ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ಲೋಕಸಭಾ ಕ್ಷೇತ್ರ: ಕೊನೆಗೂ ಅಖಾಡಕ್ಕೆ ಇಳಿದ ಮುದ್ದಹನುಮೇಗೌಡ

ರಣಕಹಳೆ ಮೊಳಗಿಸಿದ ಕಾಂಗ್ರೆಸ್; ಜಾತಿ ಲೆಕ್ಕಾಚಾರ
Published 9 ಮಾರ್ಚ್ 2024, 14:20 IST
Last Updated 9 ಮಾರ್ಚ್ 2024, 14:20 IST
ಅಕ್ಷರ ಗಾತ್ರ

ತುಮಕೂರು: ಕೊನೆಗೂ ಅಳೆದು, ತೂಗಿ ಪಕ್ಷಕ್ಕೆ ವಾಪಸಾಗಿರುವ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರನ್ನು ತುಮಕೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಕಣಕ್ಕಿಳಿಸಿದೆ.

ಮೊದಲ ಪಟ್ಟಿಯಲ್ಲೇ ಗೌಡರ ಹೆಸರು ಪ್ರಕಟವಾಗಿರುವುದೇ ವಿಶೇಷ. ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಒಬ್ಬರ ಹೆಸರನ್ನು ವರಿಷ್ಠರಿಗೆ ಕಳುಹಿಸಿದ್ದು ಯಾವುದೇ ಗೊಂದಲ, ವಿವಾದಕ್ಕೆ ಆಸ್ಪದ ಇಲ್ಲದೆ ಹೆಸರು ಪ್ರಕಟಿಸಲಾಗಿದೆ. ಈವರೆಗೆ ಇದ್ದ ಎಡರು–ತೊಡರುಗಳು ನಿವಾರಣೆಯಾಗಿದ್ದು ಗೌಡರ ‘ಹೋರಾಟ’ಕ್ಕೆ ಹಾದಿ ಸುಗಮವಾದಂತಾಗಿದೆ.

‘ವಂಚಿತ’ ಎಂಬ ಅನುಕಂಪದ ಮೇಲೆ ಮತ ಬುಟ್ಟಿ ತುಂಬಿಸಲು ಒಕ್ಕಲಿಗ ಸಮುದಾಯದ ಮುದ್ದಹನುಮೇಗೌಡ ಅವರನ್ನು ಕಾಂಗ್ರೆಸ್ ವರಿಷ್ಠರು ಅಖಾಡಕ್ಕೆ ಇಳಿಸಿದ್ದಾರೆ. ಅಭ್ಯರ್ಥಿ ಆಯ್ಕೆಯಲ್ಲಿ ಜಾತಿ ಲೆಕ್ಕಾಚಾರ ಪ್ರಮುಖವಾಗಿ ಕೆಲಸ ಮಾಡಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳ ಜತೆಗೆ ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರು, ಮಹಿಳೆಯರು ಕೈ ಹಿಡಿಯಬಹುದು ಎಂಬ ವಿಶ್ವಾಸದೊಂದಿಗೆ ಈ ಆಯ್ಕೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಕ್ಷೇತ್ರದಲ್ಲಿ ಒಕ್ಕಲಿಗರು, ಲಿಂಗಾಯತರು, ಪರಿಶಿಷ್ಟ ಜಾತಿ, ಪಂಗಡದವರ ಮತಗಳು ಸ್ವಲ್ಪ ಹೆಚ್ಚು–ಕಡಿಮೆ ಸಮಪ್ರಮಾಣದಲ್ಲಿ ಇವೆ. ಬಿಜೆಪಿ–ಜೆಡಿಎಸ್ ಪಾಳಯದಲ್ಲಿ ಅಭ್ಯರ್ಥಿ ಯಾರೆಂಬುದು ಇನ್ನೂ ನಿರ್ಧಾರವಾಗಬೇಕಿದೆ. ಎನ್‌ಡಿಎ ಮೈತ್ರಿಕೂಟದಲ್ಲಿ ಲಿಂಗಾಯತ ಸಮುದಾಯಕ್ಕೆ ಅವಕಾಶ ನೀಡುವ ಸಾಧ್ಯತೆಗಳ ಬಗ್ಗೆ ಹೆಚ್ಚು ಚರ್ಚೆಗಳು ನಡೆದಿದ್ದು, ಒಕ್ಕಲಿಗರ ಮತಗಳನ್ನು ಸೆಳೆಯುವ ಸಲುವಾಗಿ ಗೌಡರನ್ನು ‘ಅಸ್ತ್ರ’ವಾಗಿ ಬಳಸಲಾಗಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ತುಮಕೂರು ಕ್ಷೇತ್ರಕ್ಕೆ ಸಾಕಷ್ಟು ಮುಂಚಿತವಾಗಿಯೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್ ಪಾಳಯ ಚುನಾವಣೆಗೆ ರಣ ಕಹಳೆ ಮೊಳಗಿಸಿದೆ. ಮುದ್ದಹನುಮೇಗೌಡ ಪಕ್ಷ ಸೇರ್ಪಡೆ, ಟಿಕೆಟ್ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಹೆಚ್ಚು ಮಾತನಾಡಿರಲಿಲ್ಲ. ಈಗಾಗಲೇ ಗೌಡರ ಪರವಾಗಿ ಸಚಿವ ಕೆ.ಎನ್.ರಾಜಣ್ಣ ಬಹಿರಂಗವಾಗಿ ಪ್ರಚಾರ ಆರಂಭಿಸಿದ್ದರು. ಶಾಸಕ ಎಸ್.ಆರ್.ಶ್ರೀನಿವಾಸ್ ಬೆಂಬಲಕ್ಕೆ ನಿಂತಿದ್ದರು.

ಗೌಡರಿಗೆ ಟಿಕೆಟ್ ನೀಡುವುದಕ್ಕೆ ಪಕ್ಷದ ವಲಯದಲ್ಲಿ ವಿರೋಧವೂ ಇತ್ತು. ಪಕ್ಷಾಂತರಿಗಳಿಗೆ ಅವಕಾಶ ನೀಡಬಾರದು ಎಂದು ಒತ್ತಡವನ್ನೂ ಕೆಲವರು ಹಾಕುತ್ತಿದ್ದರು. ಈಗ ಭಿನ್ನಮತೀಯರನ್ನು ಒಪ್ಪಿಕೊಂಡು ಜತೆಯಲ್ಲಿ ಕರೆದುಕೊಂಡು ಹೋಗುವ ದೊಡ್ಡ ಸವಾಲು ಗೌಡರ ಮುಂದಿದೆ. ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದ ಮುರಳೀಧರ ಹಾಲಪ್ಪ, ಪಕ್ಷ ಸೇರ್ಪಡೆಗೆ ವಿರೋಧಿಸಿದ್ದ ಶಾಸಕರಾದ ಟಿ.ಬಿ.ಜಯಚಂದ್ರ, ಕೆ.ಷಡಾಕ್ಷರಿ ಮನವೊಲಿಸಬೇಕಿದೆ. ಗೌಡರಿಂದ ಅಂತರ ಕಾಯ್ದುಕೊಂಡಿರುವ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್, ತುರುವೇಕೆರೆ ಭಾಗದ ಬೆಮಲ್ ಕಾಂತರಾಜು ಮತ್ತಿತರರ ಕೋಪವನ್ನು ತಣಿಸಬೇಕಿದೆ.

ಕಾಣಿಸಿಕೊಳ್ಳದ ಗೌಡರು: ‘ವಂಚಿತ’ ಎಂಬ ಆರೋಪದೊಂದಿಗೆ ಮುದ್ದಹನುಮೇಗೌಡ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಅಲ್ಲೂ ‘ವಂಚಿತ’ರಾಗಿ ಮತ್ತೆ ಕಾಂಗ್ರೆಸ್‌ಗೆ ಮರಳಿದರು. ಕೊನೆಗೂ ‘ವಂಚಿತ’ ಹಣೆಪಟ್ಟಿ ಕಳಚಿಕೊಂಡು ಸ್ಪರ್ಧೆಗೆ ಸಜ್ಜಾಗಿದ್ದಾರೆ. ಪಕ್ಷ ಸೇರ್ಪಡೆಯಾಗಿ ಎರಡು ವಾರ ಕಳೆದಿದ್ದರೂ ಈವರೆಗೂ ಪಕ್ಷದ ವೇದಿಕೆ ಹಾಗೂ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಂಡಿಲ್ಲ. ಇನ್ನಷ್ಟೇ ಕಣಕ್ಕೆ ಇಳಿಯಬೇಕಿದೆ.

ಸಮಬಲದ ಹೋರಾಟ

ಲೋಕಸಭೆ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್–ಬಿಜೆಪಿ ಸಮಬಲ ಹೊಂದಿದೆ. ನಾಲ್ಕರಲ್ಲಿ ಕಾಂಗ್ರೆಸ್ ತಲಾ ಎರಡರಲ್ಲಿ ಜೆಡಿಎಸ್ ಬಿಜೆಪಿ ಶಾಸಕರು ಇದ್ದಾರೆ. ಒಂದು ರೀತಿಯಲ್ಲಿ ಸಮಬಲದ ಹೋರಾಟಕ್ಕೆ ವೇದಿಕೆ ಸಿದ್ಧಗೊಂಡಂತೆ ಕಾಣುತ್ತಿದೆ. ಎನ್‌ಡಿಎ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದರ ಮೇಲೆ ಸ್ಪರ್ಧಾ ಕಣ ರಂಗೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT