ಬುಧವಾರ, ಆಗಸ್ಟ್ 4, 2021
22 °C
ಕಾಂಗ್ರೆಸ್ ಮುಖಂಡ ಮತ್ತು ಸಿಪಿಐ ನಡುವಿನ ದೂರವಾಣಿ ಸಂಭಾಷಣೆ ವಿವಾದ

ಶವಪರೀಕ್ಷೆ: ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಣಿಗಲ್: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಶವಪರೀಕ್ಷೆ ವಿಷಯದಲ್ಲಿ ಕಾಂಗ್ರೆಸ್ ಮುಖಂಡ ಮತ್ತು ಸಿಪಿಐ ನಡುವಿನ ದೂರವಾಣಿ ಸಂಭಾಷಣೆ ವಿವಾದ ಸೃಷ್ಟಿಸಿದೆ.

ಸಿಪಿಐ ದರ್ಪದ ನುಡಿಗಳನ್ನಾಡಿದ್ದಾರೆ ಎಂದು ಆರೋಪಿಸಿ ಶಾಸಕ ಡಾ.ರಂಗನಾಥ್ ನೇತೃತ್ವದಲ್ಲಿ ಶನಿವಾರ ಪೊಲೀಸ್ ಠಾಣೆ ಮುಂದೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಶುಕ್ರವಾರ ಸಂಜೆ ಹುಲಿಯೂರು ದುರ್ಗದಲ್ಲಿ ಸಿಮೆಂಟ್ ಲಾರಿ ಡಿಕ್ಕಿ ಹೊಡೆದು, ಬಂಡಿಹಳ್ಳಿಯ ರಮೇಶ್ ಮೃತಪಟ್ಟಿದ್ದರು. ಈ ಬಗ್ಗೆ ಮೃತನ ಸಂಬಂಧಿಗಳಾದ ಕುಮಾರ್ ಮತ್ತು ವಕೀಲರೊಂದಿಗೆ ಹುಲಿಯೂರುದುರ್ಗ ಠಾಣೆಗೆ ದೂರು ದಾಖಲಿಸಿ, ಠಾಣಾಧಿಕಾರಿಯೊಂದಿಗೆ ಚರ್ಚಿಸಿದರು. ರಾತ್ರಿಯಾಗುತ್ತಿರುವುದರಿಂದ ಶವಪರೀಕ್ಷೆ ಶನಿವಾರ ಬೆಳಗ್ಗೆ ಮಾಡಿಕೊಡಲು ತಿಳಿಸಿ ತೆರಳಿದ್ದರು.

ಮಧ್ಯೆ ಪ್ರವೇಶಿಸಿದ ಎಪಿಎಂಸಿ ನಿರ್ದೇಶಕ ಬಾ.ನಾ.ರವಿ, ಠಾಣಾಧಿಕಾರಿಯೊಂದಿಗೆ ಚರ್ಚಿಸಿ ರಾತ್ರಿಯೇ ಶವಪರೀಕ್ಷೆ ಮಾಡಿಸಿಕೊಡಲು ಮನವಿ ಮಾಡಿದ್ದಾರೆ. ಠಾಣಾಧಿಕಾರಿ ರಾಮಚಂದ್ರಪ್ಪ, ಸಿಪಿಐ ಗುರುಪ್ರಸಾದ್ ಅವರು ಗಮನಕ್ಕೆ ತಂದು ಮಾಡಿಕೊಡುವುದಾಗಿ ತಿಳಿಸಿದ್ದಾರೆ. ಮುಖಂಡ ರವಿ ತಾವೇ ಸಿಪಿಐ ಗುರುಪ್ರಸಾದ್‌ ಅವರನ್ನು ಸಂಪರ್ಕಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಸಂಭಾಷಣೆಯಲ್ಲಿ ಸಿಪಿಐ ಶವಪರೀಕ್ಷೆಗೆ ರಾಜಕೀಯ ಪ್ರಭಾವ ಬೀರುವುದನ್ನು ಖಂಡಿಸಿದ್ದಾರೆ. ಠಾಣೆ ವ್ಯಾಪ್ತಿಯ ಪ್ರಕರಣದಲ್ಲಿ ಪ್ರಭಾವ ಬೀರುತ್ತಿರುವುದರ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಈ ಸಂಭಾಷಣೆಯ ಹಂತದಲ್ಲಿ ಶಾಸಕ ಡಾ. ರಂಗನಾಥ್ ಸಹ ಕಾನ್ಫರೆನ್ಸ್‌ ಕರೆಯಲ್ಲಿದ್ದನ್ನು ತಿಳಿದ ಸಿಪಿಐ ‘ಇದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ತಿಳಿಸಿ ಸಂಭಾಷಣೆ ಮುಗಿಸಿದ್ದಾರೆ.

ಅಮೃತೂರು ಸಿಪಿಐ ಗುರುಪ್ರಸಾದ್‌ ಅವರ ಮಾತುಗಳಿಂದ ಅಸಮಾಧಾನಗೊಂಡ ಶಾಸಕ ಡಾ.ರಂಗನಾಥ್ ಮತ್ತು ಮುಖಂಡರು ಶನಿವಾರ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸಿದರು.

ಶಾಸಕ ಡಾ.ರಂಗನಾಥ್ ಮಾತನಾಡಿ, ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಗೌರವಯುತ ಶವಸಂಸ್ಕಾರಕ್ಕೂ ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ. ತಾಲ್ಲೂಕಿನಲ್ಲಿ ಕಾಂಗ್ರೆಸ್ ಮುಖಂಡರ ಮೇಲೆ ಪೊಲೀಸ್ ದರ್ಪ ಹೆಚ್ಚಾಗುತ್ತಿದೆ. ವಿನಾಕಾರಣ ಪ್ರಕರಣ ದಾಖಲಾಗುತ್ತಿವೆ. ಕಾರ್ಯಕರ್ತರು ಮುಖಂಡರಿಗೆ ಪೊಲೀಸ್ ಅಧಿಕಾರಿಗಳಿಂದ ಅನ್ಯಾಯವಾಗುತ್ತಿದೆ. ಸಿಪಿಐ ಗುರುಪ್ರಸಾದ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.

ಡಿವೈಎಸ್‌ಪಿ ರಮೇಶ್ ಪ್ರತಿಕ್ರಿಯಿಸಿ, ಹುಲಿಯೂರುದುರ್ಗ ಶವಪರೀಕ್ಷೆ ಘಟನೆ ವಿವರಿಸಿ, ರಾತ್ರಿಯೇ ಶವಪರೀಕ್ಷೆ ನಡೆಸಿ ಸಂಬಂಧಿಕರ ವಶಕ್ಕೆ ನೀಡಲಾಗಿದೆ. ಪೊಲೀಸ್ ಅಧಿಕಾರಿಗಳ ವರ್ತನೆ ಬಗ್ಗೆ ತಪ್ಪಾಗಿದ್ದರೆ ಹಿರಿಯ ಅಧಿಕಾರಗಳ ಗಮನಕ್ಕೆ ತಂದು ಕ್ರಮ ತೆಗೆದುಕೊಳ್ಳಲಾಗುವುದು. ಕರ್ಫ್ಯೂ ಇರುವುದರಿಂದ ಪ್ರತಿಭಟನೆ ಕೈಬಿಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ಚರ್ಚಿಸಿದ ಶಾಸಕರು, ಸಂಜೆ ತುಮಕೂರು ಕಚೇರಿಯಲ್ಲಿ ಶಾಸಕರ ಸಮ್ಮುಖದಲ್ಲಿ ಸಿಪಿಐ ಗುರುಪ್ರಸಾದ್‌ ಅವರ ವಿಚಾರಣೆ ಮಾಡುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಸ್ಥಗಿತಗೊಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ಪುರಸಭೆ ಅಧ್ಯಕ್ಷ ನಾಗೇಂದ್ರ, ಉಪಾಧ್ಯಕ್ಷೆ ಮಂಜುಳಾ, ಸಿಪಿಐ ಡಿ.ಎಲ್.ರಾಜು, ತುರುವೇಕೆರೆ ಸಿಪಿಐ ವಿನಯ್, ಪಿಎಸ್ಐ ಚೇತನ್ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು