ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪುಗಳ ಬುತ್ತಿ ಕಟ್ಟಿಕೊಂಡ ಕೆಡೆಟ್ಸ್‌

ಅಂತರ್‌ ಗ್ರೂಪ್‌ ಬಾಲಕಿಯರ ಥಲ್‌ ಸೈನಿಕ್‌ ಶಿಬಿರ
Last Updated 18 ಆಗಸ್ಟ್ 2019, 19:52 IST
ಅಕ್ಷರ ಗಾತ್ರ

ತುಮಕೂರು: ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಝಲಕ್‌ ಇತ್ತು. ಯೋಗ ಪ್ರದರ್ಶನ, ಮೂಕಾಭಿನಯ, ಕವಿತೆ ವಾಚನಗಳೂ ಇದ್ದವು. ಸ್ಪರ್ಧೆಗಳಲ್ಲಿ ವಿಜೇತರಾದ ಕ್ಯಾಡೆಟ್‌ಗಳಿಗೆ ಬಹುಮಾನಗಳನ್ನು ಪ್ರದಾನ ಮಾಡಲಾಯಿತು.

ತುಮಕೂರಿನ 4ನೇ ಕರ್ನಾಟಕ ಬೆಟಾಲಿಯನ್‌ ಮತ್ತು ಎನ್‌.ಸಿ.ಸಿ. ಬೆಂಗಳೂರು ಗ್ರೂಪ್‌ ‘ಎ’ ಸಹಯೋಗದಲ್ಲಿ ಆಯೋಜಿಸಿದ್ದ ‘ಅಂತರ್‌ ಗ್ರೂಪ್‌ ಬಾಲಕಿಯರ ಥಲ್‌ ಸೈನಿಕ್‌ ಶಿಬಿರ’ದಲ್ಲಿ ಕಂಡ ನೋಟಗಳಿವು.

ರಾಜ್ಯದ ಆರು ಗ್ರೂಪ್‌ಗಳಿಂದ ಆಯ್ಕೆಯಾಗಿ ಬಂದಿದ್ದ 240 ಶಿಬಿರಾರ್ಥಿಗಳು ಸವಿ ನೆನಪುಗಳ ಬುತ್ತಿಯನ್ನು ಕಟ್ಟಿಕೊಂಡರು.

ಶಿಬಿರದಲ್ಲಿ ನಡೆದ ಸೈನಿಕ ತರಬೇತಿ ಸ್ಪರ್ಧೆಗಳಲ್ಲಿ ವಿಜೇತರಾದ ಕೆಡೆಟ್‌ಗಳಿಗೆ ಕರ್ನಾಟಕ ಮತ್ತು ಗೋವಾ ಎನ್‌.ಸಿ.ಸಿ. ನಿರ್ದೇಶನಾಲಯದ ಡೆಪ್ಯೂಟಿ ಡೈರೆಕ್ಟರ್‌ ಜನರಲ್‌ ಏರ್‌ ಕಮಾಂಡರ್‌ ಲಲಿತ್‌ ಕುಮಾರ್‌ ಜೈನ್‌ ಅವರು ಪದಕಗಳನ್ನು ಪ್ರದಾನ ಮಾಡಿದರು.

ಲಲಿತ್‌ ಕುಮಾರ್‌ ಜೈನ್‌ ಮಾತನಾಡಿ, ಆರ್ಥಿಕ ಮತ್ತು ಸಾಮಾಜಿಕ ನೆಲೆಯಲ್ಲಿ ಹಲವಾರು ಶಕ್ತಿಗಳು ಸಮಾಜವನ್ನು ವಿಭಜನೆ ಮಾಡುತ್ತಿವೆ. ಇಂತಹ ಸ್ಥಿತಿಯಲ್ಲಿ ಬದಲಾವಣೆ ಎಂಬುದು ನಮ್ಮಿಂದ, ನೆರೆಹೊರೆಯಿಂದ ಆಗಬೇಕು. ಒಬ್ಬರಿಗೊಬ್ಬರು ಕೈ ಜೋಡಿಸಿ ಕೆಲಸ ಮಾಡಿದಾಗ ಸುಧಾರಣೆ ಸಾಧ್ಯವಾಗುತ್ತದೆ ಎಂದರು.

ಶಿಬಿರದಲ್ಲಿನ ಸ್ಪರ್ಧೆಗಳಲ್ಲಿನ ಬಹುಮಾನಗಳಿಗಿಂತ ಅನುಭವ ದೊಡ್ಡದು. ಅದುವೇ ನಿಮ್ಮನ್ನು ಸವಾಲುಗಳನ್ನು ಎದುರಿಸಲು ಸ್ಥೈರ್ಯ ತುಂಬುತ್ತದೆ. ನೀವು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್‌, ನಮ್ಮದು ಯುವಜನರು ಹೆಚ್ಚು ಇರುವ ದೇಶ. ಎನ್‌.ಸಿ.ಸಿ., ಎನ್‌.ಎಸ್.ಎಸ್‌., ಸ್ಕೌಟ್ಸ್‌ ಮತ್ತು ಗೈಡ್ಸ್‌ನಂತಹ ಸಂಸ್ಥೆಗಳು ಯುವ ಸಮೂಹದಲ್ಲಿ ದೇಶಾಭಿಮಾನ ಮೂಡಿಸಲು ನೆರವಾಗುತ್ತವೆ. ಎನ್‌.ಸಿ.ಸಿ. ಅನ್ನು ಪ್ರೌಢಶಾಲಾ ಮಟ್ಟದಲ್ಲಿ ಕಡ್ಡಾಯ ಮಾಡಿದರೆ ಇನ್ನು ಉತ್ತಮ ಎಂದು ಅಭಿಪ್ರಾಯಪಟ್ಟರು.

ಶಿಬಿರದ ಚಟುವಟಿಕೆಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಬೆಂಗಳೂರು ‘ಎ’ ತಂಡ ಪ್ರಥಮ ಬಹುಮಾನವನ್ನು ಹಾಗೂ ಮಂಗಳೂರು ತಂಡವು ದ್ವಿತೀಯ ಸ್ಥಾನದ ಬಹುಮಾನವನ್ನು ಗಳಿಸಿತು.

ಕಾರ್ಯಕ್ರಮದಲ್ಲಿ ಚೀಫ್‌ ಟ್ರೈನಿಂಗ್‌ ಆಫಿಸರ್ ಕರ್ನಲ್‌ ರಾಜೇಶ್‌ ವರ್ಮಾ, ಕ್ಯಾಂಪ್‌ ಕಮಾಡೆಂಟ್‌ ಕರ್ನಲ್‌ ಶೈಲೇಶ್‌ ಶರ್ಮಾ ಇದ್ದರು. ಬೆಂಗಳೂರು, ಮೈಸೂರು, ಬಳ್ಳಾರಿ, ಬೆಳಗಾವಿ, ಮಂಗಳೂರು ಎನ್‌.ಸಿ.ಸಿ. ತಂಡಗಳು ಶಿಬಿರದಲ್ಲಿ ಭಾಗವಹಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT