ಗುರುವಾರ , ಸೆಪ್ಟೆಂಬರ್ 23, 2021
25 °C

ಅತ್ಯಾಚಾರ ಪ್ರಕರಣ: ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಾ: ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಬಾಲಕನಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಹಿಂದೂ ಜಾಗರಣಾ ವೇದಿಕೆ ಹಾಗೂ ವಿವಿಧ ಸಂಘಟನೆಗಳ ಮುಖಂಡರು ನಗರದ ಪೊಲೀಸ್ ಠಾಣೆ ಮುಂದೆ ಗುರುವಾರ ಧರಣಿ ನಡೆಸಿದರು.

ಬಿಜೆಪಿ ಮಹಿಳಾ ಮೋರ್ಚಾ, ಹಿಂದೂ ಜಾಗರಣಾ ವೇದಿಕೆ, ಅಖಿಲ ಭಾರತ ವೀರಶೈವ ಮಹಾವೇದಿಕೆ, ಕಟ್ಟೆ ಬಸವೇಶ್ವರ ವೇದಿಕೆ ಮುಖಂಡರು ಪ್ರತಿಭಟಿಸಿದರು.

ಘಟನೆ ವಿವರ: ಒಂಬತ್ತು ವರ್ಷದ ಬಾಲಕಿಯನ್ನು ಅನ್ಯ ಕೋಮಿಗೆ ಸೇರಿದ ಬಾಲಕ ಬುಧವಾರ ಮನೆಯ ಸಮೀಪದ ಸ್ಮಶಾನಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿ, ಅತ್ಯಾಚಾರಕ್ಕೆ ಪ್ರಯತ್ನ ನಡೆಸಿದ್ದಾನೆ. ಇದನ್ನು ಗಮನಿಸಿದ ಕೆಲವರು ಗಲಾಟೆ ಮಾಡಿದಾಗ ಬಾಲಕ‌ ಪರಾರಿಯಾಗಿದ್ದಾನೆ. ಮನೆಯವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿದ ನಗರ ಠಾಣೆ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಈ ಪ್ರಕರಣ ಬೆಳಕಿಗೆ ಬರುತ್ತಿದ್ದರೆ ವಿವಿಧ ಸಂಘಟನೆಗಳ ಮುಖಂಡರು ಪೊಲೀಸ್ ಠಾಣೆ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು.

ರೇಷ್ಮೆ ಉದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ ಮಾತನಾಡಿ ‘ನಗರದಲ್ಲಿ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಗಾಂಜಾ, ಅಫೀಮು ಸೇರಿದಂತೆ ಮಾದಕ ವಸ್ತುಗಳ ಮಾರಾಟ, ಬಳಕೆ ಹೆಚ್ಚಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು ತಡೆಯುತ್ತಿಲ್ಲ. ಶಿರಾದಲ್ಲಿ ಒಂದು ಧರ್ಮದವರು ರಾತ್ರಿ ಪೂರ್ತಿ ಓಡಾಡುತ್ತಿರುತ್ತಾರೆ. ರಾತ್ರಿ 2 ಗಂಟೆಯಾದರೂ ಸಹ ಅಂಗಡಿ ಮುಚ್ಚುವುದಿಲ್ಲ. ಪೊಲೀಸರು ಏಕೆ ಮೌನವಾಗಿದ್ದಾರೆ ಎನ್ನುವುದು ತಿಳಿಯುವುದಿಲ್ಲ. ಇದರಿಂದ ಮುಂದೆ ದೊಡ್ಡ ಅನಾಹುತ ಸಂಭವಿಸಿದರೆ ಪೊಲೀಸ್ ಇಲಾಖೆ‌ ಹೊಣೆಯಾಗಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಅತ್ಯಾಚಾರಕ್ಕೆ ಪ್ರಯತ್ನಿಸಿದ ಆರೋಪಿಗೆ ಶಿಕ್ಷೆಯಾಗಬೇಕು. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಬಿಜೆಪಿ ನಗರ ಮೋರ್ಚಾ ಅಧ್ಯಕ್ಷ ವಿಜಯರಾಜು, ಮುಖಂಡರಾದ ಬಸವರಾಜು, ನಟರಾಜು, ಹಿಂದೂ ಜಾಗರಣಾ ವೇದಿಕೆಯ ಮಂಜುನಾಥ್, ಸುರೇಶ್, ಲಲಿತಮ್ಮ, ಪದ್ಮ ಮಂಜುನಾಥ್, ನಾಗರತ್ನಮ್ಮ, ಸ್ವಪ್ನ, ಶಿವಮ್ಮ, ವಿಜಯಲಕ್ಷ್ಮಿ, ವಿಜಯ ಸುರೇಶ್, ಹೇಮಲತಾ ಇದ್ದರು.

ಬಿಗಿ ಭದ್ರತೆ: ಘಟನೆ ನಂತರ ನಗರದಲ್ಲಿ ಬಿಗಿ ಬಂದೋಬಸ್ತು ಮಾಡಲಾಗಿದೆ. ಸ್ಥಳದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪೂರವಾಡ್, ಎಎಸ್‌ಪಿ ಉದೇಶ್, ಡಿವೈಎಸ್‌ಪಿ ಕೆ.ಜಿ.ರಾಮಕೃಷ್ಣ, ಕುಮಾರಪ್ಪ, ಸಿಪಿಐ ಹನುಮಂತಪ್ಪ ಹಾಜರಿದ್ದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಕುಮಾರ್, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ. ಪ್ರತಿಭಟನಾನಿರತರ ಅಹವಾಲು ಕೇಳಲಾಗಿದ್ದು, ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುವುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು