ಮಂಗಳವಾರ, ಏಪ್ರಿಲ್ 7, 2020
19 °C
; ಬಿಜೆಪಿ ಮುಖಂಡ ಹಾಲನೂರು ಲೇಪಾಕ್ಷ್ ಬಂಡಾಯ ಸಾಧ್ಯತೆ?

ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ: ಟಿಕೆಟ್ ದೊರೆಯದಿದ್ದಕ್ಕೆ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಆಗ್ನೇಯ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯು ಶಿರಾದ ಚಿದಾನಂದಗೌಡ ಅವರಿಗೆ ಟಿಕೆಟ್ ನೀಡಿರುವುದು ಬಿಜೆಪಿ ಜಿಲ್ಲಾ ವಕ್ತಾರ ಹಾಲನೂರು ಲೇಪಾಕ್ಷ್ ಅವರಲ್ಲಿ ಅಸಮಾಧಾನ ಮೂಡಿಸಿದೆ.

ಬುಧವಾರ ನಗರದಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿದ ಲೇಪಾಕ್ಷ್, ‘ಪಕ್ಷವು ನನ್ನ ಮನವಿ ಪರಿಗಣಿಸದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವೆ’ ಎಂದು  ಘೋಷಿಸಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಈ ಸಂಬಂಧ ಬಹಿರಂಗ ಪತ್ರ ಸಹ ಬರೆದಿದ್ದಾರೆ.

ಕಳೆದ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಲೇಪಾಕ್ಷ್ ಅವರಿಗೆ ಬಿಜೆಪಿಯು ಟಿಕೆಟ್ ನೀಡಿತ್ತು. ಟಿಕೆಟ್ ಘೋಷಣೆಗೂ ಮುನ್ನವೇ ಅವರು ಚಿತ್ರದುರ್ಗ, ದಾವಣಗೆರೆ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪ್ರಚಾರ ಕೈಗೊಂಡಿದ್ದರು. ಇನ್ನೇನು ನಾಮಪತ್ರ ಸಲ್ಲಿಸಬೇಕು ಎನ್ನುವಷ್ಟರಲ್ಲಿ ಲೇಪಾಕ್ಷ್ ಅವರನ್ನು ಬದಲಿಸಿ, ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಸೋತ ವೈ.ಎ.ನಾರಾಯಣಸ್ವಾಮಿ ಅವರನ್ನು ಕಣಕ್ಕಿಳಿಸಲಾಯಿತು. ನಾರಾಯಣಸ್ವಾಮಿ ಗೆಲುವು ಕಂಡರು.

‘ನಿಮ್ಮ ಮನೆ ದವಳಗಿರಿಗೆ ನನ್ನ ಕರೆಸಿಕೊಂಡು ಜಿ.ಎಸ್.ಬಸವರಾಜು ಸಮ್ಮುಖದಲ್ಲಿ ಅಭ್ಯರ್ಥಿ ಬದಲಾವಣೆ ಮಾಡಿದಿರಿ. ನಾನು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗುತ್ತೇನೆ. ನಿನಗೆ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಟಿಕೆಟ್ ನೀಡುತ್ತೇನೆ. ಇಲ್ಲವೆ ಯಾವುದಾದರೂ ನಿಗಮ ಮಂಡಳಿಗೆ ಅಧ್ಯಕ್ಷನನ್ನಾಗಿ ಮಾಡುತ್ತೇನೆ. ಈಗ ನೀನು ಮಾಡಿರುವ ಖರ್ಚು ವೆಚ್ಚಗಳನ್ನು ಕೊಡಿಸುತ್ತೇನೆ ಎಂದು ಎಲ್ಲರ ಸಮ್ಮುಖದಲ್ಲಿ ಭರವಸೆ ನೀಡಿದ್ದೀರಿ. ನಿಮ್ಮ ಮಾತಿಗೆ ಗೌರವ ಕೊಟ್ಟು ನಾನು ನಾಮಪತ್ರ ಸಲ್ಲಿಸಲಿಲ್ಲ. ತುಮಕೂರಿಗೆ ಪ್ರಚಾರಕ್ಕೆ ಬಂದಾಗ ಲೇಪಾಕ್ಷ್ ಅವರಿಗೆ ಅನ್ಯಾಯವಾಗಿದೆ. ಅವರನ್ನು ಕೈ ಬಿಡುವುದಿಲ್ಲ ಎಂದು ಹೇಳಿದ್ದಿರಿ. ಆದರೆ ಈಗ ನನಗೆ ಅನ್ಯಾಯವಾಗಿದೆ’ ಎಂದು ಯಡಿಯೂರಪ್ಪ ಅವರಿಗೆ ಲೇಪಾಕ್ಷ್ ಪತ್ರ ಬರೆದಿದ್ದಾರೆ.

ಅನ್ಯಾಯ ಸರಿಪಡಿಸಿ

‘15 ವರ್ಷಗಳಿಂದ ಬಿಜೆಪಿಯಲ್ಲಿ ಇದ್ದೇನೆ. ಇತ್ತೀಚಿನವರೆಗೂ ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದವರಿಗೆ ಟಿಕೆಟ್ ನೀಡಲಾಗಿದೆ. ಪಕ್ಷದ ಸ್ಥಳೀಯ ಮತ್ತು ರಾಜ್ಯ ನಾಯಕರು ಚರ್ಚಿಸಿ ಈ ಅನ್ಯಾಯ ಸರಿಪಡಿಸಬೇಕು. ಇಲ್ಲದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಚಿಂತಿಸುತ್ತೇನೆ’ ಎಂದು ಲೇಪಾಕ್ಷ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)