ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕೆ ಅಭಿವೃದ್ಧಿಗೆ ಆದ್ಯತೆ

74ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಮತ
Last Updated 16 ಆಗಸ್ಟ್ 2020, 6:36 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲಾಡಳಿತದಿಂದ ಶನಿವಾರ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.

ನಗರದ ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಧ್ವಜಾರೋಹಣ ನೆರವೇರಿಸಿದರು.

ನಂತರ ಮಾತನಾಡಿದ ಅವರು ‘ಈ ದೇಶದಲ್ಲಿ ಯಾವೊಬ್ಬ ಪ್ರಜೆಯೂ ಅವಕಾಶಗಳಿಂದ ವಂಚಿತರಾಗಬಾರದು. ಈ ದಿಕ್ಕಿನಲ್ಲಿ ನಾವು ಸಾಗಬೇಕಿದೆ. ನಾವು ಇಂದು ಜಾತಿ ರಹಿತ ಸಮಾಜವನ್ನು ಸ್ವಲ್ಪ ಮಟ್ಟಿಗೆ ಸೃಷ್ಟಿಸಿದ್ದೇವೆ. ಆದರೆ, ದುರದೃಷ್ಟವಶಾತ್ ನಮ್ಮೊಳಗೆ ವರ್ಗ ಸಮಾಜವನ್ನು ಸೃಷ್ಟಿಸಿಕೊಂಡಿದ್ದೇವೆ. ನಮ್ಮಲ್ಲಿ ಮೊದಲು ಶ್ರೀಮಂತ-ಬಡವ, ಮೇಲು-ಕೀಳು ಎನ್ನುವ ಮನೋಭಾವ ತೊಲಗಬೇಕು. ನಾವು ಆರ್ಥಿಕ ವಿಚಾರದಲ್ಲಿ ಸ್ವಲ್ಪ ಮಟ್ಟಿನ ಸಮಾನತೆ ಸಾಧಿಸಿದ್ದರೂ, ಸಾಮಾಜಿಕವಾಗಿ ಸಮ ಸಮಾಜ ನಿರ್ಮಾಣಕ್ಕೆ ಇನ್ನೂ ಬಹುದೂರ ಸಾಗಬೇಕಾಗಿದೆ’ ಎಂದರು.

ಅತಿಹೆಚ್ಚು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಜಿಲ್ಲೆಯಲ್ಲಿ ನಡೆಯುತ್ತಿವೆ. ಸರ್ಕಾರದಿಂದ ಕೈಗಾರಿಕಾ ನೀತಿ ಘೋಷಣೆಯಾಗಿದೆ. ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಬಿಟ್ಟು ರಾಜ್ಯದಾದ್ಯಂತ ಕೈಗಾರಿಕೆಗಳಿಗೆ ಹೆಚ್ಚು ಪ್ರಾಮುಖ್ಯ ನೀಡಿದ್ದೇವೆ. ಜಿಲ್ಲೆಯಲ್ಲೂ ವಸಂತ ನರಸಾಪುರದ ಕೈಗಾರಿಕಾ ಪ್ರದೇಶವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು. ಕೈಗಾರಿಕೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ತುಮಕೂರು ಜಿಲ್ಲೆಯಲ್ಲಿ ಶೈಕ್ಷಣಿಕ ಪ್ರಗತಿ ಶಿವಕುಮಾರ ಸ್ವಾಮೀಜಿ ಕಾಲದಿಂದ ಆಗಿದೆ. ಒಂದು ಕಾಲದಲ್ಲಿ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದ ಜಿಲ್ಲೆ ಇದೀಗ ಪಾವಗಡದಲ್ಲಿ ಸೋಲಾರ್ ಘಟಕ ನಿರ್ಮಾಣದಿಂದಾಗಿ ಬೇರೆ ಕಡೆಗೂ ವಿದ್ಯುತ್ ಸರಬರಾಜು ಮಾಡುವ ಮಟ್ಟಿಗೆ ಬೆಳೆದಿದ್ದೇವೆ. ನೀರಿನ ಅಭಾವ ಕಾಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಿದ ಕಾರಣ ಜನ, ಜಾನುವಾರುಗಳು ನೆಮ್ಮದಿಯ ಜೀವನ ನಡೆಸುವಂತಾಗಿದೆ ಎಂದರು.

‘ಕೊರೊನಾ ಸೋಂಕಿನ ಭೀತಿಯಿಂದಾಗಿ ನಾವು ನಿರೀಕ್ಷಿತ ಮಟ್ಟದಲ್ಲಿ ಕಾರ್ಯ ಮಾಡಲಾಗಲಿಲ್ಲ ಎಂಬ ನೋವು ನಮಗಿದೆ. ಪ್ರಾಣದ ಹಂಗು ತೊರೆದು ಕೊರೊನಾ ವಿರುದ್ಧ ಹೋರಾಡುತ್ತಿರುವವರನ್ನು ಅಭಿನಂದಿಸುತ್ತೇನೆ’ ಎಂದರು.

ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಜಿಲ್ಲಾ ಪಂಚಾಯಿತಿ ಸಿಇಒ ಶುಭಾ ಕಲ್ಯಾಣ್, ಜಿ.ಪಂ ಅಧ್ಯಕ್ಷೆ ಲತಾ ರವಿಕುಮಾರ್, ಶಾಸಕ ಜಿ.ಬಿ.ಜ್ಯೋತಿಗಣೇಶ್, ಮೇಯರ್ ಫರಿದಾಬೇಗಂ ಮತ್ತಿತರರು ಇದ್ದರು.

ಈ ವೇಳೆ ನಾಗರಿಕ ಪೊಲೀಸ್ ತಂಡ, ಸಶಸ್ತ್ರ ಮೀಸಲು ಪಡೆ, ಕಲ್ಪತರು ಪಡೆ ಸೇರಿದಂತೆ ವಿವಿಧ ಇಲಾಖೆಗಳಿಂದ ಕವಾಯತು ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT