ಪಾವಗಡ: ವಿವಿಧ ರಾಜ ಮನೆತನಗಳ ಆಳ್ವಿಕೆಗೆ ಒಳಪಟ್ಟಿರುವ ನಿಡಗಲ್ಲು ರಾಜ್ಯದ ಎರಡನೇ ಹಂಪಿ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಚಿತ್ತಯ್ಯ ಪೂಜಾರ್ ತಿಳಿಸಿದರು.
ಸೋಮವಾರ ನಿಡುಗಲ್ಲು ವೀರಭದ್ರಸ್ವಾಮಿ ದೇಗುಲ ಸಮಿತಿ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಡೆದ ಡಾ.ಡಿ.ಎನ್.ಯೋಗೀಶ್ವರಪ್ಪ ಮತ್ತು ಅನಿತಾ ಮಂಜುನಾಥ ರಚಿಸಿರುವ ‘ಮರೆಯಲಾಗದ ನಿಡುಗಲ್ಲು’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿಡುಗಲ್ಲು ಎಂಟನೇ ಶತಮಾನದಿಂದ ಇಪ್ಪತ್ತನೇ ಶತಮಾನದವರೆಗೆ ಅದ್ಭುತ ಇತಿಹಾಸವನ್ನು ಹೊಂದಿದ್ದು ಎರಡನೇ ಹಂಪಿ ಎನಿಸಿಕೊಂಡಿದೆ. ಇಲ್ಲಿ ಇಂದಿಗೂ ಅಸಂಖ್ಯಾತ ಸ್ಮಾರಕ ಅವಶೇಷ ಕಂಡುಬರುತ್ತದೆ. ಹಂಪೆಯಷ್ಟೇ ಭವ್ಯ ಇತಿಹಾಸ ಹೊಂದಿದೆ. ನಿಡುಗಲ್ಲು ರಕ್ಷಣೆ ಕಾರ್ಯ ಆಗಬೇಕು. ಮ್ಯೂಸಿಯಂ, ಸಾರಿಗೆ ವ್ಯವಸ್ಥೆ, ವಸತಿ ಸೌಕರ್ಯ ಇತ್ಯಾದಿಗಳು ಆದಲ್ಲಿ ಹಂಪೆಯಷ್ಟೆ ಪ್ರಖ್ಯಾತಿ ಯಾಗುತ್ತದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನಿಡಗಲ್ಲು ತನ್ನದೇ ಆದ ಶಕ್ತಿ ಹೊಂದಿದೆ. ಪ್ರಾಕೃತಿಕವಾಗಿ, ಐತಿಹಾಸಿಕ ಉತ್ತಮ ಸ್ಥಳವಾಗಿರುವ ಇಲ್ಲಿಗೆ ಭೇಟಿ ನೀಡಿದರೆ ಅದ್ಭುತ ಅನುಭವವಾಗುತ್ತದೆ.ಇದೊಂದು ಪ್ರವಾಸಿ ತಾಣವಾಗಿ ರೂಪುಗೊಳ್ಳಬೇಕು. ಸರ್ಕಾರ ಈ ಬಗ್ಗೆ ಹೆಚ್ಚು ಸ್ಪಂದಿಸಬೇಕು ಎಂದರು.
ಕೃತಿಕಾರ ಡಾ.ಡಿ.ಎನ್.ಯೋಗೀಶ್ವರಪ್ಪ ಮಾತನಾಡಿ, ಎಂಟನೇ ಶತಮಾನದಲ್ಲಿ ನಿಡುಗಲ್ಲು ದುರ್ಗದ ಮೇಲೆ ರಾಜ್ಯಭಾರ ಪ್ರಾರಂಭಿಸಿದ ನೊಳಂಬರ ನಂತರ ಚೋಳರು, ಹರತಿ ಮತ್ತು ನಿಡುಗಲ್ಲು ಪಾಳೇಗಾರರು ಆಳ್ವಿಕೆ ಮಾಡಿ ಕೋಟೆ ಕೊತ್ತಲು ನಿರ್ಮಿಸಿದ್ದಾರೆ. ಬ್ರಿಟಿಷರ ಕಾಲಕ್ಕೆ ಇದೊಂದು ಜಿಲ್ಲಾ ಕೇಂದ್ರವಾಗಿತ್ತು. ಮೆಕೆಂಜಿ ಇಲ್ಲಿಗೆ ಬಂದು ಮಾಹಿತಿ ಸಂಗ್ರಹಿಸಿ ಅಂದಿನ ಬ್ರಿಟಿಷ್ ಸರ್ಕಾರಕ್ಕೆ ವರದಿ ಸಲ್ಲಿಸಿರುತ್ತಾರೆ. ಅದರಲ್ಲಿ ನಿಡುಗಲ್ಲಿಗೆ ಸಂಬಂಧಿಸಿದ ಅನೇಕ ಅಂಕಿ–ಅಂಶ, ಆಳ್ವಿಕೆದಾರರ ವಿವರ ಹಾಗೂ ಸ್ಮಾರಕಗಳ ಉಲ್ಲೇಖವಿದೆ. ಈ ವಿವರಗಳನ್ನು ಹಾಗೂ ಈ ಹಿಂದೆ ನಿಡುಗಲ್ಲು ಬಗ್ಗೆ ರಚಿಸಿರುವ ಕೃತಿಗಳನ್ನು ಆಧಾರವಾಗಿ ಮಾಡಿಕೊಂಡು ಮರೆಯಲಾಗದ ನಿಡುಗಲ್ಲು ಎಂಬ ಪುಸ್ತಕ ರಚಿಸಲಾಗಿದೆ ಎಂದರು.
ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎಲ್.ಪಿ.ರಾಜು, ವೀರಭದ್ರಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಎಲ್.ವೀರಭದ್ರಯ್ಯ, ಸಂಶೋಧಕ ಡಾ.ಬಿ.ನಂಜುಂಡಸ್ವಾಮಿ, ತುಮಕೂರು ವಿ.ವಿ.ಕಲಾ ಕಾಲೇಜು ಪ್ರಾಂಶುಪಾಲ ಪ್ರೊ.ಕರಿಯಣ್ಣ, ತಾಲ್ಲೂಕು ಕಸಾಪ ಅಧ್ಯಕ್ಷ ಕಟ್ಟಾನರಸಿಂಹಮೂರ್ತಿ, ದೇವಾಲಯ ಸಮಿತಿ ಉಪಾಧ್ಯಕ್ಷ ಕೆ.ಎನ್.ಗಂಗಣ್ಣ ಮಾತನಾಡಿದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಗೋವಿಂದ ಕಾರಜೋಳ ಮತ್ತು ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಕೃತಿಯನ್ನು ಲೋಕಾರ್ಪಣೆ ಮಾಡಿದರು.
ಸಂಶೋದಕ ಡಾ.ವಿ.ಚಲುವರಾಜನ್, ಸಣ್ಣನಾಗಪ್ಪ, ಹೊ.ಮ.ನಾಗರಾಜು, ಕೃತಿ ಮುದ್ರಕ ಸತೀಶ್ ಹೆಬ್ಬಾಕ ಅವರನ್ನು ಅಭಿನಂದಿಸಲಾಯಿತು.
ಚಿಕ್ಕಬೆಳ್ಳಾವಿ ಶಿವಕುಮಾರ್, ಜಿ.ಎಚ್.ಮಹದೇವಪ್ಪ, ಕೆ.ಎಸ್.ಉಮಾಮಹೇಶ್, ಕೆ.ಸಣ್ಣಹೊನ್ನಯ್ಯ ಕಂಟಲಗೆರೆ, ಅಂತರಗಂಗೆ ಶಂಕರಪ್ಪ, ನಿಜಗುಣ, ಸಿ.ರಘುನಂದನ್, ಸತ್ಯನಾರಾಯಣಚಾರಿ, ಬಿ.ಸಿ.ವಿಶ್ವನಾಥ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.