ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಎರಡು ವರ್ಷದಲ್ಲಿ ರೈಲ್ವೆ ಕಾಮಗಾರಿ ಪೂರ್ಣ

ಕೇಂದ್ರ ಸಚಿವ ವಿ.ಸೋಮಣ್ಣ ಭರವಸೆ
Published 17 ಜೂನ್ 2024, 3:01 IST
Last Updated 17 ಜೂನ್ 2024, 3:01 IST
ಅಕ್ಷರ ಗಾತ್ರ

ತುಮಕೂರು: ಮುಂದಿನ ಎರಡು ವರ್ಷದಲ್ಲಿ ತುಮಕೂರು–ರಾಯದುರ್ಗ ರೈಲ್ವೆ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಕೇಂದ್ರದ ಜಲಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.

ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ, ಜೆಡಿಎಸ್‌ ಕಾರ್ಯಕರ್ತರು ಮತ್ತು ಮತದಾರರ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದರು.

ಜಿಲ್ಲೆಯ ಎಲ್ಲ ರೈಲ್ವೆ ಕಾಮಗಾರಿ ಪೂರ್ಣಗೊಳಿಸಲು ಶ್ರಮಿಸಲಾಗುವುದು. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಶೇ 10ರಷ್ಟು ಆದರೂ ಕೆಲಸ ಮಾಡಿದರೆ ನಮ್ಮ ರಾಜ್ಯ ರಾಮ ರಾಜ್ಯವಾಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಒಂದೇ ನಾಣ್ಯದ ಎರಡು ಮುಖಗಳಂತೆ ಒಂದಾಗಿ ಕೆಲಸ ಮಾಡಬೇಕು. ಮುಂದಿನ ಐದು ವರ್ಷಗಳ ಕಾಲ ಸಣ್ಣ ಅಪಚಾರವೂ ಆಗದಂತೆ ಕೆಲಸ ಮಾಡುತ್ತೇನೆ ಎಂದರು.

‘ನನ್ನ ಚರ್ಮ ಸುಲಿದು ಚಪ್ಪಲಿ ಮಾಡಿಕೊಟ್ಟರೂ ತುಮಕೂರಿನ ಜನತೆಯ ಋಣ ತೀರಿಸಲು ಆಗುವುದಿಲ್ಲ. ನೀರಾವರಿ ಯೋಜನೆ, ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌ ಕಾಮಗಾರಿ ಕುರಿತು ಜಿಲ್ಲೆಯ ಇಬ್ಬರು ಸಚಿವರ ಹತ್ತಿರ ಈಗಾಗಲೇ ಮಾತನಾಡಿದ್ದೇನೆ. ನಮ್ಮ ರಾಷ್ಟ್ರ ಕಾನೂನಿನ ಹಿಡಿತದಲ್ಲಿದೆ. ಕಾನೂನು ಮೀರಿ ಯಾರೂ ಕೆಲಸ ಮಾಡುವಂತಿಲ್ಲ. ಯಾರೋ ಒಬ್ಬರಿಗಾಗಿ ಕೆಲಸ ಮಾಡುವುದು ಸರಿಯಲ್ಲ. ಮುಂದಿನ ಎರಡು ವರ್ಷಗಳ ಕಾಲ ಎಲ್ಲರು ಸಹಕಾರ ನೀಡಿದರೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಮಧುಗಿರಿ ತಾಲ್ಲೂಕಿನ ಚಿನ್ನೇನಹಳ್ಳಿಯಲ್ಲಿ ಕಲುಷಿತ ನೀರು ಸೇವಿಸಿ 6 ಜನ ಮೃತಪಟ್ಟ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು ಕೊಡಲು ಸಾಧ್ಯವಾಗುತ್ತಿಲ್ಲ. ಚಿನ್ನೇನಹಳ್ಳಿ ಘಟನೆ ಮಾನಸಿಕ ಆಘಾತ ನೀಡಿದೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದರು.

ಶಾಸಕ ಬಿ.ಸುರೇಶ್‍ಗೌಡ, ‘ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಿ ಜನರಿಗೆ ನೀರು ಕೊಡಬೇಕು. ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌ ಕಾಮಗಾರಿ ಸ್ಥಗಿತಗೊಳಿಸಬೇಕು. ನೂತನ ಸಂಸದರು ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದಿಂದ ₹5 ಸಾವಿರ ಕೋಟಿ ಅನುದಾನ ಕೊಡಿಸಬೇಕು. ಜಿಲ್ಲೆಯಲ್ಲಿ ಕೈಗಾರಿಕಾ ಕ್ಷೇತ್ರ ಅಭಿವೃದ್ಧಿ ಪಡಿಸಿ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕು’ ಎಂದು ಮನವಿ ಮಾಡಿದರು.

ಮಾಜಿ ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಸಿ.ಬಿ.ಸುರೇಶ್‍ಬಾಬು, ಎಂ.ಟಿ.ಕೃಷ್ಣಪ್ಪ, ಜಿ.ಬಿ.ಜ್ಯೋತಿಗಣೇಶ್, ವಿಧಾನ ಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ಚಿದಾನಂದ ಎಂ.ಗೌಡ, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕರಾದ ಎಂ.ವಿ.ವೀರಭದ್ರಯ್ಯ, ಪಿ.ಆರ್‌.ಸುಧಾಕರ್‌ಲಾಲ್‌, ಮಸಾಲೆ ಜಯರಾಂ, ಎಚ್.ನಿಂಗಪ್ಪ, ನೆ.ಲ.ನರೇಂದ್ರಬಾಬು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್‌.ರವಿಶಂಕರ್‌, ಮಧುಗಿರಿ ಅಧ್ಯಕ್ಷ ಹನುಮಂತೇಗೌಡ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಕಾರ್ಯಾಧ್ಯಕ್ಷ ಟಿ.ಆರ್.ನಗರಾಜು, ಮುಖಂಡರಾದ ಎಲ್.ಸಿ.ನಾಗರಾಜು, ಬಿ.ಎಚ್‌.ಅನಿಲ್‍ಕುಮಾರ್, ಎಸ್‌.ಡಿ.ದಿಲೀಪ್‍ಕುಮಾರ್‌, ವೈ.ಎಚ್.ಹುಚ್ಚಯ್ಯ, ಆರ್‌.ಅಂಬಿಕಾ ಮೊದಲಾದವರು ಪಾಲ್ಗೊಂಡಿದ್ದರು.

ತುಮಕೂರಿನಲ್ಲಿ ಭಾನುವಾರ ಬಿಜೆಪಿ ಜೆಡಿಎಸ್‌ ಕಾರ್ಯಕರ್ತರಿಂದ ಬೈಕ್‌ ರ್‍ಯಾಲಿ ನಡೆಯಿತು
ತುಮಕೂರಿನಲ್ಲಿ ಭಾನುವಾರ ಬಿಜೆಪಿ ಜೆಡಿಎಸ್‌ ಕಾರ್ಯಕರ್ತರಿಂದ ಬೈಕ್‌ ರ್‍ಯಾಲಿ ನಡೆಯಿತು
ತುಮಕೂರಿನಲ್ಲಿ ಭಾನುವಾರ ಕೇಂದ್ರ ಸಚಿವ ವಿ.ಸೋಮಣ್ಣ ಬೈಕ್‌ ರ್‍ಯಾಲಿ ನಡೆಸಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾಜಿ ಶಾಸಕ ಪಿ.ಆರ್‌.ಸುಧಾಕರ್‌ಲಾಲ್‌ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಆಂಜನಪ್ಪ ಮುಖಂಡ ಬಿ.ಎಚ್‌.ಅನಿಲ್‍ಕುಮಾರ್‌ ಇತರರು ಭಾಗವಹಿಸಿದ್ದರು
ತುಮಕೂರಿನಲ್ಲಿ ಭಾನುವಾರ ಕೇಂದ್ರ ಸಚಿವ ವಿ.ಸೋಮಣ್ಣ ಬೈಕ್‌ ರ್‍ಯಾಲಿ ನಡೆಸಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾಜಿ ಶಾಸಕ ಪಿ.ಆರ್‌.ಸುಧಾಕರ್‌ಲಾಲ್‌ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಆಂಜನಪ್ಪ ಮುಖಂಡ ಬಿ.ಎಚ್‌.ಅನಿಲ್‍ಕುಮಾರ್‌ ಇತರರು ಭಾಗವಹಿಸಿದ್ದರು

ಸೋಮಣ್ಣಗೆ ಅದ್ದೂರಿ ಸ್ವಾಗತ ಕೇಂದ್ರ ಸಚಿವ ವಿ.ಸೋಮಣ್ಣ ಅವರನ್ನು ಜೆಡಿಎಸ್‌ ಬಿಜೆಪಿ ಕಾರ್ಯಕರ್ತರು ಅದ್ದೂರಿಯಾಗಿ ಬರಮಾಡಿಕೊಂಡರು. ನಗರದ ಎಸ್‌ಐಟಿ ಕಾಲೇಜಿನ ಮುಂಭಾಗದಿಂದ ವೇದಿಕೆ ಕಾರ್ಯಕ್ರಮ ನಡೆದ ಬಾವಿಕಟ್ಟೆ ಕಲ್ಯಾಣ ಮಂಟಪದ ವರೆಗೆ ಬೃಹತ್‌ ಬೈಕ್‌ ರ್‍ಯಾಲಿ ನಡೆಯಿತು. ನೂರಾರು ಜನ ಕಾರ್ಯಕರ್ತರು ರ್‍ಯಾಲಿಯಲ್ಲಿ ಭಾಗವಹಿಸಿದ್ದರು. ಜೆಡಿಎಸ್‌ ಬಿಜೆಪಿ ಬಾವುಟ ಹಿಡಿದು ಸಾಗಿದರು. ಸೋಮಣ್ಣ ತೆರೆದ ವಾಹನದಲ್ಲಿ ನಿಂತು ಜನರತ್ತ ಕೈ ಬೀಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT