ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: 30ಕ್ಕೆ ಪರಮೇಶ್ವರ ಮನೆ ಮುಂದೆ ಪ್ರತಿಭಟನೆ

ಸಚಿವ ಸ್ಥಾನಕ್ಕೆ ಪರಮೇಶ್ವರ ರಾಜೀನಾಮೆಗೆ ಆಗ್ರಹ; ಹೋರಾಟ ಮತ್ತಷ್ಟು ಚುರುಕು
Published 25 ಮೇ 2024, 4:42 IST
Last Updated 25 ಮೇ 2024, 4:42 IST
ಅಕ್ಷರ ಗಾತ್ರ

ತುಮಕೂರು: ಹೇಮಾವತಿ ‘ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್’ ನಿರ್ಮಾಣ ವಿರೋಧಿಸಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಮನೆ ಎದುರು ಮೇ 30ರಂದು ಪ್ರತಿಭಟನೆ ನಡೆಸಲು ನಗರದಲ್ಲಿ ಶುಕ್ರವಾರ ನಡೆದ ಹೋರಾಟಗಾರರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ನಿರ್ಧರಿಸಲಾಯಿತು.

ಕೊಳವೆ ಮಾರ್ಗ ನಿರ್ಮಾಣ ಮಾಡಿ ಗುಬ್ಬಿ, ಕುಣಿಗಲ್ ಮೂಲಕ ಮಾಗಡಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಈಗಾಗಲೇ ಹೋರಾಟ ಆರಂಭಿಸಿದ್ದಾರೆ. ಇದರ ಮುಂದುವರಿದ ಭಾಗವಾಗಿ ನಗರದ ಹೊರ ವಲಯದಲ್ಲಿರುವ ಸಿದ್ಧಾರ್ಥ ನಗರದ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಕಾಲುವೆ ಮೂಲಕ ನೀರು ತೆಗೆದುಕೊಂಡು ಹೋಗಲು ಯಾವುದೇ ಅಭ್ಯಂತರವಿಲ್ಲ. ಆದರೆ ಕೊಳವೆ ಮಾರ್ಗದಲ್ಲಿ ನೀರು ಹರಿಸಲು ಅವಕಾಶ ನೀಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.

ರೈತರು ಪ್ರತಿಭಟನೆ ಆರಂಭಿಸಿದ ನಂತರವೂ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಸ್ಥಗಿತಗೊಳಿಸಲು ಪರಮೇಶ್ವರ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಚಿವರು ಜಿಲ್ಲೆಯ ಹಿತ ಕಾಪಾಡುವ ಬದಲು ಸಚಿವ ಸ್ಥಾನಕ್ಕೆ ಅಂಟಿಕೊಂಡು ಕುಳಿತಿದ್ದಾರೆ. ಮೊದಲು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.

ನಾಲೆ ಬಳಿ ಪ್ರತಿಭಟನೆ ನಡೆಸಿ 20 ದಿನಗಳು ಕಳೆದಿದ್ದರೂ ಈವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸಚಿವ ಸಂಪುಟ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ತುರ್ತಾಗಿ ನಿರ್ಧಾರ ಕೈಗೊಂಡು ಕೆಲಸ ನಿಲ್ಲಿಸಬೇಕಿತ್ತು. ಆದರೆ ಅಂತಹ ಯಾವುದೇ ಪ್ರಯತ್ನಕ್ಕೆ ಮುಂದಾಗಿಲ್ಲ. ಸಚಿವರು, ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದೆ ಇರುವುದರಿಂದ ಹೋರಾಟ ಚುರುಕುಗೊಳಿಸಲು ನಿರ್ಧರಿಸಲಾಯಿತು.

ಹೋರಾಟದ ಮುಂದಿನ ಹಂತವಾಗಿ ಲೋಕಸಭೆ ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ಸಭೆ ನಡೆಸಿ ಜಿಲ್ಲಾ ಬಂದ್‌ಗೆ ಕರೆ ನೀಡುವುದು. ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದು. ಕಾವೇರಿ ನ್ಯಾಯಾಧಿಕರಣದ ಮುಂದೆಯೂ ವಿಷಯ ಪ್ರಸ್ತಾಪಿಸುವ ಬಗ್ಗೆಯೂ ಚರ್ಚಿಸಲಾಯಿತು. ಈ ಬಗ್ಗೆ ಕಾನೂನು ತಜ್ಞರ ಜತೆ ಚರ್ಚಿಸಿ, ಮತ್ತಷ್ಟು ವಿವರ ಪಡೆದುಕೊಂಡು, ಸ್ಪಷ್ಟತೆ ಸಿಕ್ಕ ನಂತರ ಕಾನೂನು ಹೋರಾಟದ ಬಗ್ಗೆಯೂ ಚಿಂತಿಸಲು ತೀರ್ಮಾನಿಸಲಾಯಿತು.

ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ನಿರ್ಮಿಸಿ ಮಾಗಡಿ ಭಾಗಕ್ಕೆ ನೀರು ತೆಗೆದುಕೊಂಡು ಹೋದರೆ ಜಿಲ್ಲೆಯ ಜನರಿಗೆ ಕುಡಿಯಲು ನೀರು ಸಿಗದಾಗುತ್ತದೆ. ಏತ ನೀರಾವರಿ ಯೋಜನೆಗಳಿಗೆ ನೀರು ಹರಿಸಲು ಸಾಧ್ಯವಾಗುವುದಿಲ್ಲ. ಕೆರೆ ತುಂಬಿಸಲು, ಕುಡಿಯಲು ನೀರು ಒದಗಿಸುವುದು ಕಷ್ಟಕರವಾಗುತ್ತದೆ. ಇನ್ನೂ ಕೊರಟಗೆರೆ, ಮಧುಗಿರಿ ಭಾಗಕ್ಕೆ ಕುಡಿಯುವ ನೀರು ಕೊಡುವುದು ದೂರದ ಮಾತಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಾಗಡಿಗೆ ನೀರು ಕೊಟ್ಟರೆ ಜಿಲ್ಲೆಯ ಜನರು ಪರಿತಪಿಸಬೇಕಾಗುತ್ತದೆ ಎಂಬ ಬಗ್ಗೆಯೂ ಚರ್ಚಿಸಲಾಯಿತು.

ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್‌ಗೌಡ, ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಸಚಿವರಾದ ಡಿ.ನಾಗರಾಜಯ್ಯ, ಸೊಗಡು ಶಿವಣ್ಣ, ಮುಖಂಡರಾದ ಎಚ್.ನಿಂಗಪ್ಪ, ಎಸ್.ಡಿ.ದಿಲೀಪ್ ಕುಮಾರ್, ಬಿ.ಎಸ್.ನಾಗರಾಜು, ಪಿ.ಎಚ್.ಅನಿಲ್ ಕುಮಾರ್, ಪಂಚಾಕ್ಷರಯ್ಯ, ಸೊಗಡು ಕುಮಾರಸ್ವಾಮಿ, ಎಂ.ಪಿ.ಪ್ರಸನ್ನಕುಮಾರ್, ಪುರವರಮೂರ್ತಿ, ಬಸವಕುಮಾರ್, ಆಟೊ ನವೀನ್, ಸಂಧ್ಯಾಕಿರಣ್, ಕೋಯಿಲಾ ಗಂಗಾಧರ್, ಧನಂಜಯ ಆರಾಧ್ಯ, ದ್ಯಾಮೇಗೌಡ, ನಾಗೇಂದ್ರ, ಗಂಗಾಧರಯ್ಯ, ಕೆ.ಬಿ.ಉಮೇಶ್ ಇತರರು ಸಭೆಯಲ್ಲಿ ಭಾಗವಹಿಸಿದ್ದರು.

ಹೋರಾಟದ ಹಾದಿ

ಈಗಾಗಲೇ ಗುಬ್ಬಿ ತಾಲ್ಲೂಕಿನ ಡಿ.ರಾಂಪುರ ಸಮೀಪದ ಸುಂಕಾಪುರ ಗ್ರಾಮದ ಬಳಿ ಪ್ರತಿಭಟನೆ ನಡೆಸಿ ನಾಲೆಗೆ ಮಣ್ಣು ಮುಚ್ಚಲಾಗಿತ್ತು. ಸಿ.ಎಸ್‌.ಪುರ ಹೋಬಳಿಯ ಚೆನ್ನೇನಹಳ್ಳಿ ಬಳಿ ನಾಲೆಗೆ ಮಣ್ಣು ಮುಚ್ಚಿ ಕಾಮಗಾರಿಗೆ ತಡೆಯೊಡ್ಡಿದರು. ಇದರ ಮುಂದುವರಿದ ಭಾಗವಾಗಿ ಸಚಿವರ ಮನೆ ಎದುರು ಪ್ರತಿಭಟನೆ ನಡೆಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT