ತುಮಕೂರು: ಕೋಲ್ಕತ್ತದ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಕೊಲೆ ಖಂಡಿಸಿ ನಗರದಲ್ಲಿ ಮಂಗಳವಾರ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್) ವತಿಯಿಂದ ಪ್ರತಿಭಟನೆ ನಡೆಯಿತು.
‘ಪ್ರಸ್ತುತ ದಿನಗಳಲ್ಲಿ ಮಹಿಳೆಯರಿಗೆ ಭದ್ರತೆ ಮರೀಚಿಕೆಯಾಗಿದೆ. ಮಹಿಳೆಯರ ಮೇಲೆ ಪ್ರತಿ ನಿತ್ಯ ದೌರ್ಜನ್ಯಗಳು ನಡೆಯುತ್ತಿವೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕು. ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಮಹಿಳೆಯರು ಸ್ವಯಂ ರಕ್ಷಣೆಯ ಕೌಶಲ ಕಲಿಯಬೇಕು. ಇಂತಹ ಘಟನೆಗಳ ವಿರುದ್ಧ ಒಗ್ಗಟ್ಟಾಗಿ ಪ್ರತಿಭಟಿಸಬೇಕು, ಧ್ವನಿ ಎತ್ತಬೇಕು’ ಎಂದು ಪಾವನ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಪಾವನ ಹೇಳಿದರು.
ಎಐಎಂಎಸ್‌ಎಸ್ ಜಿಲ್ಲಾ ಘಟಕದ ಅಧ್ಯಕ್ಷೆ ಎಂ.ವಿ.ಕಲ್ಯಾಣಿ, ‘ವಿದ್ಯಾರ್ಥಿನಿ ಕೊಲೆ ಪ್ರಕರಣವನ್ನು ಮುಚ್ಚಿ ಹಾಕುವ ಕುತಂತ್ರ ನಡೆಯುತ್ತಿದೆ. ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ದೌರ್ಜನ್ಯದ ವಿರುದ್ಧ ಪ್ರತಿಯೊಬ್ಬರು ರಸ್ತೆಗೆ ಇಳಿಯಬೇಕು. ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಬೇಕು’ ಎಂದು ಒತ್ತಾಯಿಸಿದರು.
ಎಐಎಂಎಸ್‌ಎಸ್ ಕಾರ್ಯದರ್ಶಿಗಳಾದ ರತ್ನಮ್ಮ, ಶ್ಯಾಮಲಾ, ರೂಪಾ, ಚೈತ್ರಾ, ಕೋಮಲಾ ಇತರರು ಭಾಗವಹಿಸಿದ್ದರು.