ಶುಕ್ರವಾರ, ಆಗಸ್ಟ್ 19, 2022
27 °C
ಮದುವೆಗೆ ಮುನ್ನ ಫೋಟೊ ಶೂಟ್‌ಗೆ ಜಿಲ್ಲೆಯಲ್ಲಿವೆ ಪ್ರಶಸ್ತ ತಾಣಗಳು

ಪ್ರೀ–ವೆಡ್ಡಿಂಗ್‌ ಫೋಟೊ ಶೂಟ್‌ಗಾಗಿ ರಾಜಧಾನಿ ಜೋಡಿಗಳು ತುಮಕೂರಿನತ್ತ

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

ತುಮಕೂರು: ರಾಜಧಾನಿ ಬೆಂಗಳೂರಿಗೆ ಸಮೀಪ ಇರುವುದರಿಂದ ಬೆಂಗಳೂರಿಗರು ಪ್ರೀ–ವೆಡ್ಡಿಂಗ್‌ ಫೋಟೊ ಶೂಟ್‌ಗೆ ಜಿಲ್ಲೆಯತ್ತ ಹೆಚ್ಚಿನದಾಗಿಯೇ ಮುಖಮಾಡುತ್ತಿದ್ದಾರೆ. ಜಿಲ್ಲೆಯ ಹಲವು ತಾಣಗಳು ಈ ಪ್ರೀ–ವೆಡ್ಡಿಂಗ್ ಫೋಟೊ ಶೂಟ್ ತಾಣಗಳಾಗಿ ಪ್ರಸಿದ್ಧಿ ಪಡೆಯುತ್ತಿವೆ.

ಅದರಲ್ಲಿಯೂ ಬಯಲುಸೀಮೆಯಲ್ಲಿ ಪಶ್ಚಿಮ ಘಟ್ಟದ ವಾತಾವರಣ ಹೊಂದಿರುವ ದೇವರಾಯನದುರ್ಗ, ಸಿದ್ಧರಬೆಟ್ಟಗಳ ಹಾದಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿಯೇ ವಿವಾಹಕ್ಕೆ ಸಿದ್ಧವಾದ ಜೋಡಿಗಳು ಕಾಣುತ್ತಿವೆ. ಪ್ರೀ–ವೆಡ್ಡಿಂಗ್ ಫೋಟೊಗೆ ಜಿಲ್ಲೆಯಲ್ಲಿ ಪ್ರಶಸ್ತವಾದ ತಾಣಗಳು ಹಲವು ಇವೆ. ಒಂದು ತಾಣಕ್ಕೂ ಮತ್ತೊಂದು ತಾಣಕ್ಕೂ ಹೆಚ್ಚಿನ ದೂರವೂ ಇಲ್ಲ. ಭಿನ್ನ ಭಿನ್ನ ವಾತಾವರಣದಲ್ಲಿ ಚಿತ್ರಗಳನ್ನು ತೆಗೆಸಿಕೊಳ್ಳುವ ಆಸೆಯೂ ಈಡೇರಿದಂತೆ ಆಗುತ್ತಿದೆ.

ಸುರಕ್ಷೆ ಮತ್ತು ಪ್ರಶಾಂತವಾದ ವಾತಾವರಣದ ಕಾರಣಕ್ಕೂ ಈ ಫೋಟೊ ಶೂಟ್ ತಾಣಗಳು ದಾಂಪತ್ಯಕ್ಕೆ ಕಾಲಿಡುವವರನ್ನು ಆಕರ್ಷಿಸುತ್ತಿವೆ.

ದೇವರಾಯನದುರ್ಗ ಚಾರಣಿಗರು ಮತ್ತು ವಾರಾಂತ್ಯದ ಪ್ರವಾಸಿಗರ ನೆಚ್ಚಿನ ತಾಣ. ಈಗಾಗಲೇ ದೇವರಾಯನದುರ್ಗ ರಾಜ್ಯ ಮಟ್ಟದಲ್ಲಿಯೂ ಪ್ರವಾಸಿಗರನ್ನು ಬರಸೆಳೆಯುತ್ತಿದೆ. ಚಾರಣಪ್ರಿಯರ ಈ ತಾಣ ಈಗ ಪ್ರೀ–ವೆಡ್ಡಿಂಗ್ ಫೋಟೊ ಪ್ರಿಯರ ನೆಚ್ಚಿನ ಸ್ಥಳವೂ ಆಗಿದೆ. ಫೋಟೊ ಶೂಟ್‌ಗೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. 

ದಟ್ಟಕಾಡು ಮತ್ತು ಬೆಟ್ಟದಿಂದ ಆವೃತ್ತವಾಗಿರುವ ದುರ್ಗದಲ್ಲಿ ಸೌಂದರ್ಯವನ್ನು ಆಹ್ಲಾದಿಸುವ ಉದ್ದೇಶದಿಂದಲೇ ಕೆಲವು ಸ್ಥಳಗಳಿಗೆ. ಈ ವ್ಯೂವ್ ಪಾಯಿಂಟ್‌ಗಳಲ್ಲಿ  ನಿಂತರೆ ಬೃಹತ್ ವನರಾಶಿ, ಗುಡ್ಡದ ಸಾಲು, ಹಳ್ಳಿಗಳ ಸಾಲನ್ನು ಕಣ್ತುಂಬಿಕೊಳ್ಳಬಹುದು. ಕಾಡು ಮತ್ತು ಬೆಟ್ಟಗುಡ್ಡಗಳನ್ನು ಹೊಂದಿರುವ ದೇವರಾಯನದುರ್ಗ ಫೋಟೊ ಶೂಟ್‌ಗೆ ಅತ್ಯಂತ ಪ್ರಶಸ್ತವಾದ ತಾಣ ಸಹ.

ರಸ್ತೆಯ ಬದಿಯಲ್ಲಿ ಹಾಗೂ ಸೌಂದರ್ಯ ಕಣ್ತುಂಬಿಕೊಳ್ಳಲು ಗುರುತಿಸಿರುವ ಸ್ಥಳಗಳು, ನಾಮದ ಚಿಲುಮೆಯ ಜಿಂಕೆ ವನ, ಅರಣ್ಯದ ಅಂಚು, ಬೆಟ್ಟದ ತುದಿ...ಹೀಗೆ ಹಲವು ನೆಲೆಗಳು ಸಪ್ತಪದಿ ತುಳಿಯಬೇಕಾದ ಜೋಡಿಗಳ ಪ್ರೀ–ವೆಡ್ಡಿಂಗ್‌ ಶೂಟ್‌ಗೆ ಪ್ರಮುಖ ಸ್ಥಳಗಳಾಗಿವೆ.

ದುರ್ಗವನ್ನು ಬಿಟ್ಟರೆ ತೋವಿನಕೆರೆ ಸಮೀಪದ ಸಿದ್ಧರಬೆಟ್ಟಕ್ಕೂ ಇತ್ತೀಚೆಗೆ ದಿನಗಳಲ್ಲಿ ಪ್ರೀ–ವೆಡ್ಡಿಂಗ್‌ಗೆ ಜೋಡಿಗಳು ಬರುತ್ತಿವೆ. ಇದೂ ತಣ್ಣನೆಯ ವಾತಾವರಣ  ಹೊಂದಿರುವ ಸ್ಥಳ. ಬೆಟ್ಟದ ಬುಡದಿಂದ ತುದಿಯವರೆಗೂ ಹಚ್ಚಹಸಿರಿನ ತಣ್ಣನೆಯ ಅನುಭೂತಿ ದೊರೆಯುತ್ತದೆ. ಈ ಹಾದಿಯಲ್ಲಿ ಬರುವ ಗ್ರಾಮಗಳ ಹೊಲಗಳೂ ಪ್ರೀ–ವೆಡ್ಡಿಂಗ್ ತಾಣಗಳಾಗಿವೆ ಎಂದರೆ ನಿಜಕ್ಕೂ ಅತಿಶಯವಲ್ಲ. ಇಡೀ ಹೊಲವನ್ನೇ ತುಂಬಿಕೊಂಡಿರುವ ಹೂವಿನ ತೋಟಗಳು ಇಲ್ಲಿವೆ.

ತುಮಕೂರು ಹೊರವಲಯದ ಪಂಡಿತನಹಳ್ಳಿ ಬಳಿಯ ಮಂದರಗಿರಿ, ಮಧುಗಿರಿ ತಾಲ್ಲೂಕಿನ ಏಕಶಿಲಾ ಬೆಟ್ಟ, ಮೈದನಹಳ್ಳಿಯ ಜಿಂಕೆ ಉದ್ಯಾನ, ಹೊಸಹಳ್ಳಿ ಜೋಳದರಾಶಿ ಗುಡ್ಡ, ಕೆ.ಬಿ.ಕ್ರಾಸ್‌ನ ಹತ್ಯಾಳ ಬೆಟ್ಟ, ಶಿರಾ ಕೋಟೆ, ಮರಡಿಗುಡ್ಡ, ಹೊನ್ನೇನಹಳ್ಳಿ ಅರಣ್ಯ, ಕುಣಿಗಲ್ ತಾಲ್ಲೂಕಿನ ದೊಡ್ಡಕೆರೆ, ರಂಗಸ್ವಾಮಿ ಗುಡ್ಡ ಹೀಗೆ ಹಲವು ನೆಲೆಗಳು ಜಿಲ್ಲೆಯಲ್ಲಿ ಪ್ರೀ ವೆಡ್ಡಿಂಗ್ ಫೋಟೊ ಶೂಟ್‌ ಜೋಡಿಗಳನ್ನು ಸೆಳೆಯುತ್ತಿವೆ. ಹೀಗೆ ಒಂದಕ್ಕಿಂತ ಒಂದು ಚೆಂದದ ನೆಲೆಗಳು ಇರುವುದು ಮತ್ತು ಬೆಂಗಳೂರಿಗೆ ಸಮೀಪವಿರುವ ಕಾರಣ ಕಲ್ಪತರು ನೆಲೆ ಪ್ರೀ–ವೆಡ್ಡಿಂಗ್‌ ತಾಣವಾಗುತ್ತಿದೆ. 

ಬೆಂಗಳೂರಿಗರಷ್ಟೇ ಅಲ್ಲ ತುಮಕೂರು ನಗರದವರೂ ಫೋಟೊ ಶೂಟ್‌ಗೆ ದೇವರಾಯನದುರ್ಗದತ್ತ ದೃಷ್ಟಿ ಹರಿಸುತ್ತಿದ್ದಾರೆ. ಬೆಳ್ಳಂಬೆಳಿಗ್ಗೆಯೇ ಜೋಡಿಗಳು ಈ ಹಾದಿಯಲ್ಲಿ ಕೈ ಹಿಡಿದು ಕ್ಯಾಮೆರಾ ಎದುರು ನಿಂತಿರುವರು.

‘ನಾವು ವಾರಾಂತ್ಯದಲ್ಲಿ ದೇವರಾಯನದುರ್ಗಕ್ಕೆ ಪ್ರವಾಸಕ್ಕೆ ಬರುತ್ತಿದ್ದೆವು. ಒಂದು ದಿನದ ಪ್ರವಾಸಕ್ಕೆ ಈ ಸ್ಥಳ ಚೆನ್ನಾಗಿದೆ. ಇಲ್ಲಿನ ವಾತಾವರಣ ಸಹ ಉತ್ತಮವಾಗಿದೆ. ಬೆಂಗಳೂರಿಗೆ ಸಮೀಪವಿದೆ. ನನ್ನ ವಿವಾಹ ನಿಶ್ಚಯವಾದ ತರುವಾಯ ಈ ಸ್ಥಳದಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿಕೊಳ್ಳಬೇಕು ಎಂದು ತೀರ್ಮಾನಿಸಿದೆವು. ಬೆಳಿಗ್ಗೆಯಿಂದ ಸಂಜೆಯವರೆಗೂ ಇಲ್ಲಿನ ನಾಮದ ಚಿಲುವೆ, ಬೆಟ್ಟದ ತುದಿ ಹೀಗೆ ಹಲವು ಕಡೆಗಳಲ್ಲಿ ಫೋಟೊಗಳನ್ನು ತೆಗೆಸಿಕೊಳ್ಳುತ್ತಿದ್ದೇವೆ’ ಎನ್ನುವರು ಬೆಂಗಳೂರಿನ ರಾಜಾಜಿನಗರದ ಶ್ವೇತಾ.

ಅನುಮತಿ ಪಡೆಯದಿದ್ದರೆ ಕ್ರಮ

ಅರಣ್ಯದ ಒಳಭಾಗದಲ್ಲಿ ಪ್ರೀ–ವೆಡ್ಡಿಂಗ್‌ ಫೋಟೊ ಶೂಟ್ ಅಥವಾ ಬೇರೆ ಯಾವುದೇ ಚಿತ್ರೀಕರಣಕ್ಕೆ ಒಂದು ದಿನಕ್ಕೆ ₹ 10 ಸಾವಿರವನ್ನು ಪಾವತಿಸಿ ಇಲಾಖೆಯಿಂದ ಅನುಮತಿ ಪಡೆಯಬೇಕು. ಒಂದು ವೇಳೆ ಅನುಮತಿ ಪಡೆಯದೆ ಅರಣ್ಯದೊಳಗೆ ಪ್ರವೇಶಿಸಿ ಚಿತ್ರೀಕರಣಕ್ಕೆ ಮುಂದಾದರೆ ಕರ್ನಾಟಕ ಅರಣ್ಯ ಕಾಯ್ದೆ ಸೆಕ್ಷನ್ 22ರ ಉಲ್ಲಂಘನೆ ಆಗುತ್ತದೆ. ಇದರ ಅಡಿ ಪ್ರಕರಣ ದಾಖಲಿಸಿದರೆ ಒಂದು ವರ್ಷ ಕಠಿಣ ಶಿಕ್ಷೆಯೂ ಆಗುತ್ತದೆ ಎಂದು ಜಿಲ್ಲಾ ಅರಣ್ಯ ಉಪಸಂರಕ್ಷಣಾಧಿಕಾರಿ ಗಿರೀಶ್ ಮಾಹಿತಿ ನೀಡುವರು

ನಮ್ಮ ಸಿಬ್ಬಂದಿ ಯಾವಾಗಲೂ ಗಸ್ತಿನಲ್ಲಿ ಇದ್ದೇ ಇರುತ್ತಾರೆ. ಆದ ಕಾರಣ ನಮ್ಮ ಕಣ್ಣು ತಪ್ಪಿಸಿ ಅರಣ್ಯದ ಒಳಗೆ ಫೋಟೊ ಶೂಟ್ ಮಾಡಲು ಸಾಧ್ಯವಿಲ್ಲ. ರಸ್ತೆಗಳಲ್ಲಿ ಮಾಡಿಕೊಳ್ಳುತ್ತಿದ್ದಾರೆ. ಟೆಲಿಫಿಲ್ಮ್ ಮಾಡುವ ಇಬ್ಬರು ಹಣ ಪಾವತಿಸಿ ಪರವಾನಗಿ ಪಡೆದು ಚಿತ್ರೀಕರಣ ನಡೆಸಿದ್ದರು ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು