ಮಂಗಳವಾರ, ಸೆಪ್ಟೆಂಬರ್ 21, 2021
28 °C

ಕುಣಿಗಲ್, ತಿಪಟೂರು ಭಾಗದಲ್ಲಿ ಮಳೆ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜಿಲ್ಲೆಯ ಕೆಲವೆಡೆ ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದರೆ, ಕುಣಿಗಲ್ ತಾಲ್ಲೂಕು ಬರದ ದವಡೆಗೆ ಸಿಲುಕಿದೆ. ತಿಪಟೂರು, ತುರುವೇಕೆರೆ, ಶಿರಾ ತಾಲ್ಲೂಕುಗಳಲ್ಲೂ ಅದೇ ವಾತಾವರಣ ನಿರ್ಮಾಣವಾಗಿದೆ. ಜೂನ್ ತಿಂಗಳಲ್ಲೂ ಈ ಪ್ರದೇಶಗಳು ಇದೇ ಪರಿಸ್ಥಿತಿ ಎದುರಿಸಿದ್ದವು.

ಜುಲೈನಲ್ಲಿ ಕುಣಿಗಲ್ ತಾಲ್ಲೂಕಿನಲ್ಲಿ 93 ಮಿ.ಮೀ ವಾಡಿಕೆ ಮಳೆಯಾಗಬೇಕಿದ್ದು, ಕೇವಲ 69 ಮಿ.ಮೀ ಬಿದ್ದಿದೆ. ಕಳೆದ ವರ್ಷದ ಇದೇ ಸಮಯದಲ್ಲಿ 106 ಮಿ.ಮೀ ಆಗಿತ್ತು. ತಿಪಟೂರು ತಾಲ್ಲೂಕಿನಲ್ಲಿ 59 ಮಿ.ಮೀ ಬೀಳಬೇಕಿದ್ದು, 58 ಮಿ.ಮೀ ಸುರಿದಿದೆ. ತುರುವೇಕೆರೆ ತಾಲ್ಲೂಕಿನಲ್ಲಿ 66 ಮಿ.ಮೀ.ಗೆ 71 ಮಿ.ಮೀ, ಶಿರಾ 55 ಮಿ.ಮೀ.ಗೆ 57 ಮಿ.ಮೀ ಆಗಿದೆ. ಗುಬ್ಬಿ, ಚಿಕ್ಕನಾಯಕನಹಳ್ಳಿ, ಕೊರಟಗೆರೆ ಭಾಗದಲ್ಲಿ ಉತ್ತಮ ಮಳೆಯಾಗಿದೆ.

ಹಿಂದಿನ ವರ್ಷ: ಜನವರಿಯಿಂದ ಜುಲೈ ಅಂತ್ಯದವರೆಗೆ (ಆವರಣದಲ್ಲಿ ಹಿಂದಿನ ವರ್ಷದ ವಿವರ) ಕುಣಿಗಲ್ ತಾಲ್ಲೂಕಿನಲ್ಲಿ ಸರಾಸರಿ 349 ಮಿ.ಮೀ ಮಳೆ ಬೀಳಬೇಕಿದ್ದು, ಕೇವಲ 254 (346) ಮಿ.ಮೀ ಮಳೆಯಾಗಿದ್ದು, 95 ಮಿ.ಮೀ ಕೊರತೆಯಾಗಿದೆ. ತಿಪಟೂರು 275 ಮಿ.ಮೀ ಬದಲಿಗೆ 215 (398) ಮಿ.ಮೀ, ತುರುವೇಕೆರೆ 288 ಮಿ.ಮೀ.ಗೆ 240 (324) ಮಿ.ಮೀ, ಶಿರಾ 221 ಮಿ.ಮೀ.ಗೆ 211 ಮಿ.ಮೀ, ಮಧುಗಿರಿ 254 ಮಿ.ಮೀ.ಗೆ 258 (293) ಮಿ.ಮೀ, ತುಮಕೂರು ತಾಲ್ಲೂಕಿನಲ್ಲಿ 359 ಮಿ.ಮೀ ಬದಲಿಗೆ 379 (482) ಮಿ.ಮೀ ಮಳೆ ಬಿದ್ದಿದೆ.

ತೆಂಗಿಗೆ ಹಾನಿ: ಕುಣಿಗಲ್, ತುರುವೇಕೆರೆ, ತಿಪಟೂರು ಭಾಗದಲ್ಲಿ ಮಳೆ ಆಶ್ರಯದಲ್ಲಿ ಬೆಳೆಸಿರುವ ತೆಂಗು ಒಣಗುತ್ತಿದೆ. ಕಳೆದ ಕೆಲ ವರ್ಷಗಳಿಂದ ಸರಿಯಾಗಿ ಮಳೆಯಾಗದೆ
ಸಾವಿರಾರು ಹೆಕ್ಟೇರ್ ಪ್ರದೇಶಗಳಲ್ಲಿ ಬೆಳೆಸಿದ್ದ ತೆಂಗು ಹಾಳಾಗಿದೆ. ಕೊಳವೆ ಬಾವಿ ಆಶ್ರಯದಲ್ಲಿ ಬೆಳೆಸಿರುವ ತೋಟಗಳಿಗೆ ಹೆಚ್ಚಿನ ಹಾನಿಯಾಗಿಲ್ಲ. ಮಳೆ ಇಲ್ಲದೆ ಅಂತರ್ಜಲವೂ ಬರಿದಾಗುತ್ತಿದ್ದು, ಸಾವಿರ ಅಡಿಗಳ ವರೆಗೆ ಕೊರೆಸಿದರೂ ನೀರು ಬಾರದಾಗಿದೆ. ದಿನದಿಂದ ದಿನಕ್ಕೆ ಕೊಳವೆ ಬಾವಿಗಳು ಬತ್ತಿ ಹೋಗುತ್ತಿದ್ದು, ತೋಟಕ್ಕೆ ನೀರು ಹರಿಸುವುದು ಕಷ್ಟಕರವಾಗಿದೆ. ಮಳೆಯನ್ನೇ ನಂಬಿದ್ದ ತೋಟಗಳು ಒಣಗುತ್ತಿದ್ದು, ಹಲವೆಡೆ ಒಣಗಿ ನಿಂತಿದ್ದ ಮರಗಳನ್ನು ಕತ್ತರಿಸಲಾಗಿದೆ. ಈ ವರ್ಷವೂ ಅದೇ ಪರಿಸ್ಥಿತಿ ಮುಂದುವರಿದಿದ್ದು, ರೈತರು ಮತ್ತಷ್ಟು ಆತಂಕಗೊಂಡಿದ್ದಾರೆ.

ಮಳೆ ಕೊರತೆಯಿಂದಾಗಿ ಶೇಂಗಾ ಬಿತ್ತನೆ ಪ್ರಮಾಣ ಕಡಿಮೆಯಾಗಿದ್ದು, ರಾಗಿ ಬಿತ್ತನೆಯೂ ಕುಂಟುತ್ತಾ ಸಾಗಿದೆ. ಜುಲೈ ತಿಂಗಳ ಕೊನೆಗೆ, ಆಗಸ್ಟ್ ಮೊದಲ ವಾರದಲ್ಲಿ ಜಿಲ್ಲೆಯ ಐದಾರು ತಾಲ್ಲೂಕುಗಳಲ್ಲಿ ಪ್ರಮುಖವಾಗಿ ರಾಗಿ ಬಿತ್ತನೆ ಮಾಡಲಾಗುತ್ತದೆ. ಜುಲೈ ಮೂರನೇ ವಾರದಲ್ಲಿ ಸೋನೆಯಂತೆ ಹನಿಗಳು ಉದುರಿದ್ದು ಬಿಟ್ಟರೆ ಬಿರುಸು ಕಾಣಲಿಲ್ಲ. ಆಗಸ್ಟ್ ಮೊದಲ ವಾರ ಒಣಹವೆ ಕಂಡುಬರುತ್ತಿದೆ. ಒಂದೆರಡು ಕಡೆಗಳಲ್ಲಿ ಮಳೆಯಾಗಿದ್ದು, ಬಿಟ್ಟರೆ ರಾಗಿ ಬಿತ್ತನೆ ಸಮಯದಲ್ಲಿ ಕೊರತೆ ಕಾಡುತ್ತಿದೆ.

ಇದೇ ಪರಿಸ್ಥಿತಿ ಮುಂದುವರಿದರೆ ಶೇಂಗಾ, ಇತರ ದ್ವಿದಳ ಧಾನ್ಯ, ಎಣ್ಣೆ ಕಾಳುಗಳ ಬಿತ್ತನೆ ಪ್ರಮಾಣ ಕುಂಟಿತಗೊಂಡಂತೆ ರಾಗಿ ಬಿತ್ತನೆಗೂ ಹಿನ್ನಡೆಯಾಗಲಿದೆ. ಈ ತಿಂಗಳ ಮಧ್ಯ ಭಾಗದವರೆಗೂ ಕಡಿಮೆ ಅವಧಿಯಲ್ಲಿ ಬೆಳೆಯುವ ರಾಗಿ ಬಿತ್ತನೆಗೆ ಸಮಯಾವಕಾಶ ಇದೆ. ಅಲ್ಪ ಅವಧಿಯ ರಾಗಿ ಬಿತ್ತನೆ ಮಾಡಿದರೆ ರಾಗಿ ಹುಲ್ಲು ಸಮೃದ್ಧವಾಗಿ ಬರುವುದಿಲ್ಲ.
ಇದರಿಂದ ಮುಂದಿನ ದಿನಗಳಲ್ಲಿ ರಾಸುಗಳಿಗೆ ಮೇವಿನ ಕೊರತೆಯಾಗಲಿದೆ. ಆಗಸ್ಟ್ 15ರ ವರೆಗೆ ಮಳೆ ಬೀಳದಿದ್ದರೆ ರಾಗಿ ಬಿತ್ತನೆ ಮಾಡುವುದು ಕಷ್ಟಕರ ಎಂದು ರೈತರು ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.