ಕಡ್ಲೆಕಾಯಿ ಮಾರುವ ಮಂಜೇಶನಿಗೆ ಪಿಯುಸಿಯಲ್ಲಿ ಶೇ 96 ಅಂಕ

ಶುಕ್ರವಾರ, ಮೇ 24, 2019
30 °C

ಕಡ್ಲೆಕಾಯಿ ಮಾರುವ ಮಂಜೇಶನಿಗೆ ಪಿಯುಸಿಯಲ್ಲಿ ಶೇ 96 ಅಂಕ

Published:
Updated:
Prajavani

ಕುಣಿಗಲ್: ಪಟ್ಟಣದ ಜ್ಞಾನಭಾರತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ, ಹುಲಿಯೂರುದುರ್ಗದ ಬಸ್ ನಿಲ್ದಾಣದಲ್ಲಿ  ಕಡ್ಲೆಕಾಯಿ ಮಾರಾಟ ಮಾಡುವ ಮಂಜೇಶ್‌ ಪಿಯುಸಿಯಲ್ಲಿ ಶೇ 96.16 ಅಂಕಗಳಿಸಿ ಸಾಧನೆ ಮೆರೆದಿದ್ದಾನೆ. 

ಹುಲಿಯೂರುದುರ್ಗದ ಹಳೆಪೇಟೆಯ ವೆಂಕಟೇಶ್ ಮತ್ತು ಪ್ರತಿಮಾ ದಂಪತಿ ಪುತ್ರ ಮಂಜೇಶ್ ನಿತ್ಯ ಕಾಲೇಜು ಬಿಟ್ಟ ನಂತರ ಊರಿಗೆ ತೆರಳಿ ಬಸ್ ನಿಲ್ದಾಣದಲ್ಲಿ ಕಡ್ಲೆಕಾಯಿ ಮಾರಾಟ ಮಾಡಿ ತನ್ನ ಓದಿಗೂ ಮತ್ತು ಪೋಷಕರ ಜೀವನ ನಿರ್ವಹಣೆಗೂ ಸಹಕರಿಸುತ್ತಿದ್ದನು. 

ದ್ವಿತೀಯ ಪಿಯುಸಿಯಲ್ಲಿ ಕನ್ನಡ ವಿಷಯದಲ್ಲಿ 97, ಇಂಗ್ಲಿಷ್ 91, ಭೌತಶಾಸ್ತ್ರ 98, ರಸಾಯನ ಶಾಸ್ತ್ರ 99, ಗಣಿತ 98, ಜೀವಶಾಸ್ತ್ರ 94 ಅಂಕ ಪಡೆದಿದ್ದಾನೆ.

‘ಕಡ್ಲೆಕಾಯಿ ಮಾರಾಟ ಮಾಡಿ, ನನ್ನ ಖರ್ಚು ಮತ್ತು ಕುಟುಂಬ ನಿರ್ವಹಣೆಗೂ ಸಹಾಯ ಮಾಡಿದ ತೃಪ್ತಿ ಇದೆ. ಪೋಷಕರ ಸಹಕಾರ ಮತ್ತು ಉಪನ್ಯಾಸಕರ ಮಾರ್ಗದರ್ಶನ ಸಾಧನೆಗೆ ಸಹಕಾರಿಯಾಗಿದೆ’ ಎನ್ನುವ ಮಂಜೇಶ್‌ಗೆ ಪಶುವೈದ್ಯನಾಗಬೇಕೆಂಬ ಹಂಬಲ.

ಹೂ ಕಟ್ಟುವ ಹುಡುಗಿ ವಾಣಿಜ್ಯ ವಿಭಾಗದಲ್ಲಿ ತಾಲ್ಲೂಕಿಗೆ ತೃತೀಯ ಸ್ಥಾನ

ಜ್ಞಾನಭಾರತಿ ಪದವಿಪೂರ್ವ ಕಾಲೇಜಿನ ನಂದಿನಿ, ಹೂಕಟ್ಟಿ ಮಾರುತ್ತಲೇ ಶೈಕ್ಷಣಿಕ ವೆಚ್ಚ ಸರಿದೂಗಿಸಿ ವಾಣಿಜ್ಯ ವಿಭಾಗದಲ್ಲಿ ಶೇ 96.50 ಅಂಕ ಪಡೆದು ತಾಲ್ಲೂಕಿಗೆ ತೃತೀಯ ಸ್ಥಾನ ಪಡೆದಿದ್ದಾಳೆ.

ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ನಂದಿನಿ, ತಾಯಿ, ಸೋದರತ್ತೆ ಮತ್ತು ಸೋದರಮಾವನ ಆಶ್ರಯದಲ್ಲಿ ಬೆಳೆದಳು. ಜೀವನಾಧಾರಕ್ಕಾಗಿ ತಾಯಿ ಲಕ್ಷ್ಮಿ ಸಿದ್ಧ ಉಡುಪಿನ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. 

ಕನ್ನಡ ವಿಷಯದಲ್ಲಿ 99, ಇಂಗ್ಲಿಷ್ 91, ಅರ್ಥಶಾಸ್ತ್ರದಲ್ಲಿ  95, ರಾಜ್ಯಶಾಸ್ತ್ರ 95, ವ್ಯವಹಾರಿಕ ಅಧ್ಯಯನದಲ್ಲಿ 100 ಮತ್ತು ಲೆಕ್ಕಶಾಸ್ತ್ರದಲ್ಲಿ 99 ಅಂಕ ಪಡೆದಿದ್ದಾಳೆ. ಬೆಳಿಗ್ಗೆ 6ರಿಂದ ಸಂಜೆ 6ರವೆಗೆ ಕಾಲೇಜು ನಂತರ ಮನೆಬಳಿ ಹೂಕಟ್ಟಿ ಮಾರಿ ಸಂಗ್ರಹಿಸಿದ ಹಣವನ್ನು ಕ್ರೋಢೀಕರಿಸಿ ಯಾರಿಗೂ ಹೊರೆಯಾಗದೆ ಸಾಧನೆ ಮಾಡಿದ್ದಾಳೆ ನಂದಿನಿ.

‘ನನ್ನ ಓದಿಗೆ ಸೋದರತ್ತೆ ಮಾವನವರ ಸಹಕಾರ ಮತ್ತು ಉಪನ್ಯಾಸಕರ ಮಾರ್ಗದರ್ಶನ ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಸಿ.ಎ ಮಾಡುವ ಆಸೆಯಿದೆ’ ಎಂದು ನಂದಿನಿ ತಿಳಿಸಿದಳು.

ಬರಹ ಇಷ್ಟವಾಯಿತೆ?

 • 13

  Happy
 • 1

  Amused
 • 2

  Sad
 • 0

  Frustrated
 • 4

  Angry

Comments:

0 comments

Write the first review for this !