇರಾದೆ ಇಲಾಖೆಯದ್ದಾಗಿದೆ.

ಪಶು ಇಲಾಖೆಗೆ ಗಣಿಬಾಧಿತ ಪ್ರದೇಶಾಭಿವೃದ್ಧಿ ನಿಧಿಯಿಂದ ₹6 ಕೋಟಿ ಅನುದಾನ ಮಂಜೂರಾಗಿದೆ. ಆ ಹಣದಲ್ಲಿ ಒಂದಷ್ಟು ಪಾಲನ್ನು ಜಾನುವಾರು  ಸಂತೆಗೆ ಸೌಲಭ್ಯಗಳನ್ನು ಕಲ್ಪಿಸಲು ಮೀಸಲಿಡಲಾಗಿದೆ ಎನ್ನುತ್ತಾರೆ ಇಲಾಖೆ ಸಹಾಯಕ ನಿರ್ದೇಶಕ ಡಾ. ರೆ.ಮ. ನಾಗಭೂಷಣ.‌

ತಾಲ್ಲೂಕಿನಲ್ಲಿ ತೆಂಗು, ಅಡಿಕೆ ಕೃಷಿ ಜತೆಗೆ ಆಡು, ಕುರಿ ಸಾಕಣೆ ಒಂದಷ್ಟು ಜನರಿಗೆ ಉಪಕಸುಬಾಗಿದ್ದು ಪರ್ಯಾಯ ಆದಾಯ ಮೂಲವಾಗಿದೆ. ಭೂ ರಹಿತರು, ಸಣ್ಣ ಹಿಡುವಳಿದಾರರು ಅದನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. ತಾಲ್ಲೂಕಿನಲ್ಲಿ ಜಾನುವಾರು ಸಾಕಣೆದಾರರು 6 ಸಾವಿಕ್ಕೂ ಅಧಿಕ ಸಂಖ್ಯೆಯಲ್ಲಿದ್ದಾರೆ.

ಮಾಂಸಕ್ಕಾಗಿ ವರ್ಷಕ್ಕೆ 30 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಆಡು, ಕುರಿಗಳು ಉತ್ಪಾದನೆಯಾಗುತ್ತಿವೆ. ಅದರ ವಾರ್ಷಿಕ ವಹಿವಾಟು ₹14 ಕೋಟಿ ಮೀರುತ್ತದೆ. ನೇರವಾಗಿ ಗ್ರಾಮೀಣ ಭಾಗದಲ್ಲಿ ನಡೆಯುವ ಖರೀದಿ ಮತ್ತು ಮಾರಾಟದ ದಾಖಲೀಕರಣ ಅಸಾಧ್ಯವಾಗಿದೆ. ಅದು ಕೂಡ ಲೆಕ್ಕಕ್ಕೆ ಸಿಕ್ಕಿದ್ದರೆ ವಹಿವಾಟಿನ ಅಂಕಿ ಅಂಶವೇ ಬೇರೆಯಾಗುತ್ತದೆ ಎನ್ನುತ್ತಾರೆ ನಾಗಭೂಷಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT