ಮಧುಗಿರಿ: ಪಟ್ಟಣದ ಸರ್ಕಾರಿ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯ 2 ಅವ್ಯವಸ್ಥೆಯ ತಾಣವಾಗಿ ಮಾರ್ಪಟ್ಟಿರುವುದರಿಂದ ಸೌಕರ್ಯಗಳಿಗಾಗಿ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ಇದೆ.
2000ದಲ್ಲಿ ವಿದ್ಯಾರ್ಥಿ ನಿಲಯದ ಕಟ್ಟಡ ಉದ್ಘಾಟನೆಯಾದಾಗ ವಿದ್ಯಾರ್ಥಿಗಳು ತುಂಬಿ ತುಳುಕುತ್ತಿದ್ದರು. ಆದರೆ ವರ್ಷ ಕಳೆದಂತೆ ಮಳೆ ಬಂದಾಗ ಕೊಠಡಿಯ ಚಾವಣಿಯಿಂದ ನೀರು ಜಿನುಗುತ್ತಿದೆ. ಭೂಮಿಯಿಂದ ಕೆಳ ಭಾಗದಲ್ಲಿ ಕಟ್ಟಡ ಇರುವುದರಿಂದ ಹಾಸ್ಟೆಲ್‌ನ ಕೊಠಡಿಯ ಶೌಚಾಲಯ, ಊಟದ ಕೊಠಡಿಗಳು ಮಳೆಯಿಂದ ಜಲಾವೃತಗೊಂಡು ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ಸಮಸ್ಯೆಯ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗೆ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು.
ಬಡ ವಿದ್ಯಾರ್ಥಿಗಳು ಅಂದರೆ ಎಲ್ಲರಿಗೂ ನಿರ್ಲಕ್ಷ್ಯ. ಕಳೆದ ಐದಾರು ವರ್ಷಗಳಿಂದ ಈ ಸಮಸ್ಯೆಯನ್ನು ವಿದ್ಯಾರ್ಥಿಗಳು ಎದುರಿಸುತ್ತಿದ್ದರೂ ಯಾರೂ ಕೂಡ ಒಮ್ಮೆಯೂ ಭೇಟಿ ನೀಡಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು. ಈ ಸಮಸ್ಯೆಯಿಂದಾಗಿ ವಿದ್ಯಾರ್ಥಿ ನಿಲಯಕ್ಕೆ ದಾಖಲಾತಿಯ ಸಂಖ್ಯೆ ಕೂಡ ಕಡಿಮೆಯಾಗುತ್ತಿದೆ.
ಕಟ್ಟಡದ ಗೋಡೆ ಮತ್ತು ಚಾವಣಿಯಿಂದ ಮಣ್ಣು ಉದುರುತ್ತಿದೆ. ಬಣ್ಣ ಕಾಣದೇ ಗೋಡೆಗಳು ಬಿರುಕುಗೊಳ್ಳುತ್ತಿವೆ. ಶೌಚಾಲಯಗಳ ಸ್ಥಿತಿಯಂತೂ ಹೇಳತೀರದಾಗಿದೆ. ವಿದ್ಯಾರ್ಥಿಗಳು ಶೌಚಾಲಯಕ್ಕೆ ಹೋಗುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ವಿದ್ಯಾರ್ಥಿಗಳು ಶೌಚಕ್ಕಾಗಿ ಬಯಲಿನತ್ತ ತೆರಳುವ ಸ್ಥಿತಿ ಇದೆ.
ತಾಲ್ಲೂಕಿನ ಕೊಡಿಗೇನಹಳ್ಳಿ, ಐ.ಡಿ.ಹಳ್ಳಿ, ಪುರವರ ಹಾಗೂ ಮಿಡಿಗೇಶಿ ಹೋಬಳಿಯಲ್ಲಿ ಬಡ ವರ್ಗ ಹಾಗೂ ಹಿಂದುಳಿದ ವರ್ಗದ ಜನರೇ ಹೆಚ್ಚಾಗಿದ್ದು, ತಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡಲೆಂದು ಪಟ್ಟಣದ ಕಾಲೇಜುಗಳಿಗೆ ದಾಖಲಾತಿ ಮಾಡಿಸಿದ್ದಾರೆ. ಆದರೆ ಪಟ್ಟಣದ ಹೃದಯಭಾಗದಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿಗಳ ವಸತಿ ನಿಲಯ ಹೆಸರಿಗೇ ಅಷ್ಟೇ ಇದ್ದಂತಿದೆ. ಈ ನಿಲಯದಲ್ಲಿ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. 86 ವಿದ್ಯಾರ್ಥಿಗಳು ಇಲ್ಲಿ ಇದ್ದಾರೆ.
ಈ ವಿದ್ಯಾರ್ಥಿ ನಿಲಯ ಪಟ್ಟಣದ ಹೃದಯ ಭಾಗದಲ್ಲಿ ಇರುವುದರಿಂದ ಎಲ್ಲ ಕಾಲೇಜುಗಳಿಗೆ ಹತ್ತಿರವಾಗುತ್ತಿದೆ. ಆದರೆ ಮೂಲ ಸೌಕರ್ಯಗಳ ಕೊರತೆಯಿಂದ ಈ ನಿಲಯದಲ್ಲಿ ಉಳಿಯಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ.
ವಿದ್ಯಾರ್ಥಿ ನಿಲಯದ ಮುಂಭಾಗವೇ ದೊಡ್ಡ ಚರಂಡಿ ಹಾದು ಹೋಗಿದೆ. ಮಳೆಗಾಲದಲ್ಲಿ ಕೊಳಚೆ ನೀರು ಮತ್ತು ಮಳೆಯ ನೀರು ನಿಲಯದ ಒಳಗೆ ನುಗ್ಗುವುದರಿಂದ ತೊಂದರೆಯಾಗುತ್ತದೆ. ಬೇರೆ ಸಮಯದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿರುವುದರಿಂದ ವಿದ್ಯಾರ್ಥಿಗಳು ವಿವಿಧ ರೋಗಗಳಿಂದ ಬಳಲುವ ಸ್ಥಿತಿ ಎದುರಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ತಾಲ್ಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆ 15, ಪರಿಶಿಷ್ಟ ವರ್ಗಗಳ ಇಲಾಖೆ 3, ಹಿಂದುಳಿದ ವರ್ಗಗಳ ಇಲಾಖೆ 7, ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ 3 ವಿದ್ಯಾರ್ಥಿ ನಿಲಯಗಳಿವೆ. 2016– 17ರಲ್ಲಿ ವಿದ್ಯಾರ್ಥಿಗಳಿಗೆ ಹಾಸಿಗೆ ನೀಡಲಾಗಿತ್ತು. 6 ವರ್ಷಗಳು ಕಳೆದರೂ ಕೂಡ ವಿದ್ಯಾರ್ಥಿಗಳಿಗೆ ನೂತನ ಹಾಸಿಗೆ ನೀಡಿಲ್ಲ. ಹರಿದು ಹೋಗಿರುವ ಹಾಸಿಗೆಯಲ್ಲಿ ಮಲಗುವಂತಾಗಿದೆ.
ತಾಲ್ಲೂಕಿನಲ್ಲಿ 8 ಮೊರಾರ್ಜಿ ವಸತಿ ಶಾಲೆಗಳಲ್ಲಿ ಎರಡು ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 64 ಕಾಯಂ ಶಿಕ್ಷಕರು ಕಾರ್ಯನಿರ್ವಹಿಸಬೇಕು. ಆದರೆ 26 ಕಾಯಂ ಶಿಕ್ಷಕರ ಕೊರತೆ ಎದುರಾಗಿದೆ. ಆದರೂ ಆ ಜಾಗಕ್ಕೆ 26 ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ.
ತಾಲ್ಲೂಕಿನ ಐ.ಡಿ.ಹಳ್ಳಿ ಹೋಬಳಿಯ ಯಲ್ಕೂರು ಗ್ರಾಮದ ಇಂದಿರಾ ವಸತಿ ಶಾಲೆಗೆ 1.25 ಕಿ.ಮೀಟರ್ ಸಂಪರ್ಕ ರಸ್ತೆ ಅಭಿವೃದ್ಧಿಯಾದರೆ ಮಳೆಗಾಲದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಇಲ್ಲವಾದರೆ ಮಳೆಗಾಲದಲ್ಲಿ ನೀರು ವಸತಿ ಶಾಲೆ ಸಂಪೂರ್ಣವಾಗಿ ಜಲಾವೃತಗೊಂಡು ಎಲ್ಲರಿಗೂ ಸಾಕಷ್ಟು ತೊಂದರೆಯಾಗುತ್ತದೆ. ವಸತಿ ಶಾಲೆಗೆ ಸಂಪರ್ಕ ರಸ್ತೆಯನ್ನು ಮಾಡಲು ಕ್ರಮ ಕೈಗೊಳ್ಳಬೇಕೆಂದು ವಸತಿ ಶಾಲೆಯ ಪ್ರಾಂಶುಪಾಲ ಧನಂಜಯ್ ಮನವಿ ಮಾಡಿದ್ದಾರೆ.
ಸರ್ಕಾರಿ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯ 2ರ ಕಟ್ಟಡ ಸಂಪೂರ್ಣ ಹಾಳಾಗಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಮಳೆ ಬಂದರೆ ಮಲಗುವುದಕ್ಕೂ ಕಷ್ಟವಾಗುತ್ತದೆಡಿ.ಎನ್.ಲಿಂಗಮೂರ್ತಿ ಪದವಿ ವಿದ್ಯಾರ್ಥಿ
ವಿದ್ಯಾರ್ಥಿ ನಿಲಯದಲ್ಲಿ ಶೌಚಾಲಯ ಹಾಳಾಗಿ ತೊಂದರೆಯಾಗುತ್ತಿದೆ. ಮಳೆ ಬಂದರೆ ವಿದ್ಯಾರ್ಥಿ ನಿಲಯ ಸಂಪೂರ್ಣ ಜಲಾವೃತಗೊಳ್ಳುತ್ತದೆ. ನೂತನ ಕಟ್ಟಡ ನಿರ್ಮಾಣ ಮಾಡಬೇಕು-ಭೀಮೇಶ್ ಪದವಿ ವಿದ್ಯಾರ್ಥಿ
ಕಟ್ಟಡದ ಮೇಲ್ಭಾಗದಲ್ಲಿ ಗೋಡೆಯ ಕಬ್ಬಿಣ ಹೊರ ಬಂದು ಮಣ್ಣು ಉದರುತ್ತಿವೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ನಿಲಯಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು- ಕೆ.ಜಿ.ನವೀನ್ ಕುಮಾರ್ ಪದವಿ ವಿದ್ಯಾರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.