ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಲಂಗಳಲ್ಲಿ ದ್ವೇಷ ಬಿತ್ತುವ ಆರ್‌ಎಸ್‌ಎಸ್‌

ಸ್ಲಂ ಜನರ ಪ್ರಣಾಳಿಕೆ ಬಿಡುಗಡೆ; ಕುಸಿದ ಬಡ ಜನರ ಆದಾಯ
Published 3 ಏಪ್ರಿಲ್ 2024, 3:27 IST
Last Updated 3 ಏಪ್ರಿಲ್ 2024, 3:27 IST
ಅಕ್ಷರ ಗಾತ್ರ

ತುಮಕೂರು: ಕೊಳೆಗೇರಿಗಳಿಗೆ ಬಿಜೆಪಿ, ಆರ್‌ಎಸ್‍ಎಸ್ ನುಸುಳಿ ದ್ವೇಷ ಬಿತ್ತುತ್ತಿದೆ. ಹಣ ಬಲದಿಂದ ಸಣ್ಣಪುಟ್ಟ ಮುಖಂಡರನ್ನು ತನ್ನತ್ತ ಸೆಳೆದು ನಮ್ಮ ಕಣ್ಣನ್ನು ನಾವೇ ಚುಚ್ಚಿಕೊಳ್ಳುವಂತೆ ಮಾಡುತ್ತಿವೆ ಎಂದು ಚಿಂತಕ ಕೆ.ದೊರೈರಾಜ್‌ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹೊರ ತಂದಿರುವ ಸ್ಲಂ ಜನರ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಬಡವರ ಆದಾಯ ಕಡಿಮೆಯಾಗಿದೆ. ಆದರೆ ಹೆಚ್ಚು ಖರ್ಚು ಮಾಡುವ ಶಕ್ತಿ ಬಂದಿದೆ ಎಂಬ ‘ವಿಶ್ವಗುರು’ ನರೇಂದ್ರ ಮೋದಿ ಅವರ ವಿಕಸಿತ ಗಣಿತ ಬಡವರ ವಿರೋಧಿಯಾಗಿದೆ. ಚುನಾವಣೆಯಲ್ಲಿ ನಮ್ಮ ಉಳಿವಿಗಾಗಿ ನಮ್ಮ ಸುತ್ತಲಿನ ಜನರನ್ನು ಜಾಗೃತಿಗೊಳಿಸಬೇಕು. ಬಿಜೆಪಿಗೆ ಮತ ಹಾಕುವುದು ತಪ್ಪಿಸಬೇಕು. ಬಿಜೆಪಿ ಸೋತರೆ ಮಾತ್ರ ಸಂವಿಧಾನ ರಕ್ಷಣೆಯಾಗುತ್ತದೆ ಎಂದು ಎಚ್ಚರಿಸಿದರು.

ಹೋರಾಟಗಾರ ಅಂಬಣ್ಣ ಅರೋಲಿಕರ್‌, ‘ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿ ಅವರ ಆರ್‌ಎಸ್‍ಎಸ್ ಆಡಳಿತವು ಸಂವಿಧಾನವನ್ನು ನಿರ್ಜೀವಗೊಳಿಸಿದೆ. ಮೋದಿ ಆಡಳಿತ ಸಾಕಾಗಿದೆ. ಮುಂದಿನ ಅಪಾಯ ತಪ್ಪಿಸಲು ಈ ಚುನಾವಣೆಯಲ್ಲಿ ಬಿಜೆಪಿ ವಿರೋಧಿಸಬೇಕು‍’’ ಎಂದು ಹೇಳಿದರು.

ವಸತಿ ಹಕ್ಕು ಕಾಯ್ದೆ, ರಾಷ್ಟ್ರೀಯ ನಗರ ಉದ್ಯೋಗ ಖಾತ್ರಿ ಯೋಜನೆ ಜಾರಿ ಸ್ಲಮ್‌ ಜನರ ಪ್ರಣಾಳಿಕೆಯಲ್ಲಿವೆ. ಆಶ್ರಯ, ಆರೋಗ್ಯ, ಆಹಾರ, ಶಿಕ್ಷಣ ಮತ್ತು ಉದ್ಯೋಗ ಖಾತ್ರಿಗಾಗಿ ಮತ ಚಲಾಯಿಸುವ ಮೂಲಕ ಸನಾತನ ವಾದಿಗಳಿಗೆ ಉತ್ತರ ನೀಡಬೇಕು ಎಂದು ಕರೆ ನೀಡಿದರು.

ಸ್ಲಂ ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ, ‘ಪ್ರಧಾನಿ ಮೋದಿ ಸರ್ಕಾರದಲ್ಲಿ ಸ್ಲಂ ನಿವಾಸಿಗಳಿಗೆ ಸಿಕ್ಕಿದ್ದು ಶೂನ್ಯ. ವಸತಿ ಸಬ್ಸಿಡಿ ಮೊತ್ತವನ್ನು ₹1.50 ಲಕ್ಷಕ್ಕೆ ಇಳಿಸಲಾಗಿದೆ. ಇದರಲ್ಲಿ ಜಿಎಸ್‌ಟಿ ಕಡಿತ ಮಾಡಿಕೊಳ್ಳುತ್ತಿದ್ದು, ಜನರಿಗೆ ಯಾವುದೇ ಉಪಯೋಗ ಇಲ್ಲವಾಗಿದೆ ಎಂದರು.

ರಾಜ್ಯದ 16 ಲೋಕಸಭಾ ಕ್ಷೇತ್ರಗಳಲ್ಲಿ ಸ್ಲಂ ಜನರ ಮತ ಜಾಗೃತಿ ಜಾಥಾ ನಡೆಯಲಿದೆ. 1,500 ಕೊಳೆಗೇರಿಗಳಲ್ಲಿ 2 ಲಕ್ಷ ಜನರನ್ನು ತಲುಪುವ ಗುರಿ ಹೊಂದಿದೆ ಎಂದು ತಿಳಿಸಿದರು.

ವೈದ್ಯ ಬಸವರಾಜು, ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್‌ ಮುಜೀಬ್‌, ಮುಖಂಡರಾದ ನರಸೀಯಪ್ಪ, ಬಸವರಾಜ್ ಕೌತಾಳ್, ಅರುಂಧತಿ, ದೀಪಿಕಾ, ಕೊಟ್ಟಶಂಕರ್, ಪಿ.ಎನ್‌.ರಾಮಯ್ಯ, ಅರುಣ್, ಟಿ.ಸಿ.ರಾಮಯ್ಯ, ಕೃಷ್ಣಮೂರ್ತಿ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT