ಭಾನುವಾರ, ಏಪ್ರಿಲ್ 2, 2023
23 °C

ಫೆ. 6ರಂದು ತುಮಕೂರಿಗೆ ಮೋದಿ ಭೇಟಿ: ಸ್ವಾಗತಕ್ಕೆ ಬಿಜೆಪಿ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‌ ಬಳಿ ನಿರ್ಮಾಣಗೊಂಡಿರುವ ಎಚ್‌ಎಎಲ್ ಹೆಲಿಕಾಫ್ಟರ್ ಘಟಕದ ಲೋಕಾರ್ಪಣೆಗೆ ಪ್ರಧಾನಿ ನರೇಂದ್ರ ಮೋದಿ ಫೆ. 6ರಂದು ಬರಲಿದ್ದು, ಅವರ ಸ್ವಾಗತಕ್ಕೆ ಜಿಲ್ಲಾ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಜ್ಜಾಗಿದ್ದಾರೆ.

ಸೋಮವಾರ ಮಧ್ಯಾಹ್ನ 3.30 ಗಂಟೆಗೆ ಪ್ರಧಾನಿ ಬರಲಿದ್ದು, ಒಂದು ಗಂಟೆಯಲ್ಲಿ ಸಮಾರಂಭ ಮುಗಿಯಲಿದೆ. ಎಚ್‌ಎಎಲ್ ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇದಕ್ಕೆ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದು, ಈಗ ಅವರೇ ಉದ್ಘಾಟನೆಯನ್ನೂ ಮಾಡುತ್ತಿದ್ದಾರೆ. ಕಾರ್ಯಕ್ರಮದಲ್ಲಿ 80 ಸಾವಿರ ಬಿಜೆಪಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಚ್.ರವಿಶಂಕರ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಎಚ್‌ಎಎಲ್ ಹೆಲಿಕಾಫ್ಟರ್ ಘಟಕವು ಸಾಕಷ್ಟು ತಾಂತ್ರಿಕ ವಿಚಾರಗಳನ್ನು ಒಳಗೊಂಡಿದ್ದು, ಪ್ರಧಾನಿ ಹಾಗೂ ಇತರರು ಇದೇ ವಿಚಾರವಾಗಿ ಮಾತನಾಡಲಿದ್ದಾರೆ. ಜಿಲ್ಲೆಯ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುವಂತೆ ಮನವಿ ಮಾಡಲಾಗಿದೆ. ಉದ್ಯಮಿಗಳು, ವರ್ತಕರು, ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ಪಾಲ್ಗೊಳ್ಳಲಿದ್ದಾರೆ ಎಂದರು.

ಕಾರ್ಯಕ್ರಮಕ್ಕೆ ಬರುವವರ ವಾಹನ ನಿಲುಗಡೆಗೆ 150 ಎಕರೆ ಪ್ರದೇಶದಲ್ಲಿ ವ್ಯವಸ್ಥೆ ಮಾಡಲಾಗಿದೆ. ಪಕ್ಷದ ಕಾರ್ಯಕರ್ತರು, ಮುಖಂಡರು ಬೈಕ್ ರ‍್ಯಾಲಿ ಮೂಲಕ ಕಾರ್ಯಕ್ರಮದ ಸ್ಥಳಕ್ಕೆ ಬರಲಿದ್ದಾರೆ ಎಂದು ಹೇಳಿದರು.

ಮುಖಂಡರಾದ ಚಂದ್ರಶೇಖರ್, ಬಾವಿಕಟ್ಟೆ ನಾಗಣ್ಣ, ಕೆ.ಪಿ.ಮಹೇಶ್, ಸದಾನಂದ ಇತರರು ಉಪಸ್ಥಿತರಿದ್ದರು.

**

ಕಾಂಗ್ರೆಸ್ ಅವಧಿಯಲ್ಲಿ ಒಪ್ಪಿಗೆ
ತುಮಕೂರು:
ಎಚ್‌ಎಎಲ್ ಹೆಲಿಕಾಫ್ಟರ್ ಘಟಕ ನಿರ್ಮಾಣಕ್ಕೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಒಪ್ಪಿಗೆ ನೀಡಿತ್ತು. ಅದನ್ನು ಬಿಜೆಪಿ ನೇತೃತ್ವದ ಸರ್ಕಾರ ಪೂರ್ಣಗೊಳಿಸಿದೆ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.

ಪ್ರಧಾನಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ಎ.ಕೆ.ಆ್ಯಂಟನಿ ಅವರು ಘಟಕ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದರು. ನಂತರ ಪ್ರಧಾನಿಯಾದ ನರೇಂದ್ರ ಮೋದಿ ಅವರು 2016ರಲ್ಲಿ ಶಂಕುಸ್ಥಾಪನೆ ನೆರವೇರಿಸಿದರು. ಈಗ ಅವರೇ ರಾಷ್ಟ್ರಕ್ಕೆ ಸಮರ್ಪಣೆ ಮಾಡುತ್ತಿದ್ದಾರೆ ಎಂದು ಎಚ್.ಎಚ್.ರವಿಶಂಕರ್ ಜತೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಎಚ್‌ಎಎಲ್ ಘಟಕದ ಸುತ್ತಮುತ್ತಲಿನ 6 ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗೆ ಎಚ್‌ಎಎಲ್ ಸಂಸ್ಥೆ ನೆರವು ನೀಡಿದೆ. ಅಭಿವೃದ್ಧಿ ಸಲುವಾಗಿ ಪ್ರತಿ ಗ್ರಾ.ಪಂಗೆ ₹1 ಕೋಟಿ ಹಣ ಕೊಡುತ್ತಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳು ಪ್ರಗತಿ ಕಾಣಲಿವೆ ಎಂದರು.

**

ಪ್ರಧಾನಿ ಕಾರ್ಯಕ್ರಮ: ವಸ್ತುಗಳ ನಿರ್ಬಂಧ
ತುಮಕೂರು:
ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್‍ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಫೆ. 6ರಂದು ಉದ್ಘಾಟಿಸಲಿರುವ ಎಚ್‌ಎಎಲ್ ಘಟಕದ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ಮೊಬೈಲ್‍ ಹೊರತುಪಡಿಸಿ ಬೇರೆ ಇನ್ನಾವುದೇ ವಸ್ತು ತರುವುದನ್ನು ನಿರ್ಬಂಧಿಸಲಾಗಿದೆ.

ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬರುವವರು ನೀರಿನ ಬಾಟಲಿ, ಬ್ಯಾಗ್, ಪ್ಲಾಸ್ಟಿಕ್ ಹಾಗೂ ಇತರೆ ಯಾವುದೇ ವಸ್ತುಗಳನ್ನು ತರುವುದಕ್ಕೆ ಭದ್ರತೆ ದೃಷ್ಟಿಯಿಂದ ನಿರ್ಬಂಧ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು