ಸೋಮವಾರ, ಏಪ್ರಿಲ್ 12, 2021
29 °C
ತಾಲ್ಲೂಕು ಆಡಳಿತಕ್ಕೆ ತಲೆನೋವಾದ ಖರೀದಿ ಕೇಂದ್ರ; ಪ್ರತಿಭಟನೆಗೆ ಮುಂದಾದ ಶಾಸಕ

ನಿರೀಕ್ಷೆಗೂ ಮೀರಿ ರಾಗಿ ಆವಕ: ಅವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ರಾಗಿ ಖರೀದಿ ಕೇಂದ್ರಕ್ಕೆ ನಿರೀಕ್ಷೆಗೂ ಮೀರಿ ರಾಗಿ ಬರುತ್ತಿದ್ದು, ಅಂತಿಮ ದಿನದ ಬಗ್ಗೆ ಗೊಂದಲ ಸೃಷ್ಟಿಯಾದ ಕಾರಣ ಆತಂಕಗೊಂಡ ರೈತರು ನಿಗದಿತ ದಿನಕ್ಕೂ ಮೊದಲೇ ರಾಗಿ ತರುತ್ತಿದ್ದಾರೆ.

ಮಾಹಿತಿ ಮತ್ತು ನಿರ್ವಹಣೆಯ ಲೋಪದಿಂದ ರಾಗಿ ಖರೀದಿ ಕೇಂದ್ರದ ಅವ್ಯವಸ್ಥೆಯಿಂದಾಗಿ ರೈತರು ಪರದಾಡಿದರೆ, ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದ ಶಾಸಕ ಡಾ.ರಂಗನಾಥ್
ಮಂಗಳವಾರ ‍ಪ್ರತಿಭಟನೆಗೆ ಮುಂದಾದರು.

ರಾಗಿ ಖರೀದಿ ಕೇಂದ್ರದಲ್ಲಿ ಶನಿವಾರದಿಂದಲೇ ಸಮಸ್ಯೆ ಪ್ರಾರಂಭವಾಗಿದ್ದು, ಸೋಮವಾರ ರಾತ್ರಿ ತಹಶೀಲ್ದಾರ್ ವಿಶ್ವನಾಥ್ ಮತ್ತು ಸಿಪಿಐ ರಾಜು ತಂಡ ವ್ಯವಸ್ಥಿತ ಕಾರ್ಯತಂತ್ರ ರೂಪಿಸಿದ್ದರೂ, ಮಂಗಳವಾರ ಸಮಸ್ಯೆ ಹೆಚ್ಚಾಗಿ ರೈತರು ಪರದಾಡಿದರು. ಕೇಂದ್ರದಲ್ಲಿ ಗೋದಾಮಿನ ಸಮಸ್ಯೆ ಒಂದೆಡೆಯಾದರೆ, ರೈತರು ತಂದ ರಾಗಿಯನ್ನು ಎತ್ತುವಲ್ಲಿ ಸಂಬಂಧಪಟ್ಟವರು ವಿಫಲರಾಗಿ ಸಮಸ್ಯೆ ಜಟಿಲವಾಯಿತು. ಆವರಣದ ತುಂಬ ರಾಗಿ ತಂದ ಟ್ರ್ಯಾಕ್ಟರ್ ಮತ್ತು ರಾಗಿ ಚೀಲಗಳಿಂದ ತಂಗುದಾಣಗಳು ಭರ್ತಿಯಾಯಿತು.

ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಬಂದ ಶಾಸಕ ಡಾ.ರಂಗನಾಥ್ ನೂರಾರು ರೈತರಿಂದ ಮಾಹಿತಿ ಪಡೆದಾಗ, ನಿತ್ಯ 2 ಸಾವಿರ ಕ್ವಿಂಟಲ್ ರಾಗಿ ಬರುತ್ತಿದೆ. ಈಗಾಗಲೇ ನೋಂದಾಯಿಸಿಕೊಂಡ ರೈತರಲ್ಲಿ ರಾಗಿ ಖರೀದಿ ಇದೇ 14ಕ್ಕೆ ಸ್ಥಗಿತಗೊಳ್ಳುತ್ತದೆ ಎಂಬ ವದಂತಿ ಹಬ್ಬಿದ್ದು, ಆತಂಕಗೊಂಡವರೆಲ್ಲ ತಿಳಿಸಿದ ದಿನಕ್ಕಿಂತ ಮೊದಲೆ ರಾಗಿ ತಂದು ಹಾಕಲು ಪ್ರಯತ್ನಿಸುತ್ತಿದ್ದಾರೆ. ಗೋದಾಮಿನ ಸಮಸ್ಯೆ, ರಾಗಿ ಸಾಗಿಸಲು ವಾಹನ, ಗುತ್ತಿಗೆದಾರರ ವೈಫಲ್ಯಗಳ ಬಗ್ಗೆ ರೈತರು ದೂರಿದರು.

ನಂತರ ಶಾಸಕ ಡಾ.ರಂಗನಾಥ್, ಜಿಲ್ಲಾಧಿಕಾರಿ ವೈಆರ್ ಪಾಟೀಲ್ ಸೇರಿದಂತೆ ಅಧಿಕಾರಿಗಳನ್ನು ಸಂಪರ್ಕಿಸಿ ರಾಗಿ ಖರೀದಿ ಕೇಂದ್ರದ ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು. ಅಧಿಕಾರಿಗಳು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿ, ಎಪಿಎಂಸಿ ಗೋದಾಮು ಸೇರಿದಂತೆ ತುಮಕೂರು ಗುಬ್ಬಿ ಗೇಟ್ ಬಳಿಯ ಮತ್ತು ನೆಲಮಂಗಲದ ಗೋದಾಮಿನಲ್ಲಿ ಖರೀದಿಸಿದ ರಾಗಿ ಸಂಗ್ರಹಣೆಗೆ ಕ್ರಮ ತೆಗೆದುಕೊಳ್ಳುವುದರ ಜತೆಗೆ ಹೆಚ್ಚವರಿ ಲಾರಿ ಮತ್ತು ಲೋಡರ್‌ಗಳನ್ನು ವ್ಯವಸ್ಥೆ ಮಾಡುವ ಮೂಲಕ ಕ್ರಮ ತೆಗೆದುಕೊಂಡ ಮೇರೆಗೆ ಪ್ರತಿಭಟನೆ ಹಿಂಪಡೆದಿದ್ದಾರೆ.

ತಹಶೀಲ್ದಾರ್ ವಿಶ್ವನಾಥ್, ಸಿಪಿಐ ರಾಜು, ಸಹಾಯಕ ಕೃಷಿ ನಿರ್ದೇಶಕಿ ಸೌಮ್ಯಶ್ರಿ, ಎಪಿಎಂಸಿ ವ್ಯವಸ್ಥಾಪಕಿ ಹೇಮಲತಾ, ಆಹಾರ ಶಾಖೆಯ ಶಿರಸ್ತೇದಾರ ಮಲ್ಲಿಕಾರ್ಜುನ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು