ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೀಟ್ ಪರೀಕ್ಷೆಯಲ್ಲಿ ಭ್ರಷ್ಟಾಚಾರ: ಪ್ರತಿಭಟನೆ

ಎಐಡಿಎಸ್‌ಒ ವತಿಯಿಂದ ಪ್ರತಿಭಟನೆ
Published 12 ಜೂನ್ 2024, 5:59 IST
Last Updated 12 ಜೂನ್ 2024, 5:59 IST
ಅಕ್ಷರ ಗಾತ್ರ

ತುಮಕೂರು: ನೀಟ್ ಪರೀಕ್ಷೆಯಲ್ಲಿ ಭ್ರಷ್ಟಾಚಾರ ನಡೆದಿದ್ದು, ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ಆಗ್ರಹಿಸಿ ಎಐಡಿಎಸ್‍ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಬಿಜಿಎಸ್‌ ವೃತ್ತದಿಂದ ಬಿಎಸ್‍ಎನ್‍ಎಲ್ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.

‘ಶಿಕ್ಷಣ ವ್ಯಾಪಾರವಾಗಿದ್ದು, ವೈದ್ಯಕೀಯ ಶಿಕ್ಷಣ ಪಡೆಯುವುದು ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಗಗನ ಕುಸುಮವಾಗಿದೆ. ಹಗಲಿರುಳು ಪರಿಶ್ರಮ ಹಾಕಿ ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ನೀಟ್ ಪರೀಕ್ಷೆಯ ಹಗರಣವು ಶಿಕ್ಷಣ ಕ್ಷೇತ್ರದ ಅತ್ಯಂತ ದೊಡ್ಡ ಹಗರಣ’ ಎಂದು ಎಐಡಿಎಸ್‍ಒ ರಾಜ್ಯ ಉಪಾಧ್ಯಕ್ಷ ಅಭಯ ದಿವಾಕರ್‌ ಆರೋಪಿಸಿದರು.

ವೈದ್ಯರಾಗಬೇಕು ಎಂಬ ಕನಸು ಕಂಡಿದ್ದ ವಿದ್ಯಾರ್ಥಿಗಳು ಇದೀಗ ಅತಂತ್ರರಾಗಿದ್ದಾರೆ. ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ಹಲವು ವಿದ್ಯಾರ್ಥಿಗಳು ಸಮಾನ ಅಂಕ ಪಡೆಯಲು ಹೇಗೆ ಸಾಧ್ಯ? ನೀಟ್‌ ಪರೀಕ್ಷೆಗಾಗಿ ಲಕ್ಷಾಂತರ ರೂಪಾಯಿ ಲಂಚ ಪಡೆದಿರುವುದು ಗೊತ್ತಾಗಿದೆ. ಹಿಂದಿನ ರೀತಿಯಲ್ಲಿ ಸಿಇಟಿ ಪರೀಕ್ಷೆ ಮಾನದಂಡವಾಗಿಸಿ ವೈದ್ಯಕೀಯ ಶಿಕ್ಷಣ ನೀಡಬೇಕು. ಈ ಹಗರಣದಲ್ಲಿ ಭಾಗಿಯಾದ ಎಲ್ಲ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಎಐಡಿಎಸ್‍ಒ ಜಿಲ್ಲಾ ಘಟಕದ ಅಧ್ಯಕ್ಷೆ ಅಶ್ವಿನಿ, ‘ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಿ ಸಿಇಟಿ ಮತ್ತು ಮೆರಿಟ್‌ ಆಧಾರದ ಮೇಲೆ ವಿದ್ಯಾರ್ಥಿಗಳ ಪ್ರವೇಶಾತಿಗೆ ಅವಕಾಶ ಕಲ್ಪಿಸಬೇಕು. ಇದು ಸರ್ಕಾರದ ಜವಾಬ್ದಾರಿ. ಆದರೆ, ಸರ್ಕಾರ ತನ್ನ ಜವಾಬ್ದಾರಿಯನ್ನು ಪೋಷಕರಿಗೆ ವರ್ಗಾಯಿಸುತ್ತಿದೆ. ನೀಟ್‌ ಪರೀಕ್ಷೆ ಶಿಕ್ಷಣ ವ್ಯವಸ್ಥೆಯ ಕ್ಯಾನ್ಸರ್ ಇದ್ದಂತೆ. ಇದಕ್ಕೆ ಇನ್ನೆಷ್ಟು ವಿದ್ಯಾರ್ಥಿಗಳು ಬಲಿಯಾಗಬೇಕು?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಐಡಿಎಸ್‍ಒ ಜಿಲ್ಲಾ ಕಾರ್ಯದರ್ಶಿ ಸಿ.ಬಿ.ಲಕ್ಕಪ್ಪ, ಪದಾಧಿಕಾರಿಗಳಾದ ಅಕ್ಷರ, ಮಿಥುನ, ಭರತ್, ಪಲ್ಲವಿ, ಸುಮಂತ್‌, ನಂದಿಶ್‌ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT