ಭಾನುವಾರ, ಆಗಸ್ಟ್ 1, 2021
27 °C
ಕೋವಿಡ್‌ ಐಸಿಯುನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀರಂಗಯ್ಯ ಅಭಿಪ್ರಾಯ

ಕೊರೊನಾ ವಾರಿಯರ್ಸ್‌ | ಮಾನಸಿಕ ಸ್ಥೈರ್ಯವೂ ಮದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕೋವಿಡ್–19 ವಿರುದ್ಧದ ಹೋರಾಟದಲ್ಲಿ ವೈದ್ಯರಷ್ಟೇ ಮುಖ್ಯ ಪಾತ್ರ ವಹಿಸುತ್ತಾರೆ ‘ಡಿ’ ದರ್ಜೆಯ ನೌಕರರು. ವೈದ್ಯರು ಸೋಂಕಿತರಿಗೆ ಚಿಕಿತ್ಸೆ ನೀಡಿದರೆ, ಶುಶ್ರೂಷಕರು ಆರೈಕೆ ಮಾಡುತ್ತಾರೆ. ಡಿ ದರ್ಜೆ ನೌಕರರು ಸೋಂಕಿತರ ಬೇಕು ಬೇಡಗಳನ್ನು ನೋಡಿಕೊಂಡು, ಉಪಚರಿಸುತ್ತಾರೆ.

ಸೋಂಕು ತಗುಲುವ ಅಪಾಯ ಹೆಚ್ಚಿದ್ದರೂ ಧೃತಿಗೆಡದೆ ಸೋಂಕಿತರ ಅಗತ್ಯತೆ ಪೂರೈಸುತ್ತಾರೆ ‘ಡಿ’ ದರ್ಜೆಯ ನೌಕರರು. ಅಂತಹ ಕೋವಿಡ್‌ ವಾರಿಯರ್ಸ್‌ಗಳಲ್ಲಿ ಜಿಲ್ಲಾ ಆಸ್ಪತ್ರೆಯ ಶ್ರೀರಂಗಯ್ಯ ಕೂಡ ಒಬ್ಬರು.


ಶ್ರೀರಂಗಯ್ಯ

ಮೂರು ವರ್ಷಗಳಿಂದ ಜಿಲ್ಲಾ ಆಸ್ಪತ್ರೆಯ ಐಸಿಯುನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀರಂಗಯ್ಯ ಸದ್ಯ ಕೋವಿಡ್‌ ಐಸಿಯುನಲ್ಲಿ ಸೋಂಕಿತರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ.

‘ಕೊರೊನಾ ಸೋಂಕಿತರು ಇತರ ರೋಗಿಗಳಿಗಿಂತ ಭಿನ್ನ ಎಂದು ನನಗೆ ಅನಿಸಲೇ ಇಲ್ಲ. ಹಾಗೆ ನೋಡಿದರೆ ಇತರೆ ಐಸಿಯುಗಳಲ್ಲಿ ಇರುವ ರೋಗಗಳಿಗಿಂತ ಕೊರೊನಾ ಸೋಂಕಿತರು ಅತಿ ಬೇಗ ಗುಣಮುಖರಾಗುತ್ತಾರೆ’ ಎನ್ನುವುದು ಇವರ ಅಭಿಪ್ರಾಯ.

‘ರೋಗಿಗೆ ದಿಂಬು, ಬೆಡ್‌ಶೀಟ್‌, ಬಿಸಿನೀರು, ತಿಂಡಿ, ಊಟದ ವ್ಯವಸ್ಥೆ ಮಾಡುತ್ತೇನೆ. ಎಲ್ಲಕ್ಕಿಂತ ಮುಖ್ಯವಾಗಿ ಸೋಂಕಿತರು ಹಾಗೂ ಅವರ ಅವರ ಕಡೆಯವರ ಮನಸ್ಸಿನಲ್ಲಿ ಕೊರೊನಾ ಬಗ್ಗೆ ತುಂಬಿರುವ ಆತಂಕವನ್ನು ದೂರ ಮಾಡಲು ಪ್ರಯತ್ನಿಸುತ್ತೇನೆ. ಊರು, ವೃತ್ತಿ ಹಾಗೂ ಇತರ ವಿಚಾರಗಳ ಬಗ್ಗೆ ಮಾತನಾಡುತ್ತಲೇ ಅವರ ಅಗತ್ಯತೆಗಳನ್ನು ಅರಿತು, ಪೂರೈಸುವ ಕೆಲಸ ಮಾಡುತ್ತೇನೆ’ ಎನ್ನುತ್ತಾರೆ.

ಸೋಂಕಿತರು ಲವಲವಿಕೆಯಿಂದ ಇದ್ದಾಗ, ಅತ್ಮಸ್ಥೈರ್ಯ ಹೆಚ್ಚಾದಾಗ ಗುಣಮುಖರಾಗುವ ಪ್ರಮಾಣವೂ ಹೆಚ್ಚಿರುತ್ತದೆ ಎನ್ನುವುದು ಶ್ರೀರಂಗಯ್ಯ ಅವರ ಅನುಭವದ ಮಾತು.

ಈ ಮೊದಲು ನಾನು ಐಸೊಲೇಷನ್‌ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಆಗ ಅಲ್ಲಿಗೆ ಗಂಡ, ಹೆಂಡತಿ ಮತ್ತವರ ಇಬ್ಬರು ಮಕ್ಕಳು ವಾರ್ಡ್‌ನಲ್ಲಿ ಇದ್ದರು. ಆಕೆ ಏಳು ತಿಂಗಳ ಗರ್ಭಿಣಿ. ಮಕ್ಕಳು ವಾರ್ಡ್‌ನಲ್ಲಿಯೇ ಆಟವಾಡಿಕೊಂಡಿದ್ದರು. ಗರ್ಭಿಣಿ ಹಾಗೂ ಮಕ್ಕಳು ಆಗಾಗ್ಗೆ ಏನಾದರೂ ತಂದು ಕೊಡುವಂತೆ ಕೋರುತ್ತಿದ್ದರು. ಸಾಧ್ಯವಾದಷ್ಟನ್ನು ಪೂರೈಸಿದ್ದೇನೆ. ನಂತರ ಅವರೆಲ್ಲರೂ ಗುಣಮುಖರಾಗಿ ಮನೆಗೆ ಹೋದರು. ಈಗಲೂ ಕರೆ ಮಾಡಿ ವಿಚಾರಿಸುತ್ತಾರೆ. ಊಟಕ್ಕೆ ಬನ್ನಿ ಎಂದು ಕೆರೆಯುತ್ತಿರುತ್ತಾರೆ. ಇದಕ್ಕಿಂತ ಬೇರೆ ತೃಪ್ತಿಬೇಕೆ ಎಂದು ನೆನಪಿಸಿಕೊಳ್ಳುತ್ತಾರೆ.

‘ಕೆಲ ರೋಗಿಗಳು ಆಗಾಗ್ಗೆ ಟೀ, ಕಾಫಿ ಕೇಳುತ್ತಾರೆ. ಮತ್ತೆ ಕೆಲವರು ನನಗೆ ಬೇಸರವಾಗುತ್ತಿದೆ. ಬಂದು ಇಲ್ಲಿ ಕುಳಿತುಕೊಳ್ಳಿ, ಮಾತನಾಡಬೇಕು ಎಂದು ಒತ್ತಾಯಿಸುತ್ತಾರೆ. ನಾನು ಸಾಧ್ಯವಾದಷ್ಟು ಸಮಯವನ್ನು ಅವರ ಜತೆ ಕಳೆಯುತ್ತೇನೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು