ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ವಿ.ವಿ.ಯಲ್ಲಿ ಮುಂಬಡ್ತಿ ಗೊಂದಲ

ನ್ಯಾಯಾಲಯದ ಮೊರೆ ಹೋದ ಅವಕಾಶ ವಂಚಿತರು
Last Updated 23 ಜುಲೈ 2020, 19:31 IST
ಅಕ್ಷರ ಗಾತ್ರ

ತುಮಕೂರು: ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿರುವ ತುಮಕೂರು ವಿಶ್ವವಿದ್ಯಾನಿಲಯ ಇದೀಗ ಬೋಧಕೇತರ ನೌಕರರಿಗೆ ಮುಂಬಡ್ತಿ ನೀಡುವ ವಿಚಾರದಲ್ಲಿ ಮತ್ತೊಮ್ಮೆ ಸುದ್ದಿಯಾಗಿದೆ.

ವಿ.ವಿ.ಯ ಅವಕಾಶ ವಂಚಿತ ನೌಕರರು ತಮಗೆ ಮುಂಬಡ್ತಿ ನೀಡುವಲ್ಲಿ ವಿಶ್ವವಿದ್ಯಾನಿಲಯ ಅನ್ಯಾಯ ಮಾಡಿದೆ. ಹಾಗಾಗಿ ತಮಗೆ ನ್ಯಾಯ ದೊರಕಿಸಿಕೊಡುವಂತೆ ಕೋರಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಅಲ್ಲದೆ, ಹೈಕೋರ್ಟ್‌ ಸಹ ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡುವಂತೆ ವಿ.ವಿ.ಗೆ ಸೂಚಿಸಿದೆ.

ಈ ನಡುವೆ ಶುಕ್ರವಾರ ನಡೆದ ಸಿಂಡಿಕೇಟ್ ಸಭೆಯಲ್ಲಿ ಮುಂಬಡ್ತಿ ನೀಡಲು ಅನುಮತಿಯನ್ನು ಪಡೆಯಲಾಗಿದೆ. ವಿಶ್ವವಿದ್ಯಾನಿಲಯದ ಈ ನಡೆ ಅವಕಾಶ ವಂಚಿತ ನೌಕರರನ್ನು ಮತ್ತಷ್ಟು ಕೆರಳಿಸಿದೆ.

ಮುಂಬಡ್ತಿ ವಂಚಿತರ ಆರೋಪವೇನು?: ಸರ್ಕಾರದ ಜೇಷ್ಠತಾ ನಿಯಮಗಳ ಪ್ರಕಾರ ವಿಶ್ವವಿದ್ಯಾನಿಲಯ ಪ್ರತಿ ವರ್ಷವೂ ಜೇಷ್ಠತಾ ಪಟ್ಟಿ ಪ್ರಕಟಿಸಬೇಕು. ಈ ಪಟ್ಟಿ ಪ್ರಕಟಿಸುವ ಸಂದರ್ಭದಲ್ಲಿ ಅಧಿಕೃತವಾಗಿ ಆಕ್ಷೇಪಣೆಗಳನ್ನು ಆಹ್ವಾನಿಸಬೇಕಾಗಿತ್ತು. ಆದರೆ, ವಿಶ್ವವಿದ್ಯಾನಿಲಯ ಈವರೆಗೂ ಆಕ್ಷೇಪಣೆಗೆ ಅವಕಾಶ ನೀಡಿಲ್ಲ. ಹಾಗಾಗಿ ಈ ಪ್ರಕ್ರಿಯೆ ಕಾನೂನು ಮತ್ತು ನಿಯಮಗಳಿಗೆ ವಿರುದ್ಧವಾಗಿವೆ ಎಂದು ಮುಂಬಡ್ತಿ ವಂಚಿತ ಸಿಬ್ಬಂದಿ ಆರೋಪಿಸಿದ್ದಾರೆ.

ಪ್ರಕ್ರಿಯೆ ಸ್ಥಗಿತಗೊಳಿಸಿ: ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುವಾಗ ಈ ಪ್ರಕ್ರಿಯೆ ನಡೆಸಿರುವುದು ಸರಿಯಲ್ಲ. ಹಾಗಾಗಿ ನ್ಯಾಯಾಲಯದಲ್ಲಿ ದಾಖಲಿಸಿರುವ ಮೊಕದ್ದಮೆಗಳು ಇತ್ಯರ್ಥವಾಗುವವರೆಗೂ ಮುಂಬಡ್ತಿ ಪ್ರಕ್ರಿಯೆ ಸ್ಥಗಿತಗೊಳಿಸಬೇಕು ಎಂದು ಅವಕಾಶ ವಂಚಿತರು ಒತ್ತಾಯಿಸಿದ್ದಾರೆ.

ಕುಲಪತಿ ಹೇಳುವುದೇನು?
ನ್ಯಾಯಾಲಯದ ಮೊರೆ ಹೋಗಿರುವವರು ಮುಂಬಡ್ತಿಗೆ ಅರ್ಹತೆಯನ್ನೇ ಹೊಂದಿಲ್ಲ. ಜತೆಗೆ ಮುಂಬಡ್ತಿಗಾಗಿ ನಡೆಯುವ ಪರೀಕ್ಷೆ ಬರೆಯುವುದಕ್ಕೂ ಇವರಿಗೆ ಅವಕಾಶ ಇರಲಿಲ್ಲ ಎಂದುಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಸ್ಪಷ್ಟಪಡಿಸಿದರು.

‘ಇನ್ನೊಬ್ಬರಿಗೆ ತೊಂದರೆ ನೀಡುವ ಸಲುವಾಗಿ ಕೋರ್ಟ್‌ ಮೊರೆ ಹೋಗಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಸ್ಪಷ್ಟೀಕರಣ ನೀಡಿದೆಯೇ ಹೊರತು, ಮುಂಬಡ್ತಿಗೆ ತಡೆ ನೀಡಿಲ್ಲ. ಹಾಗಾಗಿ ರಾಜ್ಯಪಾಲರು ಅನಮೋದಿಸಿರುವ ಮುಂಬಡ್ತಿ ಪ್ರಕ್ರಿಯೆಯನ್ನು ಮುಂದುವರಿಸಿದ್ದೇವೆ. ಪರೀಕ್ಷೆ ಬರೆದು ಉತ್ತೀರ್ಣರಾದವರನ್ನು ರೋಸ್ಟರ್ ಮಾದರಿಯಲ್ಲಿ ಪರಿಗಣಿಸಿದ್ದೇವೆ’ ಎಂದು ಹೇಳಿದರು.

‘ನ್ಯಾಯಾಲಯ ಮುಂಬಡ್ತಿ ಪ್ರಕ್ರಿಯೆಗೆ ತಡೆ ನೀಡಿದ್ದರೆ ಸಿಂಡಿಕೇಟ್ ಸಭೆಯ ಗಮನಕ್ಕೆ ತರುತ್ತಿದ್ದೆವು. ಆದರೆ, ನ್ಯಾಯಾಲಯ ಸ್ಪಷ್ಟೀಕರಣ ಕೇಳುವುದು ಸಾಮಾನ್ಯದ ಸಂಗತಿ. ಹಾಗಾಗಿ ಆಡಳಿತಾತ್ಮಕ ವಿಚಾರವನ್ನು ಗಮನಕ್ಕೆ ತರುವ ಅಗತ್ಯವಿಲ್ಲ’ ಎಂದರು.

ಸಿಂಡಿಕೇಟ್ ಸದಸ್ಯರ ಗಮನಕ್ಕೂ ಇಲ್ಲ
‘ಮುಂಬಡ್ತಿ ವಿಚಾರದಲ್ಲಿ ಅವಕಾಶ ವಂಚಿತರು ನ್ಯಾಯಾಲಯದ ಮೊರೆ ಹೋಗಿರುವ ವಿಚಾರ ಹಾಗೂ ನ್ಯಾಯಾಲಯ ಈ ಬಗ್ಗೆ ಸ್ಪಷ್ಟೀಕರಣ ಕೋರಿರುವ ಬಗ್ಗೆ ನಮ್ಮ ಗಮನದಲ್ಲಿ ಇರಲಿಲ್ಲ. ಕುಲಪತಿ, ಕುಲಸಚಿವರು ಈ ವಿಷಯವನ್ನು ತಮಗೆ ತಿಳಿಸಿದೆ ಜುಲೈ 17ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಅನುಮತಿ ಪಡೆದಿದ್ದಾರೆ’ ಎಂದು ಕೆಲವು ಸಿಂಡಿಕೇಟ್ ಸದಸ್ಯರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT