ಪಾವಗಡ: ನಾಗೇನಹಳ್ಳಿ ತಾಂಡದ ಮೂವರು ಅಸ್ವಸ್ಥರಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಮಂಗಳವಾರ ಸಂಜೆ ದಾಖಲಾಗಿದ್ದಾರೆ.
ಕಳೆದ ಬುಧವಾರ, ಗುರುವಾರ ವಿವಾಹ ಕಾರ್ಯಕ್ರಮದ ಬಳಿಕ ನಾಗೇನಹಳ್ಳಿ ತಾಂಡ, ಶ್ರೀರಂಗಪುರದ ಸುಮಾರು 24 ಮಂದಿ ಅಸ್ವಸ್ಥರಾಗಿದ್ದರು. ಪಟ್ಟಣ, ತುಮಕೂರು, ಬೆಂಗಳೂರು, ಆಂಧ್ರದ ಹಿಂದೂಪುರ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ವೃದ್ಧೆಯೊಬ್ಬರು ತುಮಕೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಮಂಗಳವಾರ ಸಂಜೆ ಮೂವರ ಆರೋಗ್ಯದಲ್ಲಿ ವ್ಯತ್ಯಯವಾಗಿತ್ತು. ಶ್ರೀರಂಗಪುರ ತಾಂಡದ ಒಬ್ಬರಿಗೆ ವಾಂತಿ, ಭೇದಿ, ಹೊಟ್ಟೆನೋವು ಕಾಣಿಸಿಕೊಂಡಿದೆ. ಕೂಡಲೇ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಶ್ರೀರಂಗಪುರ ತಾಂಡದ ಲಕ್ಷ್ಮಿಬಾಯಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.
ನಾಗೇನಹಳ್ಳಿ ತಾಂಡದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರ ಆರಂಭಿಸಲಾಗಿದೆ. ಆದರೆ ಶ್ರೀರಂಗಪುರ ತಾಂಡಕ್ಕೆ ಈವರೆಗೆ ಅಧಿಕಾರಿಗಳು ಭೇಟಿ ನೀಡಿಲ್ಲ. ತಾತ್ಕಾಲಿಕ ಆರೋಗ್ಯ ಕೇಂದ್ರವನ್ನೂ ಆರಂಭಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.