ತುಮಕೂರು: ರೈಲ್ವೆ ಇಲಾಖೆಯಲ್ಲಿ ವಿವಿಧ ಹಂತದ ಸುಮಾರು 46 ಸಾವಿರ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಪಡೆದುಕೊಳ್ಳಲು ಪ್ರಯತ್ನಿಸುವಂತೆ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸಲಹೆ ಮಾಡಿದರು.
ನಗರದಲ್ಲಿ ಶುಕ್ರವಾರ ತಿಗಳ ಸಮಾಜದವರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿ, ‘ಕನ್ನಡದಲ್ಲಿ ರೈಲ್ವೆ ನೇಮಕಾತಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.
ಬೆಂಗಳೂರಿಗೆ ನಗರ ಪರ್ಯಾಯವಾಗಿ ಬೆಳೆಯುತ್ತಿದ್ದು, ಹೆಚ್ಚಿನ ಅನುಕೂಲ ಕಲ್ಪಿಸುವ ಅಗತ್ಯವಿದೆ. ಜಿಲ್ಲೆಗೆ ಇನ್ನೂ 2-3 ವಿಶೇಷ ಯೋಜನೆಗಳನ್ನು ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
‘ತಿಗಳ ಸಮುದಾಯದ ಜತೆಗೆ ಅವಿನಾಭಾವ ಸಂಬಂಧವಿದೆ. 45 ವರ್ಷಗಳ ಹಿಂದೆ ನಾನು ಬೆಂಗಳೂರಿಗೆ ಬಂದಾಗ ಇದೇ ಸಮುದಾಯದವರು ಆಶ್ರಯ ನೀಡಿದ್ದರು. ಸಮಾಜದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು’ ಎಂದು ತಿಳಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ‘ಲೋಕಸಭೆ ಚುನಾವಣೆ ಸಮಯದಲ್ಲಿ ಎಷ್ಟೇ ಒತ್ತಡ ಬಂದರೂ ಸೋಮಣ್ಣ ಅವರನ್ನು ಬೆಂಬಲಿಸಿದ ತಿಗಳ ಸಮಾಜದ ಸಹಕಾರ ಮರೆಯುವಂತಿಲ್ಲ’ ಎಂದು ಹೇಳಿದರು.
ಶಾಸಕ ಬಿ.ಸುರೇಶ್‌ಗೌಡ, ‘ಸೋಮಣ್ಣ ಸಚಿವರಾದ ಮೂರೇ ತಿಂಗಳಲ್ಲಿ ರೈಲ್ವೆ ಇಲಾಖೆಯಲ್ಲಿ ಅಭಿವೃದ್ಧಿಯ ಕ್ರಾಂತಿಯನ್ನೇ ಮಾಡಿದ್ದಾರೆ. ಇನ್ನಷ್ಟು ಕೆಲಸ ಮಾಡಿ ಮಾದರಿ ಕ್ಷೇತ್ರ ಮಾಡುತ್ತಾರೆ’ ಎಂದು ಅಭಿಪ್ರಾಯಪಟ್ಟರು.
ಮಾಜಿ ಸಂಸದ ಜಿ.ಎಸ್.ಬಸವರಾಜು, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ತಿಗಳ ಸಮುದಾಯದ ಮುಖಂಡ ಟಿ.ಎಲ್.ಕುಂಭಯ್ಯ, ಯಜಮಾನರಾದ ಹನುಮಂತರಾಜು, ಗಂಗಹನುಮಯ್ಯ, ದಾಸೇಗೌಡ, ಕುಮಾರಣ್ಣ, ಶಿವಕುಮಾರ್, ನಗರ ಪಾಲಿಕೆ ಮಾಜಿ ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಜೆಡಿಎಸ್ ಮುಖಂಡ ಗುಬ್ಬಿ ನಾಗರಾಜು, ಬಿಜೆಪಿ ಮುಖಂಡ ದಿಲೀಪ್‍ಕುಮಾರ್, ಮುಖಂಡರಾದ ಯೋಗಾನಂದಕುಮಾರ್, ಕೃಷ್ಣಪ್ಪ, ಕುಂಭಯ್ಯ, ಕುಂಭಿನರಸಯ್ಯ, ದಾಂಡೇಲಿ ಗಂಗಣ್ಣ, ಎ.ನರಸಿಂಹಮೂರ್ತಿ, ಟಿ.ಎಚ್.ಜಯರಾಂ, ಟಿ.ಜಿ.ನರಸಿಂಹರಾಜು, ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಜಹಂಗೀರ್ ರವೀಶ್, ಲಕ್ಷ್ಮೀಶ್, ಧನಿಯಾಕುಮಾರ್ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.