ಮಂಗಳವಾರ, ಸೆಪ್ಟೆಂಬರ್ 17, 2019
24 °C
ಆತಂಕದಲ್ಲಿ ಪಿಯು ವಿದ್ಯಾರ್ಥಿಗಳು

ಮೌಲ್ಯಮಾಪನ ಯಡವಟ್ಟು: 79 ಅಂಕ ಬಂದಿದ್ದರೂ 10 ಕೊಟ್ಟ ಮೌಲ್ಯಮಾಪಕ!

Published:
Updated:
Prajavani

ಪಾವಗಡ: ಮೌಲ್ಯಮಾಪಕರ ಯಡವಟ್ಟಿನಿಂದಾಗಿ ಪಿಯು ವಿದ್ಯಾರ್ಥಿನಿಯ ಫಲಿತಾಂಶ ತಪ್ಪಾಗಿ ಪ್ರಕಟವಾಗಿರುವುದು ಬೆಳಕಿಗೆ ಬಂದಿದೆ.

ತಾಲ್ಲೂಕಿನ ಬಾಲಮ್ಮನಹಳ್ಳಿ ತಾಂಡದ ವೀಣಾಬಾಯಿ ಎಂಬುವವರು ಪಿಯು ಪರೀಕ್ಷೆ ಬರೆದಿದ್ದರು. ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ವಿಶ್ವಾಸ ಹೊಂದಿದ್ದರು. ಆದರೆ 5 ವಿಷಯಗಳ ಅಂಕಗಳು 90ಕ್ಕೂ ಹೆಚ್ಚು ಬಂದಿವೆ, ಆದರೆ ಕನ್ನಡ ವಿಷಯದಲ್ಲಿ ಕೇವಲ 10 ಅಂಕ ಬಂದಿರುವುದಾಗಿ ಫಲಿತಾಂಶದಲ್ಲಿ ಪ್ರಕಟವಾಗಿತ್ತು. ಇದರಿಂದ ವಿದ್ಯಾರ್ಥಿನಿ ಆತಂಕಗೊಂಡಿದ್ದರು.

ಉಪನ್ಯಾಸಕರ ಸಲಹೆಯಂತೆ ಫೋಟೊ ಪ್ರತಿ ತರಿಸಿಕೊಂಡಾಗ, ಉತ್ತರ ಪತ್ರಿಕೆಯಲ್ಲಿ ಮೌಲ್ಯಮಾಪಕ 79 ಅಂಕಗಳನ್ನು ನೀಡಿ ವಿದ್ಯಾರ್ಥಿನಿಯ ಉತ್ತರ ಪತ್ರಿಕೆಯ ಮುಖಪುಟದಲ್ಲಿ 10 ಅಂಕ ನಮೂದು ಮಾಡಿರುವುದು ಕಂಡುಬಂದಿದೆ.

ಇದೇ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿ ಆರ್.ರವಿ ಎಂಬುವವರ ಕನ್ನಡ ವಿಷಯದ ಉತ್ತರ ಪತ್ರಿಕೆಯಲ್ಲೂ ಇದೇ ರೀತಿ ಎಡವಟ್ಟಾಗಿದೆ. 15 ಅಂಕಗಳು ಕಡಿಮೆ ನಮೂದು ಮಾಡಲಾಗಿದೆ. ಈ ಇಬ್ಬರು ವಿದ್ಯಾರ್ಥಿಗಳು ಪಟ್ಟಣದ ಸ್ವಾಮಿ ವಿವೇಕಾನಂದ ಪಿಯು ಕಾಲೇಜಿನ ವಿದ್ಯಾರ್ಥಿಗಳು.

ಒಂದು ಪೋಟೊ ಕಾಫಿ ತರಿಸಲು ₹ 530 ಕಟ್ಟಬೇಕು. ಬಡ ವಿದ್ಯಾರ್ಥಿಗಳು ಪರೀಕ್ಷೆ ಶುಲ್ಕ ಪಾವತಿಸುವುದೇ ಕಷ್ಟ. ಅಂತಹ ಸ್ಥಿತಿಯಲ್ಲಿ ಪರೀಕ್ಷಾ ಮಂಡಳಿಯವರು ಮಾಡುವ ತಪ್ಪಿಗೆ ವಿದ್ಯಾರ್ಥಿಗಳು ಹಣ ವ್ಯಯಿಸಬೇಕಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Post Comments (+)