ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್ ಬೆಟ್ಟಿಂಗ್: 6 ಜನರ ಬಂಧನ

ಕ್ರಿಕೆಟ್, ‌ಕುದುರೆ ರೇಸ್ ಬೆಟ್ಟಿಂಗ್ ಮೂಲಕ ಸಾರ್ವಜನಿಕರಿಗೆ ವಂಚನೆ, ಮೂವರ ಪತ್ತೆಗೆ ತಂಡ ನಿಯೋಜನೆ
Last Updated 10 ಫೆಬ್ರುವರಿ 2020, 12:16 IST
ಅಕ್ಷರ ಗಾತ್ರ

ತುಮಕೂರು: ಆನ್‌ಲೈನ್‌ ಮೂಲಕ ಕ್ರಿಕೆಟ್ ಮತ್ತು ಕುದುರೆ ರೇಸ್ ಬೆಟ್ಟಿಂಗ್ ನಡೆಸುತ್ತಿದ್ದ 6 ಜನ ಆರೋಪಿಗಳ ಬಂಧಿಸಿ ₹7.15 ಲಕ್ಷವನ್ನು ಸಿಇಎನ್ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತುಮಕೂರು ನಗರದ ಕ್ಯಾತ್ಸಂದ್ರ ಗಿರಿನಗರದ ಮಹಾಂತೇಶ್(34), ಎಸ್‌ಐಟಿ ಬಡಾವಣೆಯ ರಾಜೇಶ್(27), ಉಪ್ಪಾರಹಳ್ಳಿಯ ದಿಲೀಪ್‌ಕುಮಾರ್‌(23), ಎಸ್‌.ಎಸ್‌.ಪುರಂನ ಅರ್ಜುನ್‌(23), ಕೆ.ಆರ್‌.ಬಡಾವಣೆಯ ಅಶ್ವಿನ್‌(22) ಹಾಗೂ ಬೆಂಗಳೂರು ಶ್ರೀನಗರದ ಧನುಷ್‌(21) ಆರೋಪಿಗಳಾಗಿದ್ದಾರೆ.

ಇವರು ತುಮಕೂರು ನಗರ ವ್ಯಾಪ್ತಿಯ ಸಾರ್ವಜನಿಕರಿದ ಮೊಬೈಲ್ ಮುಖಾಂತರ ಲೋಟಸ್ ಎಂಬ ಅಪ್ಲಿಕೇಷನ್ ಮತ್ತು ಸ್ಪೆಕ್ಟಿಕ್ಯುಲರ್ ಎಂಬ ಆ್ಯಪ್‌ನಲ್ಲಿ ಕುದುರೆ ರೇಸ್ ಮತ್ತು ಕ್ರಿಕೆಟ್ ಬೆಟ್ಟಿಂಗ್ ಆಟಗಳಲ್ಲಿ ಹಣವನ್ನು ಪಣವಾಗಿ ಕಟ್ಟಿಸಿಕೊಳ್ಳುತ್ತಿದ್ದರು. ಈ ಮೂಲಕ ಹಲವು ಸಾರ್ವಜನಿಕರಿಗೆ ವಂಚಿಸುತ್ತಿದ್ದರು. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಅವರಿಗೆ ಬಂದ ಮಾಹಿತಿಯ ಮೇರೆಗೆ ಅವರು ಸಿಇಎನ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್‌ ಹಾಗೂ ಸಿಬ್ಬಂದಿಯನ್ನು ವಿಶೇಷ ತಂಡವನ್ನಾಗಿ ರಚಿಸಿ ಆರೋಪಿಗಳನ್ನು ಪತ್ತೆ ಹಚ್ಚಲು ನಿಯೋಜಿಸಿದ್ದರು.

ಈ ತಂಡವು ಭಾನುವಾರ(ಫೆ.9) ಜೂಜಾಟ ನಡೆಯುತ್ತಿದ್ದ ನಗರದ ಬಿ.ಎಚ್ ರಸ್ತೆಯ ಐಶ್ವರ್ಯ ಲಾಡ್ಜ್ ರೂಂ ನಂ.7 ರಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತರಿಂದ ಜೂಜಾಟಕ್ಕೆ ಬಳಸಿದ್ದ 4 ಎಟಿಎಂ ಕಾರ್ಡಗಳು, 6 ಮೊಬೈಲ್, 3 ಲೆಡ್ ಪೆನ್ನುಗಳು, ₹68,730 ನಗದು ಹಣ ಹಾಗೂ ವಹಿವಾಟಿನ ವಿವರ ಬರೆದುಕೊಳ್ಳುತ್ತಿದ್ದ 4 ರಿಜಿಸ್ಟರ್ ಪುಸ್ತಕಗಳು ವಶಪಡಿಸಿಕೊಳ್ಳಲಾಗಿದೆ.

ಬಂಧನದ ವೇಳೆ ಆರೋಪಿಗಳು ತುಮಕೂರು ನಗರದ ಶಿರಾ ಗೇಟ್ ಆಕ್ಸಿಸ್ ಬ್ಯಾಂಕ್‌ನಲ್ಲಿ ಬಸವರಾಜು, ರಂಜಿತ್, ನಿತಿನ್ ಎಂಬುವವರ ಹೆಸರಿನಲ್ಲಿ 3 ಖಾತೆಗಳನ್ನು ತೆಗೆದು ಬೆಟ್ಟಿಂಗ್ ಹಣವನ್ನು ಈ ಖಾತೆಗಳಿಗೆ ಜಮಾ ಮಾಡುತ್ತಿದ್ದದ್ದು ಬೆಳಕಿಗೆ ಬಂದಿದೆ. ಈ ಖಾತೆಗಳಲ್ಲಿ ಜೂಜಾಟಕ್ಕೆ ಬಳಸಿದ್ದ ಒಟ್ಟು ₹6,47,132 ಹಣವನ್ನು ಬ್ಯಾಂಕ್‌ ಅಧಿಕಾರಿಗಳೊಂದಿಗೆ ಚರ್ಚಿಸಿ ನಡೆಸಿ ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣದಲ್ಲಿ ಹಾಲಿ ಬಂಧಿಸಿರುವ ರಾಜೇಶ್ ಎಂಬಾತನು ತಂಡದ ಪ್ರಮುಖ ವ್ಯಕ್ತಿಯಾಗಿದ್ದು, ಈತ ತಮಗೆ ಬಂದ ಹಣದಲ್ಲಿ ಶೇ 40 ರಷ್ಟು ಹಣವನ್ನು ಲೋಟಸ್, ಸ್ಪೆಕ್ಟಿಕ್ಯುಲಸ್ ಆ್ಯಫ್‌ಗಳನ್ನು ಸರಬರಾಜು ಮಾಡಿದ್ದ ಗಿರಿ ಅಲಿಯಾಸ್ ಯಲ್ಲಾಪುರ ಗಿರಿ, ದಯಾನಂದ ಹುಲಿಯೂರು ದುರ್ಗ ಹಾಗೂ ಶಿರಾ ವಾಸಿ ಹರಿ ಎನ್ನುವವರುಗಳಿಗೆ ಸಂದಾಯ ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಈ 3 ಜನ ಆರೋಪಿಗಳನ್ನು ಪತ್ತೆ ಮಾಡಲು ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT