ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

30ರಂದು ‘ಹೋರಾಟದ ನಡಿಗೆ ಹಾಸನದ ಕಡೆಗೆ’

ಬೃಹತ್ ಪ್ರತಿಭಟನೆ- ಬಹಿರಂಗ ಸಭೆ, ಜಿಲ್ಲೆಯ ನೂರಾರು ಜನ ಭಾಗಿ
Published 26 ಮೇ 2024, 3:31 IST
Last Updated 26 ಮೇ 2024, 3:31 IST
ಅಕ್ಷರ ಗಾತ್ರ

ತುಮಕೂರು: ಸಂಸದ ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಆಗ್ರಹಿಸಿ, ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಪ್ರಗತಿಪರ ಸಂಘಟನೆಗಳಿಂದ ಮೇ 30ರಂದು ಹಾಸನ ಚಲೋ ಹಮ್ಮಿಕೊಳ್ಳಲಾಗಿದೆ.

ಹಾಸನದಲ್ಲಿ ನಡೆಯುವ ‘ಹೋರಾಟದ ನಡಿಗೆ- ಹಾಸನ ಕಡೆಗೆ’ ಬೃಹತ್ ಪ್ರತಿಭಟನೆ ಹಾಗೂ ಬಹಿರಂಗ ಸಭೆಯಲ್ಲಿ ಜಿಲ್ಲೆಯ 500ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ಲೇಖಕಿ ಬಾ.ಹ.ರಮಾಕುಮಾರಿ ಇಲ್ಲಿ ಶನಿವಾರ ತಿಳಿಸಿದರು.

ಹಾಸನ ಪ್ರಕರಣದಿಂದ ಇಡೀ ನಾಡು ತಲೆ ತಗ್ಗಿಸುವಂತಾಗಿದೆ. ಇದೊಂದು ನಾಚಿಕೆಗೇಡಿನ ವಿಚಾರ. ಮಹಿಳೆಯರು ಭಯದಿಂದ ಬದುಕುತ್ತಿದ್ದಾರೆ. ಹಾದಿ–ಬೀದಿಗಳಲ್ಲಿ ಹೆಣ್ಣು ಮಕ್ಕಳ ಮಾನ- ಪ್ರಾಣ ಹರಣವಾಗುತ್ತಿದೆ. ಇದೊಂದು ಲೈಂಗಿಕ ಭಯೋತ್ಪಾದನೆ ಎಂದು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಕ್ಕೆ ಆರೋಪಿಯನ್ನು ಹಿಡಿಯಲು ಆಗಿಲ್ಲ. ಆಡಳಿತ ವ್ಯವಸ್ಥೆ ಜನರ ಭರವಸೆ‌ ಕಳೆದುಕೊಂಡಿದೆ. ಆರೋಪಿಯನ್ನು ಹಿಡಿಯಲು ತಡ ಮಾಡಿ ವಿಷಯದ ತೀವ್ರತೆ ಕಡಿಮೆ ಮಾಡುತ್ತಿದ್ದಾರೆ. ಸಂತ್ರಸ್ತರನ್ನು ಅಪರಾಧಿಗಳನ್ನಾಗಿ ಮಾಡಲಾಗುತ್ತಿದೆ. ಕೃತ್ಯವೆಸಗಿದವರ ಜತೆಗೆ ಪೆನ್‌ಡ್ರೈವ್ ಹಂಚಿದವರಿಗೂ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ದೌರ್ಜನ್ಯ ವಿರೋಧಿ ಒಕ್ಕೂಟದ ಎನ್‌.ಇಂದಿರಮ್ಮ, ‘ಸರ್ಕಾರ ಪ್ರಾರಂಭದಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಎಲ್ಲ ಬೆಳವಣಿಗೆಗಳ ಮಧ್ಯೆ ಪ್ರಜ್ವಲ್‌ ರೇವಣ್ಣ ಮತದಾನ ಮಾಡಿ, ವಿದೇಶಕ್ಕೆ ಓಡಿ ಹೋಗಿದ್ದಾರೆ. ಹಾಸನದ ಪ್ರಕರಣ ಲೈಂಗಿಕ ಹತ್ಯಾಕಾಂಡವಾಗಿದೆ. ಪ್ರಜ್ವಲ್‌ ಎಲ್ಲಿದ್ದಾರೆ ಎನ್ನುವುದು ಗೊತ್ತಿದ್ದರೂ ಯಾವುದೇ ಕ್ರಮ ಆಗುತ್ತಿಲ್ಲ. ಕೂಡಲೇ ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಹಾಸನದಲ್ಲಿ ಪಾಳೆಗಾರಿಕೆ ಮತ್ತು ಪ್ರಜಾಪ್ರಭುತ್ವದ ಮಧ್ಯೆ ಯುದ್ಧ ನಡೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣ ಸಮಾಜದ ನಾಗರಿಕರ ಎದೆ ನಡುಗಿಸಿದೆ. ಎಲ್ಲ ವಿಷಯ ಗೊತ್ತಿದ್ದರೂ ಅವರಿಗೆ ಮತ್ತೆ ಟಿಕೆಟ್ ಕೊಟ್ಟಿದ್ದು ಮಹಾಪರಾಧ. ಪ್ರಜ್ವಲ್ ಕುಟುಂಬದವರು ಸಾರ್ವಜನಿಕವಾಗಿ ಜನರ ಕ್ಷಮೆ ಕೇಳಬೇಕು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸಂತ್ರಸ್ತರ ನೆರವಿಗೆ ನಿಲ್ಲಬೇಕು ಎಂದು ಮನವಿ ಮಾಡಿದರು.

ಚಿಂತಕ ಸಿ.ಯತಿರಾಜು, ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ಲೇಖಕಿ ಬಿ.ಸಿ.ಶೈಲಾ ನಾಗರಾಜ್, ವಿವಿಧ ಸಂಘಟನೆಗಳ ಮುಖಂಡರಾದ ಎಂ.ವಿ.ಕಲ್ಯಾಣಿ, ರತ್ನಮ್ಮ, ರಾಣಿ ಚಂದ್ರಶೇಖರ್, ಸೈಯದ್ ಮುಜೀಬ್, ಎನ್.ಕೆ.ಸುಬ್ರಮಣ್ಯ, ಪಂಡಿತ್ ಜವಾಹಾರ್, ಪಿ.ಎನ್.ರಾಮಯ್ಯ, ದೀಪಿಕಾ ಮರಳೂರು, ಟಿ.ಆರ್‌.ಕಲ್ಪನಾ, ಮಮ್ತಾಜ್‌, ಅನುಪಮಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT