ತುಮಕೂರು: ಜಿಲ್ಲೆಯಾದ್ಯಂತ ಗೌರಿ– ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಗುರುವಾರ ನಗರದಲ್ಲಿ ಅಗತ್ಯ ಸಾಮಾಗ್ರಿ ಖರೀದಿ ಜೋರಾಗಿತ್ತು. ಶುಕ್ರವಾರ ಗೌರಿ, ಶನಿವಾರ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ.
ಮಹಿಳೆಯರು, ಮಕ್ಕಳು, ಯುವಕರು ಗೌರಿ–ಗಣೇಶ ಮೂರ್ತಿಗಳ ಖರೀದಿಯಲ್ಲಿ ತೊಡಗಿಸಿದ್ದು ಕಂಡುಬಂತು. ಹೂವು ಖರೀದಿಸಲು ಮುಂದಾದವರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿತ್ತು. ಒಂದು ಮಾರು ಕನಕಾಂಬರ ₹500 ತಲುಪಿತ್ತು. ಸೇವಂತಿಗೆ ಮಾರು ₹250ರಿಂದ ₹300, ಮಲ್ಲಿಗೆ ₹300, ಗುಲಾಬಿ ಕೆ.ಜಿ ₹250ರಿಂದ 300 ಬೆಲೆ ಇತ್ತು. ಸಾರ್ವಜನಿಕರು ಹಬ್ಬದ ದಿನ ದರ ಮತ್ತಷ್ಟು ಏರಿಕೆಯಾಗಬಹುದು ಎಂಬ ಆತಂಕದಲ್ಲೇ ಹೂವು ಖರೀದಿಸಿದರು.
ಮನೆ ಮತ್ತು ದೇವಸ್ಥಾನಗಳಲ್ಲಿ ಗೌರಿ ಮೂರ್ತಿ ಕೂರಿಸಲು ಮಹಿಳೆಯರು ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ನಗರದ ಬಾಳನಕಟ್ಟೆ, ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಬೆಳಿಗ್ಗೆಯಿಂದಲೇ ಹೆಚ್ಚಿನ ಜನರು ಸೇರಿದ್ದರು. ಬಾಳೆ ದಿಂಡು, ಬಳೆ, ಅರಿಸಿನ–ಕುಂಕುಮ, ತಳಿರು ತೋರಣ ಮತ್ತು ವಿವಿಧ ಬಗೆಯ ಹಣ್ಣುಗಳನ್ನು ಖರೀದಿಸುತ್ತಿದ್ದ ದೃಶ್ಯಗಳು ಕಂಡು ಬಂದವು. ಶುಕ್ರವಾರ ಬೆಳಿಗ್ಗೆ ಗೌರಿ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತದೆ. ನಂತರ ಮಹಿಳೆಯರು ಬಾಗಿನ ಅರ್ಪಿಸಲಿದ್ದಾರೆ.
ನಗರದ ಅಶೋಕ ರಸ್ತೆ, ಮಂಡಿಪೇಟೆ, ಬಿಜಿಎಸ್ ವೃತ್ತ, ಸ್ವಾತಂತ್ರ್ಯ ಚೌಕದ ಬಳಿ ಮೂರ್ತಿಗಳ ಖರೀದಿ ನಡೆಯಿತು. ಕಳೆದ ಹತ್ತು ದಿನಗಳಿಂದ ಗಣೇಶ ಮತ್ತು ಗೌರಿ ವಿಗ್ರಹಗಳ ಮಾರಾಟ ಮಾಡಲಾಗುತ್ತಿದೆ. 1 ಅಡಿಯಿಂದ 10 ಅಡಿಯ ವರೆಗೆ ₹100 ಯಿಂದ ₹40 ಸಾವಿರ ಮೌಲ್ಯದ ಗಣಪತಿ ಮೂರ್ತಿಗಳು ಮಾರಾಟವಾಗುತ್ತಿವೆ.
ಗಣೇಶ ಮೂರ್ತಿಗಳ ಬೆಲೆಯೂ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಪರಿಸರಕ್ಕೆ ಹಾನಿ ಮಾಡುವ ಕೃತಕ ಬಣ್ಣ ಬಳಕೆ ಮಾಡಿದ ಗಣೇಶ ಮೂರ್ತಿಗಳ ತಯಾರಿಕೆ ಮಾರಾಟ ನಿಷೇಧಿಸಲಾಗಿದೆ. ಹಾಗಾಗಿ ನೈಸರ್ಗಿಕ ಬಣ್ಣ ಬಳಕೆಯಿಂದ ತಯಾರಿಸಿದ ಮೂರ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಮೂರ್ತಿಗಳ ಬೆಲೆಯೂ ದುಬಾರಿಯಾಗಿದೆ. ಹೆಚ್ಚಿನ ಜನರು ಶುಕ್ರವಾರ ಅಥವಾ ಶನಿವಾರ ಖರೀದಿಸಿ ಪ್ರತಿಷ್ಠಾಪನೆ ಮಾಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.