ಶುಕ್ರವಾರ, ಮೇ 27, 2022
22 °C

ತುಮಕೂರು: ಇಲಿ, ಹೆಗ್ಗಣ ಪಾಲಾದ ರಾಗಿ ತೆನೆ

ಪಾಂಡುರಂಗಯ್ಯ ಎ.ಹೊಸಹಳ್ಳಿ Updated:

ಅಕ್ಷರ ಗಾತ್ರ : | |

Prajavani

ತುರುವೇಕೆರೆ: ತಾಲ್ಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕಟಾವಿಗೆ ಬಂದಿದ್ದ ರಾಗಿ ಫಸಲು ಹಾನಿಗೀಡಾಗಿದೆ.

ತಾಲ್ಲೂಕಿನ 14,000 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಆಗಸ್ಟ್ ಅಂತ್ಯದಲ್ಲಿ ರಾಗಿ ತಡವಾಗಿ ಬಿತ್ತನೆಯಾಗಿತ್ತು. ಹಾಗಾಗಿ, ರೈತರು ಕೇವಲ 90 ದಿನಗಳಲ್ಲಿ ಕಟಾವಿಗೆ ಬರುವ ರಾಗಿ ತಳಿಗಳನ್ನು ಬಿತ್ತನೆ ಮಾಡಿದ್ದರು.

ಆದರೆ, ಸೆಪ್ಟೆಂಬರ್ ಮಧ್ಯದಿಂದ ಅಕ್ಟೋಬರ್ ತನಕವೂ ವಾಡಿಕೆಗಿಂತ ಶೇ 23ರಷ್ಟು ಹೆಚ್ಚುವರಿ ಮಳೆ ಸುರಿದಿದೆ. ರೈತರು ರಾಗಿ ಹೊಲಕ್ಕೆ ಉತ್ತಮ ಗೊಬ್ಬರ ನೀಡಿದ್ದರಿಂದ ಪೈರು ಪುಷ್ಕಳವಾಗಿ ಬೆಳೆದಿದೆ. ತೆನೆ ಒಳ್ಳೆಯ ಕಾಳು ಕಟ್ಟಿ ಇನ್ನೂ ಚೆನ್ನಾಗಿ ಬಲಿತು ಕಟಾವಿಗೆ ಬರಲು ಒಂದು ತಿಂಗಳೇ ಬೇಕಿತ್ತು. 

ಅಕ್ಟೋಬರ್‌ ಮಾಹೆಯಲ್ಲೇ ತಾಲ್ಲೂಕಿನ ಅಲ್ಲಲ್ಲಿ ರಾಗಿ ತೆನೆ ನೆಲಕಚ್ಚಲು ಶುರು ಮಾಡಿತು. ಈಗ ಮೂರ್ನಾಲ್ಕು ದಿನಗಳಿಂದ ಸೋನೆ ಮಳೆಗೆ ಇನ್ನೂ ಬಲಿಯದ ರಾಗಿ ಹೊಲ ಮಳೆಗೆ ನೆನೆದು ತೆನೆಯ ಬಾರಕ್ಕೆ ಇಡೀ ಹೊಲವೇ ಮಲಗಿದೆ. ಮತ್ತೊಂದೆಡೆ ದೊಡ್ಡುಸ್ಲು ಮಳೆಗೆ ಬಿತ್ತನೆಯಾಗಿದ್ದ ರಾಗಿ ಬಹುಪಾಲು ಬಲಿತಿದ್ದು, ಇನ್ನೇನು ಕಟಾವು ಮಾಡಬೇಕಿದ್ದ ಹೊಲವೂ ಹಾನಿಗೀಡಾಗಿದೆ.

ಮಾದಿಹಳ್ಳಿ, ಬಿಗಿನೇಹಳ್ಳಿ, ಸಂಗ್ಲಾಪುರ, ದಬ್ಬೇಘಟ್ಟ, ತೋವಿನಕೆರೆ, ಎ. ಹೊಸಹಳ್ಳಿ, ಬಾಣಸಂದ್ರ, ತಾಳ್ಕೆರೆ, ಕುರುಬರಹಳ್ಳಿ ಬ್ಯಾಲಾ, ತಾವರೆಕೆರೆ, ಅಕ್ಕಳಸಂದ್ರ ಗೊಲ್ಲರಹಟ್ಟಿ, ಅಂಗರೇಕನಹಳ‍್ಳಿ, ಮಲ್ಲಾಘಟ್ಟ, ಆನೆಕೆರೆ, ಮಾಯಸಂದ್ರ, ಸಾರಿಗೇಹಳ್ಳಿ, ನಾಗಲಾಪುರ, ಮಲ್ಲಾಘಟ್ಟ ಅಮಾನಿಕೆರೆ, ಹರಿದಾಸನಹಳ್ಳಿ, ಕೆಬ್ಬೇಪಾಳ್ಯ, ಲೋಕಮ್ಮನಹಳ್ಳಿ ಸೇರಿದಂತೆ ಹಲವೆಡೆ ರಾಗಿ ಬೆಳೆ ಹಾನಿಗೀಡಾಗಿದೆ.

‘ರಾಗಿ ಹೊಲ ನೆಲ ಕಚ್ಚಿದ್ದು ಇಲಿ, ಹೆಗ್ಗಣಗಳು ಹೊಲದ ತುಂಬೆಲ್ಲಾ ಬೊನು ತೋಡಿಕೊಂಡು ರಾಗಿ ತೆನೆಯನ್ನು ಕತ್ತರಿಸಿವೆ. ಅಲ್ಲಲ್ಲಿ ಅರ್ಧಂಬರ್ಧ ರಾಗಿ ಇಲುಕುಗಳನ್ನು ತಿಂದು ಹಾಕಿರುವ ಕುರುಹು ಕಾಣಸಿಗುತ್ತವೆ. ಅಲ್ಲದೆ ರಾಗಿ ಮಲಗಿರುವ ಯಾವುದೇ ಹೊಲಕ್ಕೆ ಹೋದರೂ ಗಿಳಿ, ನವಿಲು ಸೇರಿದಂತೆ ಅನೇಕ ಪಕ್ಷಿಗಳು ರಾಗಿ ತೆನೆಯ ಕಾಳುಗಳನ್ನು ಹೆಕ್ಕಿ ತಿನ್ನುವುದು ಕಾಣಸಿಗುತ್ತದೆ’ ಎಂದು ಹೇಳಿದರು ದೊಂಬರನಹಳ್ಳಿ ಗೊಲ್ಲಹಟ್ಟಿಯ ರೈತ ಶಿವಸ್ವಾಮಿ.

ನೆಲ ಕಚ್ಚಿರುವ ರಾಗಿ ಪೈರನ್ನು ದಿನಗಟ್ಟಲೆ ಬಗ್ಗಿ ಕಟಾವು ಮಾಡುವುದು ಕಷ್ಟವೆಂದು ಆಳುಗಳು ಹೊಲದ ಕೊಯ್ಲಿಗೆ ಬರಲು ಅಂಜುತ್ತಾರೆ. ಜೊತೆಗೆ ಬಿದ್ದಿರುವ ಹೊಲವನ್ನು ಯಂತ್ರಗಳಿಂದಲೂ ಕಟಾವು ಮಾಡಲು ಆಗದು. ಹಾಗಾಗಿ ಹೆಚ್ಚಿನ ಕೂಲಿ ಕೊಡುತ್ತೇವೆಂದು ಹೇಳಿದರೂ ಕೂಲಿಯಾಳುಗಳು ಮೂಗು ಮುರಿಯುತ್ತಾರೆ. ಹೊಲ ಹಾಗೆಯೇ ಬಿಟ್ಟರೆ ಪೈರು ಗೆದ್ದಲಿಡಿದು ರಾಗಿ, ಹುಲ್ಲು ಎರಡೂ ಕೈಗೆ ಸಿಗುವುದಿಲ್ಲ ಎಂಬುದು ರೈತರ ಆತಂಕ.

‘ನಾಲ್ಕು ಎಕರೆಯಲ್ಲಿ ರಾಗಿ ಬಿತ್ತನೆ ಮಾಡಲಾಗಿದೆ. ಬಿತ್ತನೆಬೀಜ, ಗೊಬ್ಬರ, ಆಳುಕಾಳು ಉಳುಮೆಗೆಂದು ಸಾವಿರಾರು ರೂಪಾಯಿ ಖರ್ಚು ಮಾಡಲಾಗಿದೆ. ಮಳೆಯಿಂದ ರಾಗಿ ನೆನೆದಿದ್ದು ಒಳ್ಳೆಯ ರಾಗಿ ಮತ್ತು ಹುಲ್ಲು ಸಿರುವುದಿಲ್ಲ. ಈ ಹುಲ್ಲನ್ನು ದನ, ಕರುಗಳ ಮೇವಿಗೆ ಬಳಸಲು ಸಾಧ್ಯವಿಲ್ಲ’ ಎಂದು ಬಿಗಿನೇಹಳ್ಳಿಯ ರೈತ ರವೀಂದ್ರಕುಮಾರ್ ನೋವು ತೋಡಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು