ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲಿ ನಿಗಾದಲ್ಲಿರುವವರ ಮೇಲೆ ಪೊಲೀಸರ ಕಣ್ಗಾವಲು

Last Updated 18 ಮಾರ್ಚ್ 2020, 14:43 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆ ಹಾಗೂ ನಗರಕ್ಕೆ ವಿದೇಶದಿಂದ ಬಂದವರು ಹಾಗೂ ವಿದೇಶದಿಂದ ಬಂದು ಮನೆಗಳಲ್ಲಿಯೇ ಆರೋಗ್ಯ ಇಲಾಖೆಯ ನಿಗಾದಲ್ಲಿರುವವರ ಮೇಲೆ ಪೊಲೀಸರು ಕಣ್ಗಾವಲಿಟ್ಟಿದ್ದಾರೆ.

ಇಲ್ಲಿಯವರೆಗೂ ಜಿಲ್ಲೆಗೆ 94 ಮಂದಿ ವಿದೇಶದಿಂದ ಬಂದಿದ್ದಾರೆ. ಇವರಲ್ಲಿ 83 ಮಂದಿ ಮನೆಯಲ್ಲಿಯೇ ನಿಗಾದಲ್ಲಿ ಇದ್ದಾರೆ. ಇವರು ಆರೋಗ್ಯ ಇಲಾಖೆ ಸಿಬ್ಬಂದಿಗೆ ಹೇಗೆ ಸಹಕರಿಸುತ್ತಿದ್ದಾರೆ. ನಿಗಾದಲ್ಲಿ ಇರುವವರು ಹೊರಗೆ ತಿರುಗಾಟ ನಡೆಸುತ್ತಿದ್ದಾರೆಯೇ ಇತ್ಯಾದಿ ವಿಚಾರಗಳ ಬಗ್ಗೆ ಪೊಲೀಸರು ಗಮನವಹಿಸಿದ್ದಾರೆ.

ವಿದೇಶದಿಂದ ಬಂದ ಕೆಲವರು ಚಿಕಿತ್ಸೆ ಪಡೆಯಲು ನಿರಾಕರಿಸಬಹುದು, ಮನೆಯಲ್ಲಿ ನಿಗಾದಲ್ಲಿ ಇರಲು ಒಪ್ಪದಿರಬಹುದು, ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಸ್ಪಂದಿಸದೆ ಇರಬಹುದು ಈ ಎಲ್ಲ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಇಲಾಖೆ ಮತ್ತು ವಿದೇಶದಿಂದ ಬಂದವರ ನಡುವೆ ಸಮನ್ವಯ ಸಾಧಿಸಲು ಪ್ರತಿ ಠಾಣೆಯಿಂದ ಒಬ್ಬ ಕಾನ್‌ಸ್ಟೆಬಲ್‌ ಸಹ ನೇಮಕ ಮಾಡಲಾಗಿದೆ.

ಎಲ್ಲೆಲ್ಲಿ ಚಿಕಿತ್ಸೆ: ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಈಗಾಗಲೆ ಪ್ರತಿ ತಾಲ್ಲೂಕು ಆಸ್ಪತ್ರೆಗಳಲ್ಲಿ ಐಸೋಲೇಷನ್ ಘಟಕಗಳನ್ನು ಆರಂಭಿಸಲಾಗಿದೆ. ಜತೆಗೆ ಜಿಲ್ಲಾ ಆಸ್ಪತ್ರೆಯಲ್ಲಿ 10 ಹಾಸಿಗೆಗಳು ಹಾಗೂ ನಾಲ್ಕು ವಿಶೇಷ ಕೊಠಡಿಗಳನ್ನು ರೂಪಿಸಲಾಗಿದೆ. ಸೌಲಭ್ಯಗಳುಳ್ಳ ಸಿದ್ಧಾರ್ಥ ಆಸ್ಪತ್ರೆ ಮತ್ತು ಶ್ರೀದೇವಿ ಆಸ್ಪತ್ರೆಯಲ್ಲಿ ತಲಾ 15 ಹಾಸಿಗೆಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಸಿದ್ಧಗಂಗಾ ಆಸ್ಪತ್ರೆಯಲ್ಲಿಯೂ ಚಿಕಿತ್ಸೆಗೆ ವಿಶೇಷ ಘಟಕ ರೂಪಿಸಲಾಗಿದೆ.

ಸುಳ್ಳು ವದಂತಿಗಳಿಗೆ ಕಿವಿಗೊಡದಿರಿ: ಇತ್ತೀಚೆಗೆ ಕೆಲ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಚಿಕ್ಕನಾಯಕನಹಳ್ಳಿ ವ್ಯಕ್ತಿಗೆ ಹಾಗೂ ತುಮಕೂರಿನ ಆಚಾರ್ಯ ಬೀದಿಯ ಅಂಜನ್ ಅಗಸ್ತ ಹಾಗೂ ಅವರ ಪತ್ನಿಗೆ ಕೊರೊನಾ ಸೋಂಕು ತಗುಲಿದೆ ಎಂಬ ಸುದ್ದಿಗಳು ಪ್ರಕಟವಾಗುತ್ತಿವೆ. ಇವು ಸತ್ಯಕ್ಕೆ ದೂರವಾದುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ.ಆರ್.ಚಂದ್ರಿಕಾ ತಿಳಿಸಿದ್ದಾರೆ.

‘ಜಿಲ್ಲೆಯಲ್ಲಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿದೇಶ ಪ್ರಯಾಣ ಮಾಡಿರುವವರ ಪಟ್ಟಿಯು ನಕಲಿ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ದೃಢಪಟ್ಟಿಲ್ಲ. ಸುಳ್ಳು ವದಂತಿಗಳಿಂದ ಜನರು ಆತಂಕಗೊಳ್ಳಬಾರದು’ ಎಂದು ಮನವಿ ಮಾಡಿದ್ದಾರೆ.

ಸೋಂಕು ಪತ್ತೆ ಸಾಧನ ಅಳವಡಿಕೆ ಕಡ್ಡಾಯ

ಕೊರೊನಾ ಸೋಂಕು ತಡೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಪ್ರವಾಸೋದ್ಯಮ ಉದ್ದಿಮೆಗಳಲ್ಲಿ ಕಾರ್ಯಪ್ರವೃತ್ತರಾಗಿರುವ ಜಿಲ್ಲೆಯ ಎಲ್ಲ ಹೋಟೆಲ್, ರೆಸಾರ್ಟ್, ಹೋಂ ಸ್ಟೇ ಹಾಗೂ ಲಾಡ್ಜ್‌ಗಳ ಮಾಲೀಕರು ಸೋಂಕು ಪತ್ತೆ ಹಚ್ಚುವ NON–CONTACT INFRARED THERMOMETER ಸಾಧನವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ತಮ್ಮಲ್ಲಿ ತಂಗಲಿರುವ ಪ್ರತಿಯೊಬ್ಬರನ್ನು ಕಡ್ಡಾಯವಾಗಿ ಪರೀಕ್ಷಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಸೂಚಿಸಿದ್ದಾರೆ.

ಜಿಲ್ಲೆ ಪಾರಂಪರಿಕ, ಧಾರ್ಮಿಕ ಮತ್ತು ಪ್ರಾಕೃತಿಕ, ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ಸಾಂಸ್ಕತಿಕ ಕಾರ್ಯಕ್ರಮ, ಜಾತ್ರಾ ಮಹೋತ್ಸವ, ಧಾರ್ಮಿಕ ಆಚರಣೆಗಳನ್ನು ಹಾಗೂ ಪ್ರವಾಸಿ ತಾಣಗಳ ಚಿತ್ರೀಕರಣ ನಿರ್ಬಂಧಿಸಲಾಗಿದೆ.

ನಿರಂತರ ಮಾಹಿತಿಗೆ ಸಹಾಯವಾಣಿ

ಸಿದ್ಧಗಂಗಾ ಆಸ್ಪತ್ರೆಯಲ್ಲಿ ಸಹಾಯವಾಣಿ ತೆರೆಯಲಾಗಿದೆ. ಸಾರ್ವಜನಿಕರು ಕೊರೊನಾ ವೈರಸ್ ಕುರಿತು ಯಾವುದೇ ಗೊಂದಲ, ಮಾಹಿತಿ ಹಾಗೂ ಚಿಕಿತ್ಸೆಗಾಗಿ ಆಸ್ಪತ್ರೆಯ ದೂರವಾಣಿ ಸಂಖ್ಯೆ 0816-6602222,9148997918 ಸಂಪರ್ಕಿಸಬಹುದು.

ಜಿಲ್ಲೆಗೆ ವಿದೇಶಗಳಿಂದ ಬರುವವರ ಬಗ್ಗೆ ಮಾಹಿತಿ ತಿಳಿದರೆ ಸಾರ್ವಜನಿಕರು ಕೂಡಲೇ ಸಹಾಯವಾಣಿ ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ0816-2278387/ 2251414ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT