ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಚಾರಕ್ಕೆ ಮುದ್ದಹನುಮೇಗೌಡರು ಗೈರಾದರೆ ಮೈತ್ರಿ ಅಭ್ಯರ್ಥಿ ಗೆಲುವು ಕಷ್ಟ

ಪತ್ರಿಕಾಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಘಟಕದ ರಾಜ್ಯ ಉಪಾಧ್ಯಕ್ಷ ಆರ್.ರಾಜೇಂದ್ರ ಎಚ್ಚರಿಕೆ
Last Updated 4 ಏಪ್ರಿಲ್ 2019, 11:03 IST
ಅಕ್ಷರ ಗಾತ್ರ

ತುಮಕೂರು: ’ಹಾಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಜಿಲ್ಲೆಯ ಪ್ರಭಾವಿ ನಾಯಕರಾಗಿದ್ದು, ಅವರನ್ನು ಬಿಟ್ಟು ಚುನಾವಣಾ ಪ್ರಚಾರ ಸಭೆ ನಡೆಸಿದರೆ ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡ ಅವರ ಗೆಲುವು ಕಷ್ಟ’ ಎಂದು ಯುವ ಕಾಂಗ್ರೆಸ್ ಘಟಕದ ರಾಜ್ಯ ಉಪಾಧ್ಯಕ್ಷ ಆರ್.ರಾಜೇಂದ್ರ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮುದ್ದಹನುಮೇಗೌಡರು ಎರಡು ಬಾರಿ ಶಾಸಕರಾಗಿದ್ದವರು. ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿದ್ದವರು. ಸಂಸದರಾಗಿ ಜನಮನ್ನಣೆ ಗಳಿಸಿದವರಾಗಿದ್ದು, ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ. ಹೀಗಾಗಿ, ಅವರನ್ನು ಪ್ರಚಾರಕ್ಕೆ ಕರೆ ತರಬೇಕು ಎಂದು ಜಿಲ್ಲಾ ಮುಖಂಡರಿಗೆ ಮನವಿ ಮಾಡಿದ್ದೇವೆ’ ಎಂದು ಹೇಳಿದರು.

’ಹಾಲಿ ಸಂಸದರಿಗೆ ಟಿಕೆಟ್ ಕೊಡದೇ ಇದ್ದರೆ ಬೇರೆ ಯಾರೇ ಸ್ಪರ್ಧಿಸಿದರೂ ಸೋಲಿಸುತ್ತೇವೆ ಎಂದು ಹೇಳಿದ್ದು ನಿಜ. ಆಗ ಟಿಕೆಟ್ ಘೋಷಣೆ ಮಾಡಿರಲಿಲ್ಲ. ಮೈತ್ರಿಧರ್ಮದ ಪ್ರಕಾರ ಪಕ್ಷದ ಹೈಕಮಾಂಡ್ ಜೆಡಿಎಸ್‌ಗೆ ಬಿಟ್ಟುಕೊಟ್ಟು ಎಚ್.ಡಿ.ದೇವೇಗೌಡ ಅವರ ಆಯ್ಕೆಗೆ ಶ್ರಮಿಸಲು ಆದೇಶಿಸಿದ್ದು, ಅದನ್ನು ಅನುಸರಿಸುತ್ತೇವೆ. ದೇವೇಗೌಡರ ಆಯ್ಕೆಗೆ ಸಂಘಟಿತ ಪ್ರಯತ್ನ ಮಾಡುತ್ತೇವೆ’ ಎಂದು ತಿಳಿಸಿದರು.

’ಮಂಡ್ಯದಲ್ಲಿ ಜೆಡಿಎಸ್ ಮುಖಂಡ ಜಿ.ಟಿ.ದೇವೇಗೌಡರು ಆ ಕ್ಷೇತ್ರದ ಮೈತ್ರಿ ಪಕ್ಷದಲ್ಲಿನ ಗೊಂದಲಗಳ ಬಗ್ಗೆ ಮಾತನಾಡುವಾಗ ಕಾಂಗ್ರೆಸ್‌ನವರು ಸಹಕರಿಸುತ್ತಿಲ್ಲ ಎಂದು ಹೇಳಿದ್ದಾರೆ. ಅಲ್ಲಿ ಅವರು ನೀಡಿದ ಹೇಳಿಕೆ ರಾಜ್ಯದ ಬೇರೆ ಕ್ಷೇತ್ರಗಳ ಮೇಲೂ ಪರಿಣಾಮ ಬಿದ್ದೇ ಬೀರುತ್ತದೆ. ಮೈತ್ರಿ ಪಕ್ಷದ ಮುಖಂಡರು ಆ ರೀತಿಯ ಹೇಳಿಕೆ ನೀಡಬಾರದು’ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಘಟಕ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ‘ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಪಕ್ಷಗಳ ಮುಖಂಡರು, ಕಾರ್ಯಕರ್ತರಲ್ಲಿ ಯಾವುದೇ ರೀತಿಯ ಅಸಮಾಧಾನ, ಭಿನ್ನಾಭಿಪ್ರಾಯ, ಗೊಂದಲಗಳಿಲ್ಲ. ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಅಭ್ಯರ್ಥಿ ಎಚ್.ಡಿ.ದೇವೇಗೌಡ, ಸಚಿವ ಎಸ್.ಆರ್.ಶ್ರೀನಿವಾಸ್ ಸೇರಿದಂತೆ ಎರಡೂ ಪಕ್ಷದ ಮುಖಂಡರು ಒಟ್ಟಾಗಿಯೇ ಪ್ರಚಾರ ನಡೆಸಿದ್ದಾರೆ. ಎಲ್ಲೂ ಅಪಸ್ವರ ಇಲ್ಲ’ ಎಂದು ಹೇಳಿದರು.

‘ಏ.10ರಂದು ಜಿಲ್ಲೆಯಲ್ಲಿ ರಾಜ್ಯ ಕಾಂಗ್ರೆಸ್ ಮುಖಂಡರ ದಂಡು ಅಭ್ಯರ್ಥಿ ದೇವೇಗೌಡರ ಪ್ರಚಾರಕ್ಕೆ ಬರಲಿದ್ದು, ಸಿದ್ಧರಾಮಯ್ಯ, ದಿನೇಶ್ ಗುಂಡೂರಾವ್ ಸೇರಿದಂತೆ ಅನೇಕರು ಇರುತ್ತಾರೆ. ಅವರೊಟ್ಟಿಗೆ ಹಾಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರೂ ಪಾಲ್ಗೊಳ್ಳುವರು’ ಎಂದು ತಿಳಿಸಿದರು.

ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಶಶಿ ಹುಲಿಕುಂಟೆ, ಉಲ್ಲಾಸಗೌಡ, ಭರತ್‌ಗೌಡ, ರಾಜೇಶ್ ದೊಡ್ಡಮನಿ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT