ಬುಧವಾರ, ಏಪ್ರಿಲ್ 21, 2021
24 °C
ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸಂಜೀವ್‌ಕುಮಾರ್ ಹೆಂಚಾಟೆ ಹೇಳಿಕೆ

ಕಾಯಂ ಜನತಾ ನ್ಯಾಯಾಲಯ ತೀರ್ಪು ಅಂತಿಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕಾಯಂ ಜನತಾ ನ್ಯಾಯಾಲಯ ಹೊರಡಿಸುವ ತೀರ್ಪು ಅಂತಿಮವಾಗಿದ್ದು, ಅದನ್ನು ಪ್ರಶ್ನಿಸುವಂತಿಲ್ಲ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂಜೀವ್‌ಕುಮಾರ್ ಹೆಂಚಾಟೆ ತಿಳಿಸಿದರು.

ಜಿಲ್ಲಾ ನ್ಯಾಯಾಲಯದಲ್ಲಿ ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರಿನಿಂದ ಎಲ್ಲ ಜಿಲ್ಲೆಗಳ ಮಾಧ್ಯಮ ಪತ್ರಿನಿಧಿಗಳೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಈ ನ್ಯಾಯಾಲಯ ಐತೀರ್ಪಿನ ವಿರುದ್ಧ ಯಾವುದೇ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ. ಹಾಗಾಗಿ ಇದನ್ನು ಸಿವಿಲ್ ನ್ಯಾಯಾಲಯದ ಡಿಕ್ರಿ ಎಂದು ಪರಿಭಾವಿಸಲಾಗುತ್ತದೆ ಎಂದು ಹೇಳಿದರು.

ಸಾರ್ವಜನಿಕ ಉಪಯುಕ್ತ ಸೇವೆಗಳಲ್ಲಿ ನಿಗದಿಗಿಂತ ಹೆಚ್ಚು ದರ ವಸೂಲಿ ಮಾಡುವುದು, ನಿವೇಶನ ಖರೀದಿಗೆ ಸಂಬಂಧಿಸಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸದಿರುವುದು, ಶಿಕ್ಷಣ ಸೇವೆಯಲ್ಲಿ ಪೋಷಕರಿಂದ ಹೆಚ್ಚಿನ ವಂತಿಗೆ ವಸೂಲಿ ಮಾಡುವುದಲ್ಲದೆ ಸೇವೆಗಳು ನ್ಯೂನ್ಯತೆಯಿಂದ ಕೂಡಿದ್ದರೆ ಈ ನ್ಯಾಯಾಲಯದಲ್ಲಿ ನ್ಯಾಯವನ್ನು ಪಡೆಯಬಹುದು ಎಂದರು.

ಸೇವಾ ಲೋಪದಿಂದ ವಿವಾದ ಹೊಂದಿರುವ ಯಾವುದೇ ಪಕ್ಷಕಾರನು ಸೇವೆಗೆ ಸಂಬಂಧಿಸಿದ ವಿವಾದವನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುವುದಕ್ಕೆ ಮೊದಲು ವಿವಾದದ ಇತ್ಯರ್ಥಕ್ಕಾಗಿ ಈ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.

ಕಾನೂನಿನಡಿ ರಾಜಿ ಮಾಡಿಕೊಳ್ಳುವ ಅವಕಾಶವಿರದ ಅಪರಾಧಕ್ಕೆ ಸಂಬಂಧಿಸಿದ ವಿಷಯವನ್ನು ಇತ್ಯರ್ಥಗೊಳಿಸುವ ಹಾಗೂ ವಿವಾದಕ್ಕೊಳಗಾದ ಸ್ವತ್ತಿನ ಮೌಲ್ಯ ಹಾಗೂ ಹಣಕಾಸು ವ್ಯವಹಾರಗಳು 1 ಕೋಟಿ ಮೀರಿದ್ದರೆ, ಅಂಥ ವಿವಾದಗಳನ್ನು ಇತ್ಯರ್ಥಪಡಿಸುವ ಅಧಿಕಾರವನ್ನು ಈ ನ್ಯಾಯಾಲಯ ಹೊಂದಿರುವುದಿಲ್ಲ ಎಂದು ಹೇಳಿದರು.

ವಿವಾದಕ್ಕೆ ಸಂಬಂಧಿಸಿದ ಪಕ್ಷಕಾರರು ಒಪ್ಪಿಕೊಳ್ಳಬಹುದಾದ ಇತ್ಯರ್ಥದ ಅಂಶಗಳು ಪ್ರಕರಣದಲ್ಲಿ ಇದೆ ಎಂದು ಜನತಾ ನ್ಯಾಯಾಲಯಕ್ಕೆ ಮನವರಿಕೆಯಾದಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲು ಮುಂದಾಗುತ್ತದೆ. ಪಕ್ಷಕಾರರು ಸಂಧಾನಕ್ಕೆ ಒಪ್ಪದಿದ್ದರೆ ಪ್ರಕರಣದ ಗುಣಾವಗುಣಗಳಿಗೆ ಅನುಗುಣವಾಗಿ ವಿವಾದವನ್ನು ಇತ್ಯರ್ಥಗೊಳಿಸಲಾಗುವುದು ಎಂದರು.

ಸಂಧಾನದಲ್ಲಿ ಪಕ್ಷಕಾರರಿಗೆ ಸೌಹಾರ್ದಯುತವಾಗಿ, ಸ್ವತಂತ್ರವಾಗಿ ಹಾಗೂ ನಿಷ್ಪಕ್ಷಪಾತವಾಗಿ ಇತ್ಯರ್ಥ ಮಾಡಿಕೊಳ್ಳುವ ಪ್ರಯತ್ನಕ್ಕೆ ನೆರವು ನೀಡಲಾಗುವುದು. ಸಂಧಾನ ನಡೆಸುವಾಗ ಸಹಜ ನ್ಯಾಯತತ್ವ, ಸಮ ನ್ಯಾಯತತ್ವ ಹಾಗೂ ಇತರೆ ನ್ಯಾಯಿಕ ತತ್ವಗಳನ್ನು ಅನುಸರಿಸಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಗಣೇಶ್ ಇದ್ದರು.

ತುಮಕೂರು ಜನ ಬೆಂಗಳೂರು ನ್ಯಾಯಾಲಯಕ್ಕೆ

ರಾಜ್ಯದಲ್ಲಿ ಬೆಂಗಳೂರು, ಬೆಳಗಾವಿ, ಮೈಸೂರು, ಮಂಗಳೂರು, ಧಾರವಾಡ, ಕಲಬುರಗಿ ಜಿಲ್ಲೆಗಳಲ್ಲಿ ಕಾಯಂ ಜನತಾ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕ ಉಪಯುಕ್ತ ಸೇವೆಗಳಲ್ಲಿ ಅನ್ಯಾಯಕ್ಕೊಳಗಾದವರು ಸಂಬಂಧಪಟ್ಟ ನ್ಯಾಯಲಯಕ್ಕೆ ಹೋಗಬಹುದು. ಹಾಗೇ ತುಮಕೂರು ಜಿಲ್ಲೆಯ ಜನರು ಬೆಂಗಳೂರು ನ್ಯಾಯಾಲಯಕ್ಕೆ ಹೋಗಿ ನ್ಯಾಯ ಪಡೆದುಕೊಳ್ಳಬಹುದು ಎಂದು ಸಂಜೀವ್‌ಕುಮಾರ್ ಹೆಂಚಾಟೆ ತಿಳಿಸಿದರು.

‘ರಾಜ್ಯದಲ್ಲಿ 2ನೇ ದೊಡ್ಡ ಜಿಲ್ಲೆಯಾಗಿದ್ದರೂ ತುಮಕೂರಿನಲ್ಲಿ ದಾಖಲಾಗುವ ಪ್ರಕರಣಗಳ ಸಂಖ್ಯೆ ಕಡಿಮೆ. ಹಾಗಾಗಿ ಸದ್ಯಕ್ಕೆ ನ್ಯಾಯಾಲಯ ಸ್ಥಾಪನೆಗೆ ಚಿಂತನೆ ನಡೆಸಿಲ್ಲ. ಮುಂದಿನ ದಿನಗಳಲ್ಲಿ ಪ್ರಯತ್ನಿಸುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ನ್ಯಾಯಾಲಯದ ಬಗ್ಗೆ ಜನರಿಗೆ ಅರಿವಿಲ್ಲದ ಕಾರಣ ಸೇವಾ ಪ್ರಾಧಿಕಾರದಿಂದ ಜನರಲ್ಲಿ ಅರಿವು ಮೂಡಿಸಲು ವಿದ್ಯಾರ್ಥಿಗಳಿಗೆ ಉಪನ್ಯಾಸ, ಭಾಷಣ, ಚರ್ಚಾ ಸ್ಪರ್ಧೆ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.