ಭಾನುವಾರ, ನವೆಂಬರ್ 27, 2022
26 °C

2ಎಗೆ ಪಂಚಮಸಾಲಿ ಸೇರ್ಪಡೆಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ‌ 2ಎ ಗೆ ಸೇರಿಸಲು ಕರ್ನಾಟಕ ಕ್ಷತ್ರಿಯ ಒಕ್ಕೂಟ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಪಂಚಮಸಾಲಿ ಲಿಂಗಾಯತ ರನ್ನು ಪ್ರವರ್ಗ 2ಎಗೆ ಸೇರಿಸುವ ಹಾದಿ ಸುಗಮ ಮಾಡಲು ಸರ್ಕಾರ ಹೊರಟಿದೆ. ಇದು ನೆರವೇರಿದರೆ 2ಎ ಸಮುದಾಯ ದವರ ತಟ್ಟೆಯಲ್ಲಿನ ಅನ್ನ ಕಸಿದು, ವಿಷ ಕೊಡುವ ಕೆಲಸ ಮಾಡಿದಂತಾಗಲಿದೆ ಎಂದು ರಾಜ್ಯ ಕ್ಷತ್ರಿಯ ಒಕ್ಕೂಟದ ಅಧ್ಯಕ್ಷ ಉದಯ್‌ಸಿಂಗ್ ಇಲ್ಲಿ ಸೋಮವಾರ ಆರೋಪಿಸಿದರು.

2ಎಗೆ ಪಂಚಮಸಾಲಿ ಸಮಾಜವನ್ನು ಸೇರಿಸಲು ವಿಧಾನಸಭೆ ಅಧಿವೇಶನದ ಸಮಯದಲ್ಲಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಇದು ಉಳಿದ ಸಮುದಾಯಗಳಿಗೆ ಆಘಾತ ಉಂಟು ಮಾಡಿದೆ. ಎಲ್ಲರ ಹಿತ ಕಾಪಾಡಲು ನಿಷ್ಪಕ್ಷಪಾತವಾಗಿ, ಜವಾಬ್ದಾರಿಯುತವಾಗಿ ವರ್ತಿಸಬೇಕು. ಮೀಸಲಾತಿಯನ್ನು ಸ್ವಾರ್ಥ ಸಾಧನೆಗೆ, ಮತ ಬ್ಯಾಂಕ್‌, ರಾಜಕಾರಣಕ್ಕೋಸ್ಕರ ಬಳಸಬಾರದು ಎಂದು ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ 2ಎ ಸಮುದಾಯದ ಜ‌ನರು ಇಂದಿಗೂ ಹಿಂದುಳಿದಿದ್ದಾರೆ. ಬಹುದೊಡ್ಡ ಸಮಾಜ ಎಂದು ಗುರುತಿಸಿಕೊಂಡಿರುವ ಪಂಚಮಸಾಲಿಯನ್ನು 2ಎ ಗೆ ಸೇರಿಸಿದರೆ ಮೀಸಲಾತಿಗೆ ಅರ್ಥವೇ ಇರುವುದಿಲ್ಲ.‌ ಮೀಸಲಾತಿಯ ಹಕ್ಕು ಕಸಿದು, ಬೇರೆಯರಿಗೆ ನೀಡಲು ಕೆಲ ಮುಖಂಡರು ಹೊರಟಿದ್ದಾರೆ ಎಂದು ದೂರಿದರು.

ಸರ್ಕಾರದಲ್ಲಿ ಶೇ 40ರಷ್ಟು ಸಚಿವರು, ಶಾಸಕರು ವೀರಶೈವ ಸಮುದಾಯಕ್ಕೆ ಸೇರಿದವರಿದ್ದಾರೆ. ಮುಖ್ಯಮಂತ್ರಿ ಗಾದಿಯನ್ನೇ ಸಮುದಾಯಕ್ಕೆ ಬಿಟ್ಟು ಕೊಡಲಾಗಿದೆ. ಇಂದು ಅತಿ ಹೆಚ್ಚಿನ ಅನುದಾನ ಇದೇ ಸಮುದಾಯದ ಮಠ, ಜನರಿಗೆ ನೀಡಲಾಗುತ್ತಿದೆ. ಇದೆಲ್ಲ ಬಿಟ್ಟು ಈಗ ಮೀಸಲಾತಿ ಕೇಳುತ್ತಿದ್ದಾರೆ. ಆಡಳಿತ ನಡೆಸುವ ಜನಪ್ರತಿನಿಧಿಗಳು ಕೇವಲ ಒಂದು ಸಮುದಾಯದ ಮತ ಪಡೆದು, ವಿಧಾನಸಭೆಯಲ್ಲಿ ಕೂತಿಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.

ಬಿಜೆಪಿ ಸರ್ಕಾರ ಹಿಂದುತ್ವದ ಆಧಾರದ ಮೇಲೆ ಆಡಳಿತ ನಡೆಸುತ್ತಿದೆ. ಸಮಸ್ತ ಹಿಂದೂ ಸಮಾಜದ ಆಶೀರ್ವಾದ ಪಡೆದು ವಿಧಾನಸಭೆಯಲ್ಲಿ ಕೂತು, ಒಂದು ಸಮುದಾಯದ ಪರವಾಗಿ ಮಾತನಾಡುವುದು ಖಂಡನೀಯ. ಸರ್ಕಾರಕ್ಕೆ ನಿಜವಾಗಿಯೂ ಜನರ ಬಗ್ಗೆ ಆಸಕ್ತಿ, ಕಾಳಜಿ ಇದ್ದರೆ ರಾಜಧರ್ಮ ಪಾಲಿಸಿ, ಜಾತಿ ರಾಜಕೀಯ ಮಾಡುವುದನ್ನು ಬಿಡಿ. ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಬೇಡಿ. ಅಧಿಕಾರ ಕೊಟ್ಟವರ ಅನ್ನ ಕಸಿಯುವ ಕೆಲಸ ಮಾಡಬೇಡಿ ಎಂದು ಒತ್ತಾಯಿಸಿದರು.

ಹಿಂದುಳಿದ ಸಮುದಾಯಗಳ ಕೈಯಲ್ಲಿ ಅಧಿಕಾರವಿಲ್ಲ. ಎಲ್ಲ ಸಮುದಾಯಗಳಿಗೂ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಮೀಸಲಾತಿ ಕಲ್ಪಿಸಬೇಕು ಎಂಬುವುದು ನಮ್ಮ ಮುಂದಿನ ಹೋರಾಟವಾಗಿದೆ. ಯಾವುದೇ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಮುನ್ನ ಕೂಲಂಕಷವಾಗಿ ಅಧ್ಯಯನ ಮಾಡಬೇಕು ಎಂದು ಹೇಳಿದರು.

ವಿವಿಧ ಸಮುದಾಯದ ಮುಖಂಡರಾದ ಆರ್‌.ಎನ್‌. ಗಾಯಕವಾಡ್‌, ಕುಮುದಯ್ಯ, ಟಿ.ಎನ್‌. ನಾರಾಯಣಸ್ವಾಮಿ, ರಮಾನಂದ, ಗಂಗಹನುಮಯ್ಯ, ಪುರುಷೋತ್ತಮ, ಕುಂಬಿನರಸಯ್ಯ, ಪ್ರೆಸ್‌ ರಾಜಣ್ಣ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು