ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ಮುಷ್ಕರ; ಖಾಸಗಿ ಆಸ್ಪತ್ರೆ ಬಂದ್

ಚಿಕಿತ್ಸೆ ಸಿಗದೆ ಪರದಾಟ
Last Updated 12 ಡಿಸೆಂಬರ್ 2020, 6:20 IST
ಅಕ್ಷರ ಗಾತ್ರ

ತುಮಕೂರು: ಆಯುಷ್ ವೈದ್ಯರಿಗೆ ಶಸ್ತ್ರ ಚಿಕಿತ್ಸೆಗೆ ಅವಕಾಶ ನೀಡುವುದನ್ನು ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ಶುಕ್ರವಾರ ಚಿಕಿತ್ಸೆ ನೀಡುವುದರಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು.

ಹೆರಿಗೆ, ಕೊರೊನಾ ಸೋಂಕಿತರು, ತುರ್ತು ಚಿಕಿತ್ಸೆಗೆ ಮಾತ್ರ ವೈದ್ಯರು ಸ್ಪಂದಿಸಿದರು. ಹೊರರೋಗಿಗಳು ಹಾಗೂ ಇತರೆ ಚಿಕಿತ್ಸೆ ನೀಡುವುದರಿಂದ ದೂರ ಉಳಿದರು. ವೈದ್ಯರ ಮುಷ್ಕರ ತಿಳಿಯದೆ ಬಂದಿದ್ದವರು ಚಿಕಿತ್ಸೆ ಸಿಗದೆ ವಾಪಸಾದರು.

ತುಮಕೂರು ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ವೈದ್ಯರು ಮುಷ್ಕರದಲ್ಲಿ ಭಾಗವಹಿಸಿದ್ದರು. ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳು ಬಹುತೇಕ ಕಡೆಗಳಲ್ಲಿ ಕಾರ್ಯನಿರ್ವಹಿಸಲಿಲ್ಲ. ಎಲ್ಲೆಡೆ ರೋಗಿಗಳು ಚಿಕಿತ್ಸೆ ಸಿಗದೆ ಪರದಾಡಿದರು.

ಭಾರತೀಯ ವೈದ್ಯಕೀಯ ಸಂಘದ ಕರೆಯ ಮೇರೆಗೆ ಜಿಲ್ಲಾ ಶಾಖೆ ನೇತೃತ್ವದಲ್ಲಿ ವೈದ್ಯರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಸರ್ಕಾರಿ ಆಸ್ಪತ್ರೆಗಳು ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರು ಒಟ್ಟಾಗಿ ಮುಷ್ಕರ ನಡೆಸುವುದಾಗಿ ಪ್ರಕಟಿಸಿದ್ದರು. ಆದರೆ ಸರ್ಕಾರದ ಕಟ್ಟುನಿಟ್ಟಿನ ಆದೇಶದಿಂದಾಗಿ ಸರ್ಕಾರಿ ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿಲ್ಲ. ಖಾಸಗಿ ಆಸ್ಪತ್ರೆಗಳ ವೈದ್ಯರು ಮಾತ್ರ ಭಾಗವಹಿಸಿದ್ದರು.

ಕೇಂದ್ರ ಸರಕಾರದ ಆಯುಷ್ ಇಲಾಖೆಯ ಸೆಂಟ್ರಲ್ ಕೌನ್ಸಿಲ್ ಫಾರ್ ಇಂಡಿಯನ್ ಮೆಡಿಸಿನ್ (ಸಿಸಿಐಎಂ) ತನ್ನ ವಿದ್ಯಾರ್ಥಿಗಳಿಗೆ ಆಧುನಿಕ ಔಷಧ ಶಸ್ತ್ರಚಿಕಿತ್ಸೆ ಮತ್ತು ಅಭ್ಯಾಸವನ್ನು ಸ್ವತಂತ್ರವಾಗಿ ಮಾಡಲು ಅವಕಾಶ ನೀಡಿ ಆದೇಶ ಹೊರಡಿಸಿರುವುದು ಅವೈಜ್ಞಾನಿಕವಾಗಿದೆ. ಈ ನಿರ್ಧಾರವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಆಯುರ್ವೇದ ಮತ್ತು ಆಧುನಿಕ ವೈದ್ಯ ಪದ್ಧತಿಯನ್ನು ಸಮ್ಮಿಶ್ರಗೊಳಿಸಿ ಹೈಬ್ರಿಡ್ ವೈದ್ಯರನ್ನು ನಿರ್ಮಿಸಲು ಹೊರಟಿದೆ. ಆಯುರ್ವೇದ ವೈದ್ಯರು ಮಾಡಬಹುದಾದ ಆಧುನಿಕ ಶಸ್ತ್ರಚಿಕಿತ್ಸಾ ವಿಧಾನಗಳ ಪಟ್ಟಿಯನ್ನೂ ನೀಡಲಾಗಿದೆ. ಕೆಲವು ಆಯುರ್ವೇದ ವೈದ್ಯರು ಶಸ್ತ್ರ ಚಿಕಿತ್ಸೆಯನ್ನು ಮಾಡುತ್ತಿದ್ದು ಇನ್ನು ಮುಂದೆ ಅಧಿಕೃತವಾಗಿ ಶಸ್ತ್ರ ಚಿಕಿತ್ಸೆ ಮಾಡಲಿದ್ದಾರೆ. ಇದು ಹಿಮ್ಮುಖ ಹೆಜ್ಜೆಯಾಗಿದ್ದು, ಆಧುನಿಕ ವೈದ್ಯ ಪ್ರಕಾರಕ್ಕೆ ಹಿನ್ನಡೆಯಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವೈದ್ಯಕೀಯೇತರರಿಗೆ ಸಮುದಾಯ ಆರೋಗ್ಯ ರಕ್ಷಕರ ಹೆಸರಿನಲ್ಲಿ ಸ್ವತಂತ್ರವಾಗಿ ಪ್ರಾಥಮಿಕ ಚಿಕಿತ್ಸೆ ನೀಡಲು ಅವಕಾಶ ಕಲ್ಪಿಸಿದರೆ ನಕಲಿ ವೈದ್ಯರ ಸೃಷ್ಟಿಗೆ ಕಾರಣವಾಗುತ್ತದೆ. ಆಯುರ್ವೇದ, ಯುನಾನಿ ಚಿಕಿತ್ಸೆಗಳು ತಮ್ಮದೇ ಆದ ಇತಿಹಾಸ, ಪರಂಪರೆ ಹೊಂದಿವೆ. ಪ್ರಾಚೀನ ವೈದ್ಯ ಪದ್ಧತಿಯ ಸಂರಕ್ಷಣೆ ಅಗತ್ಯವಿದೆ. ಅದೇ ಉದ್ದೇಶದಿಂದ ಆಯುಷ್ ಸಚಿವಾಲಯ ಸ್ಥಾಪಿಸಲಾಗಿದೆ. ಆದರೆ ಶಸ್ತ್ರ ಚಿಕಿತ್ಸೆಗೆ ಅವಕಾಶ ನೀಡಿದರೆ ಅಪಾಯ ಎದುರಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT