ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚ ಪಡೆದರೆ ಸಮಸ್ಯೆ ಎಳೆದುಕೊಂಡಂತೆ: ಡಿವೈಎಸ್‌ಪಿ ಮಂಜುನಾಥ್‌ ಎಚ್ಚರಿಕೆ

ಕುಂದುಕೊರತೆ ಸಭೆಯಲ್ಲಿ ಅಧಿಕಾರಿಗಳಿಗೆ ಲೋಕಾಯುಕ್ತ ಡಿವೈಎಸ್‌ಪಿ ಮಂಜುನಾಥ್‌ ಎಚ್ಚರಿಕೆ
Published 12 ಜುಲೈ 2023, 12:43 IST
Last Updated 12 ಜುಲೈ 2023, 12:43 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ನೆಮ್ಮದಿಯಿಂದ ಬದುಕು ನಡೆಸಬೇಕಾದರೆ ಪ್ರಾಮಾಣಿಕವಾಗಿ ಸಾರ್ವಜನಿಕರ ಕೆಲಸ ಮಾಡಿಕೊಡಬೇಕು ಎಂದು ಲೋಕಾಯುಕ್ತ ಡಿವೈಎಸ್‌ಪಿ ಮಂಜುನಾಥ್‌ ಅಧಿಕಾರಿಗಳಿಗೆ ಸಲಹೆ ನೀಡಿದರು.‌

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ನಿಯಮಾನುಸಾರ ಆಗದೇ ಇರುವ ಕೆಲಸಗಳನ್ನು ಮಾಡಿಕೊಡುವುದಾಗಿ ಹೇಳಿ ಅರ್ಜಿದಾರರಿಂದ ಹಣ ಪಡೆದರೆ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ. ಆಗದೇ ಇರುವ ಕೆಲಸಗಳ ಬಗ್ಗೆ ಹಿಂಬರಹ ನೀಡಬೇಕು ಎಂದು ತಿಳಿಸಿದರು.

‘ಲಂಚಕೋರ ಅಧಿಕಾರಿಗಳ ಬಗ್ಗೆ, ಅವರು ಮಾಡಿರುವ ಬೇನಾಮಿ ಆಸ್ತಿಗಳ ಬಗ್ಗೆ ಸಾರ್ವಜನಿಕರು, ಮಾಧ್ಯಮಗಳ ಮೂಲಕ ನಮಗೆ ಸಂಪೂರ್ಣ ಮಾಹಿತಿ ಸಿಗುತ್ತದೆ. ಪ್ರಾಮಾಣಿಕರು, ಅಪ್ರಮಾಣಿಕರು ಯಾರೆಂದು ನಮಗೆ ಮಾಹಿತಿ ಸಿಗುವುದರಿಂದ ದಾಳಿ ನಡೆಸಿ ಸಂಬಂಧಪಟ್ಟವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಅಧಿಕಾರ ಲೋಕಾಯುಕ್ತಕ್ಕೆ ಇದೆ’ ಎಂದು ಎಚ್ಚರಿಸಿದರು.

ಭ್ರಷ್ಟರಾಗಿ ಸಮಾಜದಲ್ಲಿ ಕೆಟ್ಟ ಮುಖ ಹೊತ್ತುಕೊಳ್ಳಬೇಡಿ. ಒಂದು ಬಾರಿ ಲೋಕಾಯುಕ್ತದಲ್ಲಿ ದೂರು ದಾಖಲಾದರೆ ಜೀವನವಿಡೀ ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಪ್ರಾಮಾಣಿಕ, ಸ್ವಚ್ಛ ಆಡಳಿತ ಬಯಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಲೋಕಾಯುಕ್ತದ ಹೆಸರಿನಲ್ಲಿ ಬೆದರಿಕೆ ಕರೆ ಮಾಡುವ ಪ್ರಕರಣಗಳಿದ್ದರೆ ದೂರು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಿಡಿಪಿಒ ಹೊನ್ನಪ್ಪ ಪ್ರತಿಕ್ರಿಯಿಸಿ, ತಿಂಗಳ ಹಿಂದೆ ಇಂತಹ ಒಂದು ಕರೆ ನನಗೆ ಬಂದಿತ್ತು. ಕೂಡಲೇ ವಿಷಯವನ್ನು ತಮ್ಮ ಗಮನಕ್ಕೆ ತಂದಿದ್ದಾಗಿ ನೆನಪಿಸಿದರು.

ಆಹಾರಕ್ಕೆ ವೃದ್ಧೆಯ ಪರದಾಟ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿ ಕಳೆದೊಂದು ತಿಂಗಳಿಂದ ಅನಾಥ ವೃದ್ಧೆಯೊಬ್ಬರು ಆಹಾರಕ್ಕಾಗಿ ಪರದಾಡುತ್ತಿರುವ ವಿಷಯವನ್ನು ಮಾಧ್ಯಮ ಪ್ರತಿನಿಧಿಯೊಬ್ಬರು ಲೋಕಾಯುಕ್ತ ಡಿವೈಎಸ್‌ಪಿ ಗಮನಕ್ಕೆ ತಂದರು. ಸಭೆಯಲ್ಲಿದ್ದ ಸಾರ್ವಜನಿಕ ಆಸ್ಪತ್ರೆ ವೈದ್ಯ ಡಾ. ನಟರಾಜ್‌, ಸಿಡಿಪಿಒ ಹೊನ್ನಪ್ಪ ಅವರಿಂದ ಮಾಹಿತಿ ಪಡೆದ ಮಂಜುನಾಥ್‌, ಸಂಬಂಧಪಟ್ಟ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಇನ್ನೆರಡು ದಿನದಲ್ಲಿ ವೃದ್ಧೆಯನ್ನು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳಿಸಿಕೊಡಬೇಕು. ಅಲ್ಲಿವರೆಗೆ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಆಹಾರದ ವ್ಯವಸ್ಥೆ ನೋಡಿಕೊಳ್ಳುವಂತೆ ಸೂಚಿಸಿದರು.

ತಾಲ್ಲೂಕು ಕಚೇರಿಗೆ ಸಂಬಂಧಿಸಿದ ನಾಲ್ಕು, ಎರಡು ಪುರಸಭೆ, ಎರಡು ಪೊಲೀಸ್‌ ಇಲಾಖೆಗೆ ಸಂಬಂಧಿಸಿದಂತೆ ಒಟ್ಟು 8 ಅರ್ಜಿ ಸಲ್ಲಿಕೆಯಾದವು. ಅರ್ಜಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ವಾರದ ಗಡುವು ನೀಡಲಾಯಿತು. ಲೋಕಾಯುಕ್ತ ಪೊಲೀಸ್‌ ಇನ್‌ಸ್ಪೆಕ್ಟರ್‌ ಸತ್ಯನಾರಾಯಣ, ಶಿವರುದ್ರಪ್ಪ ಮೇಟಿ, ತಹಶೀಲ್ದಾರ್‌ ಅರ್ಚನಾಭಟ್‌, ತಾಪಂ ಇಒ ವಸಂತಕುಮಾರ್‌ ಇದ್ದರು.

ದೋಷ ತಿದ್ದಲು ಲಂಚಕ್ಕೆ ಬೇಡಿಕೆ: ಆರೋಪ ‘ತಾಲ್ಲೂಕಿನ ಭಟ್ಟರಹಳ್ಳಿ ಸರ್ವೇ ನಂಬರ್‌ನ ನಮ್ಮ ಜಮೀನುಗಳಿಗೆ ಸಂಬಂಧಿಸಿದಂತೆ ದಾಖಲೆಗಳಲ್ಲಿ ಉಂಟಾಗಿರುವ ದೋಷ ತಿದ್ದುಪಡಿಗೆ ಒಂದೂವರೆ ವರ್ಷದಿಂದ ತಾಲ್ಲೂಕು ಕಚೇರಿಗೆ ಅಲೆಯುತ್ತಿದ್ದರೂ ಕೆಲಸ ಆಗಿಲ್ಲ ಎಂದು ಯಳನಾಡು ಗ್ರಾಮದ ರಾಜಶೇಖರಯ್ಯ ದೂರು ನೀಡಿದರು. ಕಡತದಲ್ಲಿ ಬಿನ್‌ ಎಂದು ಇರಬೇಕಿತ್ತು. ಕೋಂ ಎಂದು ಆಗಿರುವ ಕ್ಲರಿಕಲ್‌ ದೋಷ ತಿದ್ದಲು ಸಿಬ್ಬಂದಿ ಲಂಚ ಕೇಳುತ್ತಿದ್ದಾರೆ ಎಂದೂ ಆರೋಪ ಮಾಡಿದರು. ರಾಜಶೇಖರಯ್ಯ ಅವರ ನಂಬರ್‌ ಪಡೆದ ತಹಶೀಲ್ದಾರ್‌ ಅರ್ಚನಾಭಟ್‌ ಕಚೇರಿಗೆ ಬಂದು ಭೇಟಿಯಾದರೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT