ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಿರ್ಲಕ್ಷಕ್ಕೆ ಒಳಗಾದ ಗುಬ್ಬಿ ವೀರಣ್ಣ ಸಮಾಧಿ

ಸಮಾಧಿ ಸ್ಥಳದ ಸತ್ತ ಮದ್ಯದ ಬಾಟಲಿ: ರಂಗಭೂಮಿ ಅಧ್ಯಯನ ಸ್ಥಳವಾಗಿಸಲು ಸ್ಥಳೀಯರ ಒತ್ತಾಯ
ಶಾಂತರಾಜು ಎಚ್‌.ಜಿ.
Published 25 ಡಿಸೆಂಬರ್ 2023, 8:31 IST
Last Updated 25 ಡಿಸೆಂಬರ್ 2023, 8:31 IST
ಅಕ್ಷರ ಗಾತ್ರ

ಗುಬ್ಬಿ: ನಾಟಕರತ್ನ ಗುಬ್ಬಿ ವೀರಣ್ಣ ಅವರ ಪಟ್ಟಣದಲ್ಲಿನ ಸಮಾಧಿ ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ನಟ, ನಿರ್ಮಾಪಕ, ನಿರ್ದೇಶಕ ಮತ್ತು ನಾಟಕ ಮಂಡಳಿ ವ್ಯವಸ್ಥಾಪಕರಾಗಿ ಗುಬ್ಬಿ ವೀರಣ್ಣ ಅನೇಕ ಪ್ರತಿಭಾನ್ವಿತ ಕಲಾವಿದರನ್ನು ಈ ನಾಡಿಗೆ ನೀಡಿದ್ದಾರೆ. ಡಾ.ರಾಜಕುಮಾರ್, ನರಸಿಂಹರಾಜು, ಜಿ.ವಿ. ಅಯ್ಯರ್, ಉದಯ್ ಕುಮಾರ್, ಗಿರೀಶ್ ಕಾರ್ನಾಡ್ ಅವರಂತಹ ಮೇರುನಟರನ್ನು ಪರಿಚಯಿಸಿರುವ ಜೊತೆಗೆ 150ಕ್ಕೂ ಹೆಚ್ಚು ಕಲಾವಿದರನ್ನೊಳಗೊಂಡ ನಾಟಕ ತಂಡ ಕಟ್ಟಿಕೊಂಡು ನಾಡಿನ ಉದ್ದಗಲ ಸಂಚರಿಸಿ ಪ್ರದರ್ಶನ ನೀಡಿದ್ದವರು ಗುಬ್ಬಿ ವೀರಣ್ಣ.

ಆದರೆ ಗುಬ್ಬಿ ವೀರಣ್ಣ ಅವರ ಸಮಾಧಿಗೆ ಸೂಕ್ತ ಕಾಯಕಲ್ಪ ದೊರೆತಿಲ್ಲ. 1972ರಲ್ಲಿ ನಿಧನರಾದ ವೀರಣ್ಣ ಅವರ ಅಂತಿಮ ಸಂಸ್ಕಾರವನ್ನು ಪಟ್ಟಣದ ಹೃದಯ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಅವರ ಜಮೀನಿನಲ್ಲಿ ನೆರವೇರಿಸಲಾಗಿತ್ತು. ಅಲ್ಲಿಯೇ ಸಮಾಧಿ ನಿರ್ಮಿಸಲಾಗಿದೆ.

ವೀರಣ್ಣ ಅವರ ಮೂವರು ಪತ್ನಿಯರ ಸಮಾಧಿಗಳು ಅಕ್ಕಪಕ್ಕದಲ್ಲಿಯೇ ಇವೆ. ಸಮಾಧಿಯ ಸುತ್ತಮುತ್ತ ಹಾಗೂ ಚಾವಣಿಯಲ್ಲಿ ಗಿಡ-ಗಂಟಿ ಬೆಳೆದಿದ್ದು, ಸಮಾಧಿ ಸಮೀಪ ಹೋಗಲು ಭಯಪಡುವಂತಿದೆ. ಸಮೀಪದಲ್ಲಿಯೇ ಮದ್ಯದ ಅಂಗಡಿ ಇದ್ದು, ಮದ್ಯಪಾನ ಮಾಡಿ ಸಮಾಧಿಯ ಸುತ್ತಮುತ್ತ ಖಾಲಿ ಬಾಟಲ್‌ ಎಸೆದಿರುವುದು ಕಣ್ಣಿಗೆ ರಾಚುತ್ತದೆ.

ಜಮೀನು ವಿಚಾರವಾಗಿ ಕುಟುಂಬದ ಸದಸ್ಯರ ನಡುವೆ ನ್ಯಾಯಾಲಯದಲ್ಲಿ ವ್ಯಾಜ್ಯ ಇದೆ ಎನ್ನುವ ಕಾರಣವನ್ನೇ ನೆಪವಾಗಿಸಿಕೊಂಡಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಮಾಧಿಗೆ ಕಾಯಕಲ್ಪ ನೀಡಿ ರಕ್ಷಣೆಗೆ ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಸ್ಥಳೀಯರು.

ಗುಬ್ಬಿ ವೀರಣ್ಣನವರ ಪ್ರೇರಣೆಯಿಂದ ತಾಲ್ಲೂಕಿನಲ್ಲಿ ಇಂದಿಗೂ ರಂಗಕಲೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದರೂ, ನಾಟಕರತ್ನನಿಗೆ ಅಗತ್ಯ ಗೌರವ ಸಲ್ಲಿಸದಿರುವುದು ತಾಲ್ಲೂಕಿನ ಜನ ನಾಚಿಕೆ ಪಡುವಂತಾಗಿದೆ.

ರಂಗಭೂಮಿ ಅಧ್ಯಯನಕ್ಕೆ ಸೂಕ್ತ ಸ್ಥಳವನ್ನಾಗಿಸುವ ಜೊತೆಗೆ ರಂಗಭೂಮಿ ವಸ್ತುಸಂಗ್ರಹಾಲಯವನ್ನಾಗಿ ಮಾಡಬಹುದಾಗಿದ್ದ ಜಾಗವನ್ನು ಮಧ್ಯದ ಖಾಲಿಬಾಟಲ್‌ಗಳ ಸಂಗ್ರಹವನ್ನಾಗಿಸುತ್ತಿರುವುದು ವಿಪರ್ಯಾಸ. ಗುಬ್ಬಿ ವೀರಣ್ಣ ವಂಶಸ್ಥರಲ್ಲಿ ಸಾಕಷ್ಟು ಉತ್ತಮ ಕಲಾವಿದರಿದ್ದರೂ, ಕುಟುಂಬಸ್ಥರಾಗಲಿ, ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ, ರಂಗಕರ್ಮಿಗೆ ಸಲ್ಲಿಸಬಹುದಾಗಿದ್ದ ಗೌರವ ಇಲ್ಲವಾಗಿಸಿದ್ದಾರೆ. ವೀರಣ್ಣ ಅವರ ಸಮಾಧಿ ಕೇವಲ ಅವರ ಕುಟುಂಬಕ್ಕೆ ಸೀಮಿತವಾಗಿಲ್ಲದೆ, ಸಾರ್ವಜನಿಕ ಸ್ವತ್ತಾಗಿದ್ದರೂ ಅದನ್ನು ಕಡೆಗಣಿಸಲಾಗಿದೆ ಎನ್ನುವುದು ಸಾರ್ವಜನಿಕರ ಆರೋಪ.

ಗುಬ್ಬಿ ವೀರಣ್ಣನ ಸಮಾಧಿ ಸುತ್ತಮುತ್ತ ಬಿದ್ದಿರುವ ತ್ಯಾಜ್ಯ
ಗುಬ್ಬಿ ವೀರಣ್ಣನ ಸಮಾಧಿ ಸುತ್ತಮುತ್ತ ಬಿದ್ದಿರುವ ತ್ಯಾಜ್ಯ

ವೀರಣ್ಣ ಅವರ ಶ್ರೇಷ್ಠತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಸಮಾಧಿ ಸಂರಕ್ಷಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬದ್ಧತೆ ತೋರಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಾಟಕರತ್ನ ಗುಬ್ಬಿ ವೀರಣ್ಣ
ನಾಟಕರತ್ನ ಗುಬ್ಬಿ ವೀರಣ್ಣ

ಪಟ್ಟಣದಲ್ಲಿ ಗುಬ್ಬಿ ವೀರಣ್ಣ ಹೆಸರಿನಲ್ಲಿ ಟ್ರಸ್ಟ್ ಮಾಡಿಕೊಂಡು ರಂಗಮಂದಿರ ಕಟ್ಟಿದ್ದರೂ, ಸಮಾಧಿಯು ಮಾತ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸಮಾಧಿ ಜಾಗವನ್ನು ಉತ್ತಮ ತಾಣವನ್ನಾಗಿಸಲು ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯಿತಿಯು ಆಡಳಿತ, ಕಾನೂನಾತ್ಮಕವಾಗಿ ಸ್ವಾಧೀನ ಪಡಿಸಿಕೊಂಡು ಜನಪ್ರತಿನಿಧಿಗಳ ಸಹಕಾರದೊಂದಿಗೆ ಅಭಿವೃದ್ಧಿಪಡಿಸಿ ರಂಗಕರ್ಮಿಗೆ ಗೌರವ ನೀಡಲು ಬದ್ಧತೆ ತೋರಬೇಕು. ತಾತ್ಕಾಲಿಕವಾಗಿಯಾದರೂ ಸಮಾಧಿ ಸುತ್ತ ತಂತಿಬೇಲಿ ಅಥವಾ ಆವರಣ ನಿರ್ಮಿಸಿ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸುತ್ತಾರೆ ಸ್ಥಳೀಯರು.

 ಲಕ್ಷ್ಮಣದಾಸ್
 ಲಕ್ಷ್ಮಣದಾಸ್
ಉತ್ತಮ ತಾಣವಾಗಲಿ:
ಗುಬ್ಬಿ ವೀರಣ್ಣ ಸಮಾಧಿಯನ್ನು ಉತ್ತಮ ತಾಣವನ್ನಾಗಿಸುವ ನಿಟ್ಟಿನಲ್ಲಿ ಅನೇಕ ಹೋರಾಟ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜಮೀನು ವಿಚಾರವಾಗಿ ಕುಟುಂಬಸ್ಥರ ನಡುವೆ ನ್ಯಾಯಾಲಯದಲ್ಲಿ ದಾವೆ ಇದೆ ಎನ್ನುವುದನ್ನೇ ಮುನ್ನೆಲೆಗೆ ತರದೆ ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಕ್ರಮವಹಿಸಿ ಸಮಾಧಿ ರಕ್ಷಣೆಗೆ ಮುಂದಾದಲ್ಲಿ ಗುಬ್ಬಿ ವೀರಣ್ಣ ರಂಗಮಂದಿರ ಟ್ರಸ್ಟ್ ವತಿಯಿಂದಲೂ ಸಹಕಾರ ನೀಡುತ್ತೇವೆ– ಲಕ್ಷ್ಮಣದಾಸ್ ಗುಬ್ಬಿ ವೀರಣ್ಣ ರಂಗಮಂದಿರದ ಟ್ರಸ್ಟಿ
ಅಣ್ಣಪ್ಪಸ್ವಾಮಿ
ಅಣ್ಣಪ್ಪಸ್ವಾಮಿ
ಸದಸ್ಯರಿಗೆ ಮನವಿ
ಗುಬ್ಬಿ ವೀರಣ್ಣ ಅವರು ಕೇವಲ ತಾಲ್ಲೂಕಿಗೆ ಸೀಮಿತರಾಗಿರದೆ ಈ ನಾಡಿನ ಹೆಮ್ಮೆಯ ಪ್ರತೀಕವಾಗಿದ್ದಾರೆ. ಅವರ ಸಮಾಧಿ ಕಾಯಕಲ್ಪಕ್ಕೆ ಪಟ್ಟಣ ಪಂಚಾಯಿತಿ ಮುಂದಿನ ಸಭೆಯಲ್ಲಿ ಚರ್ಚಿಸಿ ಅನುದಾನ ಮೀಸಲಿರಿಸಿ ಅಭಿವೃದ್ಧಿ ಮಾಡಲು ಬದ್ಧರಾಗೋಣ ಎಂದು ಎಲ್ಲಾ ಸದಸ್ಯರಲ್ಲಿ ಮನವಿ ಮಾಡಿಕೊಳ್ಳಲಾಗುವುದು–ಜಿ.ಎನ್.ಅಣ್ಣಪ್ಪಸ್ವಾಮಿ ಪಟ್ಟಣ ಪಂಚಾಯಿತಿ ಸದಸ್ಯ
 ಪಿಎನ್ ಲಕ್ಷ್ಮಣ್.
 ಪಿಎನ್ ಲಕ್ಷ್ಮಣ್.
ಸೂಕ್ತ ಕ್ರಮ ಅಗತ್ಯ
ವೀರಣ್ಣ ಅವರ ಕಲಾ ಶ್ರೀಮಂತಿಕೆ ಸಮರ್ಪಣಾ ಮನೋಭಾವನೆ ಇಂದಿನ ಕಲಾವಿದರಿಗೆ ಪ್ರೇರಣೆ. ಅವರ ಸಮಾಧಿ ಇರುವ ಸ್ಥಳವನ್ನು ಉತ್ತಮ ಕಲಾಕೇಂದ್ರವನ್ನಾಗಿ ಮಾಡಲು ಸಂಬಂಧಿಸಿದವರು ಸೂಕ್ತಕ್ರಮ ಕೈಗೊಳ್ಳಬೇಕು ಎನ್ನುವುದು ನಮ್ಮೆಲ್ಲರ ಅಭಿಲಾಷೆ- ಪಿ.ಎನ್. ಲಕ್ಷ್ಮಣ್ ರಂಗಕಲಾವಿದ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT