ಗುರುವಾರ , ಜುಲೈ 7, 2022
22 °C

ಪಾವಗಡ ಬಸ್ ದುರಂತ: ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ– ಸಚಿವ ಸುಧಾಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ‘ವಿದ್ಯಾರ್ಥಿಗಳು ಯಾವುದೇ ರೀತಿಯಲ್ಲೂ ಭಯ ಪಡಬೇಡಿ. ಬಸ್‌ನಲ್ಲಿದ್ದ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಮತ್ತೆ ಅವಕಾಶ ಕಲ್ಪಿಸಲಾಗುವುದು. ಸರ್ಕಾರದಿಂದ ನಿಮ್ಮ ಭವಿಷ್ಯಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ’ ಎಂದು ಆರೋಗ್ಯ ಸಚಿವ ಕೆ.ಸುಧಾಕರ್‌ ಭರವಸೆ ನೀಡಿದರು.

ಜಿಲ್ಲಾ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ, ಪಾವಗಡ ತಾಲ್ಲೂಕಿನ ಪಳವಳ್ಳಿ ಕಟ್ಟೆ ಬಳಿ ನಡೆದ ಖಾಸಗಿ ಬಸ್‌ ಅಪಘಾತದಲ್ಲಿ ಗಾಯಗೊಂಡರ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

21ನೇ ಶತಮಾನದಲ್ಲೂ ಬಸ್‌ ಮೇಲ್ಭಾಗದಲ್ಲಿ ಕೂತು ಪರೀಕ್ಷೆ ಬರೆಯಲು ಹೋಗುವಂತಹ ಪರಿಸ್ಥಿತಿ ಇದೆ. ಇದು ಆಗಬಾರದಿತ್ತು. ಮುಂದೆ ಇಂತಹ ಘಟನೆಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಗಾಯಗೊಂಡ 6 ಜನ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದು, ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡ ಇಬ್ಬರನ್ನು ನಿಮ್ಹಾನ್ಸ್‌ಗೆ ದಾಖಲಿಸಲಾಗಿತ್ತು. ಇದೀಗ ಅವರನ್ನು ವಾಪಸ್ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ. ಒಬ್ಬರಿಗೆ ಸ್ಪೈನಲ್ ಕಾರ್ಡ್ ತೊಂದರೆಯಾಗಿದೆ. ಅವರು ವೆಂಟಿಲೇಟರ್‌ನಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.

ಅಪಘಾತವಾದ ಬಸ್‌ನಲ್ಲಿ ನೂರಕ್ಕೂ ಅಧಿಕ ಜನ ಇದ್ದರು ಎಂದು ತಿಳಿದು ಬಂದಿದೆ.‌ ಈ ಕುರಿತು ಸಾರಿಗೆ ಅಧಿಕಾರಿಗಳು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ 18 ಜನ ಚಿಕಿತ್ಸೆಗೆ ದಾಖಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದರು.

ಜಿಲ್ಲೆಗೆ ಶೇ 98ರಷ್ಟು ವೈದ್ಯರ ನೇಮಕಾತಿ ಮಾಡುವ ಮೂಲಕ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ನೀಗಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ವೈದ್ಯರನ್ನು ನೇಮಿಸಲಾಗಿದೆ ಎಂದು ಹೇಳಿದರು.

ಬಂದ ಮೃತ ದೇಹ: ಉಕ್ರೇನ್‌ನಿಂದ ರಾಜ್ಯದ 572 ಮಕ್ಕಳು ಈವರೆಗೂ ಕ್ಷೇಮವಾಗಿ ವಾಪಸ್ ಬಂದಿದ್ದಾರೆ. ಅಲ್ಲಿ ಮೃತಪಟ್ಟ ಹಾವೇರಿ ಜಿಲ್ಲೆಯ ನವೀನ್‌ ಮೃತ ದೇಹವನ್ನು ಪೋಷಕರಿಗೆ ತಲುಪಿಸಿರುವುದು ಸಮಾಧಾನ ತಂದಿದೆ. ದೇಶದ 19 ಸಾವಿರ ಮಕ್ಕಳನ್ನು ಅವರ ಮನೆಗೆ ತಲುಪಿಸಲಾಗಿದೆ. ಭಾರತೀಯರನ್ನು ಕ್ಷೇಮವಾಗಿ ವಾಪಸ್‌ ತರುವಲ್ಲಿ ಕೇಂದ್ರ ರಾಜ್ಯ ಸರ್ಕಾರ ಪ್ರಮಾಣಿಕವಾಗಿ ಕೆಲಸ ಮಾಡಿದೆ ಎಂದರು.

**

ಸಾವಿಗೆ ಯಾರು ಹೊಣೆ?

‘ಬಸ್‌ ಚಾಲಕ ಕುಡಿದು, ಮೊಬೈಲ್‌ನಲ್ಲಿ ಮಾತನಾಡುತ್ತಾ, ಅತಿವೇಗವಾಗಿ ವಾಹನ ಚಲಾಯಿಸುತ್ತಿದ್ದರು. ಈಗ ಇಷ್ಟು ಜನ ಆಸ್ಪತ್ರೆಗೆ ಬಂದಿದ್ದಾರೆ. 6 ಮಂದಿಯ ಸಾವಿಗೆ ಯಾರು ಹೊಣೆ’ ಎಂದು ಗಾಯಾಳು, ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿರುವ ಶೃತಿ, ಆರೋಗ್ಯ ಸಚಿವ ಕೆ.ಸುಧಾಕರ್‌ ಅವರನ್ನು ಪ್ರಶ್ನಿಸಿದರು. ಮುಂದಿನ ತಿಂಗಳು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಿದೆ. ನಮಗೆ ಪರೀಕ್ಷೆ ಬರೆಯಲು ಆಗದಿದ್ದರೆ ಮತ್ತೊಮ್ಮೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು