ಅನ್ನ ಮತ್ತು ಅಕ್ಷರ ದಾಸೋಹಗಳ ಮಹಾಯೋಗಿ

7

ಅನ್ನ ಮತ್ತು ಅಕ್ಷರ ದಾಸೋಹಗಳ ಮಹಾಯೋಗಿ

Published:
Updated:

ನಲ್ವತ್ತೈದು ವರ್ಷಗಳ ಹಿಂದೆ. ಆಗ ‘ಕನ್ನಡಪಂಡಿತ್’ ಮಾಡಬೇಕೆಂಬ ಅಪೇಕ್ಷೆ ನನ್ನದಾಗಿತ್ತು. ಆಗ ‘ಕನ್ನಡ ಪಂಡಿತ್’ ಪದವಿ ಶಾಲೆಗಳು ಸಿದ್ಧಗಂಗಾಮಠ ಮತ್ತು ಮೈಸೂರಿನಲ್ಲಿ ಮಾತ್ರ ಇದ್ದವು. ನಾನು ಮೈಸೂರಿನಲ್ಲಿದ್ದು ಓದುವುದು ಕಷ್ಟಸಾಧ್ಯವೆಂದು ತಿಳಿದು ಸಿದ್ಧಗಂಗಾಮಠಕ್ಕೆ ಹೋಗುವುದೆಂದು ನಿಶ್ಚಯಿಸಿದೆ. ಆಗ ಅಲ್ಲಿ ಕನ್ನಡಪಂಡಿತ್ ಮಾಡುತ್ತಿದ್ದ ಶಾಂತಕುಮಾರ್ ಎನ್ನುವವರ ಪರಿಚಯ ನನ್ನೊಬ್ಬ ಗೆಳೆಯರಿಂದ ಆಗಿತ್ತು. ಆ ನೆಪದಲ್ಲಿ ಒಂದೆರಡು ಬಾರಿ ಶ್ರೀಕ್ಷೇತ್ರಕ್ಕೂ ಹೋಗಿದ್ದೆ.

ವಿಶಾಲವಾದ ಆವರಣ, ದೊಡ್ಡಬೆಟ್ಟದ ಬುಡದಲ್ಲಿ ಸಂಸ್ಕೃತ ಕಾಲೇಜು, ಅಕ್ಕ ಪಕ್ಕ ಹಿರಿಯಸ್ವಾಮಿಗಳ ಗದ್ದುಗೆಗಳು, ಬೆಳೆದು ನಿಂತಿದ್ದ ಅರಳಿಮರ, ಮಠದ ಸುತ್ತ ರಾಗಿಹೊಲಗಳು. ಪೂರ್ವದಿಕ್ಕಿಗೆ ಒಂದು ದೊಡ್ಡ ಆಲದಮರ ಇತ್ತು. ಸರಳತೆಯೇ ಭವ್ಯತೆಯ ಸಂಗಮವಾಗಿ ಮೈದಾಳಿತ್ತು. ಇದು ನನ್ನನ್ನು ತುಂಬಾ ಆಕರ್ಷಿಸಿತು. ಪ್ರತಿ ವಿದ್ಯಾರ್ಥಿಯೂ ಕಾವಿವಸ್ತ್ರ ಹೊದ್ದು ಅಲ್ಲಲ್ಲಿ ಓಡಾಡುತ್ತಿದ್ದರು. ಪ್ರತಿಯೊಬ್ಬರ ಹಣೆಯಲ್ಲೂ ವಿಭೂತಿ ವಿರಾಜಿಸುತ್ತಿತ್ತು. ಏಳು ವರ್ಷದ ಹುಡುಗರಿಂದ ಹಿಡಿದು, ಇಪ್ಪತ್ತನಾಲ್ಕು ವರ್ಷದ ವರೆಗಿನವರೆಲ್ಲರೂ ಪಂಚೆಯುಟ್ಟು ಓಡಾಡುತ್ತಿದ್ದುದೇ ಒಂದು ಸೊಗಸಾಗಿ ಕಾಣುತ್ತಿತ್ತು. ಮಠದ ಆವರಣದಲ್ಲೂ ಹೊರಗೂ ವಿದ್ಯಾರ್ಥಿಗಳು ಪುಸ್ತಕ ಹಿಡಿದೇ ಓಡಾಡುತ್ತಿದ್ದರು.

ಇದು 1970ರಲ್ಲಿ ನನಗೆ ಕಂಡ ದೃಶ್ಯ. ಈ ದೃಶ್ಯವು ನನ್ನ ಮನಸ್ಸಿನಿಂದ ಈವರೆಗೂ ಮರೆಯಾಗಿಲ್ಲ. ಶ್ರೀಸಿದ್ಧಗಂಗಾಮಠಕ್ಕೆ 1971ರಲ್ಲಿ ಕನ್ನಡಪಂಡಿತ್‌ಗೆ ಸೇರಿಕೊಂಡೆ. ನಾನು ಸ್ವಾಮಿಗಳ ಬಳಿ ಹೋಗುವ ಮೊದಲು ಕನ್ನಡಪಂಡಿತ್ ತರಗತಿಗೆ ಪಾಠ ಮಾಡುತ್ತಿದ್ದ ಪಂಡಿತ್ ಡಿ. ಗಂಗರಾಜು ಅವರನ್ನು ಮೊದಲೇ ಕಂಡಿದ್ದೆ. ಅವರು ಸ್ವಾಮಿಗಳ ಬಳಿ ನನ್ನನ್ನು ಕರೆದುಕೊಂಡು ಹೋಗಿ, ಕನ್ನಡಪಂಡಿತ್ ತರಗತಿಗೆ ಪ್ರವೇಶಕೊಡಿಸುವ ಮಾತನಾಡಿದರು. ಆಗಲೇ ಸ್ವಾಮಿಗಳನ್ನು ನಾನು ಮೊದಲು ಕಂಡದ್ದು. ನನ್ನನ್ನು ನೋಡಿ ಒಂದು ಕ್ಷಣ ನಸು ನಕ್ಕು, ಗಂಗರಾಜು ಅವರ ಮುಖ ನೋಡಿ ‘ಆಗಲಿ’ ಎಂದರು. ನನಗೆ ಸ್ವರ್ಗವೇ ಸಿಕ್ಕಷ್ಟು ಸಂತೋಷ. ಆಕಾಶದಲ್ಲಿ ವಿಹಾರ ಮಾಡಿದ ಭಾವ ಮನಸ್ಸೆಲ್ಲಾ ತುಂಬಿತು. ಸ್ವಾಮಿಗಳಿಗೆ ನಮಸ್ಕಾರ ಮಾಡಿ ಹೊರಬಂದೆ.

ಸ್ವಾಮಿಗಳನ್ನು ನಾನು ಪ್ರತಿನಿತ್ಯ ನೋಡುತ್ತಿದ್ದೆ. ಅವರು ಬರುತ್ತಿದ್ದರೆ ಜಡವು ಜಂಗಮವಾಗಿ ಮಾರ್ಪಾಡು ಆಗುತ್ತಿತ್ತು. ಅವರು ದಾಪುಗಾಲು ಇಡುತ್ತ ಓಡಾಡುತ್ತಿದ್ದರೆ; ಹೆಳವನೂ ಓಡಾಡಬೇಕೆಂದೆನಿಸುತಿತ್ತು. ಚೈತನ್ಯದ ಮಂಗಳಮೂರ್ತಿಯೇ ನಮ್ಮ ಮುಂದೆ ಓಡಾಡುತ್ತಿದೆಯೆಂಬ ಭಾವ ಬಹುಕಾಲ ನನ್ನ ಮನಸ್ಸನ್ನು ಆವರಿಸಿತ್ತು. ಎರಡು ವರ್ಷ ಮಾತ್ರ ಮಠದಲ್ಲಿದ್ದೆ. ಅನಂತರ ಕ್ಯಾತ್ಸಂದ್ರದಲ್ಲಿ ಸಣ್ಣ ಕೊಠಡಿಯನ್ನು ಬಾಡಿಗೆಗೆ ಹಿಡಿದೆ! ಕನ್ನಡ ಪಂಡಿತ್ ಮುಗಿಸಿದ ಮೇಲೆ ಶ್ರೀಮಠದ ಸಂಪರ್ಕ ನನಗೆ ಕಡಿಮೆಯಾಯಿತು.

ನಾನು ಮಠದಲ್ಲಿ ಮೊದಲೆರಡು ವರ್ಷ ಇದ್ದೆನಷ್ಟೆ. ನಾನು ಮಠಕ್ಕೆ ಸೇರಿದ ಮೊದಲ ದಿನ ತಟ್ಟೆ ಹಿಡಿದುಕೊಂಡು ಊಟ ಕೊಡುತ್ತಿದ್ದ ವಿಶಾಲವಾದ ಸಭಾಂಗಣಕ್ಕೆ ಹೋದೆ. ವಿದ್ಯಾರ್ಥಿಗಳು ತಂಡೋಪತಂಡವಾಗಿ ಕೈಯಲ್ಲಿ ಊಟದ ತಟ್ಟೆ ಹಿಡಿದುಕೊಂಡು ಹೋಗುತ್ತಿದ್ದರು. ನನಗೆ ಇದು ತುಂಬಾ ಅಪರಿಚಿತವಾಗಿತ್ತು. ಊಟಕ್ಕೆ ಎಲ್ಲ ವಿದ್ಯಾರ್ಥಿಗಳು ಸಾಲುಸಾಲಾಗಿ ಕುಳಿತಿದ್ದರು. ಬಡಿಸುವುದಕ್ಕೆ ಮಠದ ಹಿರಿಯ ವಿದ್ಯಾರ್ಥಿಗಳು ರಾಗಿಮುದ್ದೆ ಹೊತ್ತು ತಂದರು. ಅವರ ಹಿಂದೆ ಸಾಂಬಾರನ್ನು ಬಕೆಟ್‌ನಲ್ಲಿ ಹಿಡಿದು ಬಂದರು. ಅವರು ತಟ್ಟೆಗೆ ಮುದ್ದೆಹಾಕಿ, ಎರಡೆರಡು ಸೌಟು ಸಾಂಬಾರನ್ನು ಹಾಕಿದರು. ನಾನು ಮೊಟ್ಟಮೊದಲ ಬಾರಿಗೆ ಮಠದ ಊಟಮಾಡಿದ್ದು ಆಗಲೇ.

ಶ್ರೀಕ್ಷೇತ್ರದಲ್ಲಿ ಪ್ರತಿನಿತ್ಯ ಕನಿಷ್ಠಪಕ್ಷ ಆರುನೂರು ಅಥವಾ ಎಂಟುನೂರು ಜನ ಊಟ ಮಾಡುತ್ತಿದ್ದರು. ಇದು ನಲವತ್ತೈದು ವರ್ಷಗಳ ಹಿಂದಿನ ಮಾತು! ಆಗ ಶ್ರೀಕ್ಷೇತ್ರ ಇನ್ನೂ ಪ್ರವರ್ಧಮಾನಕ್ಕೆ ಬರುತ್ತಿತ್ತು. ತುಮಕೂರು ಜಿಲ್ಲೆಯ ಗ್ರಾಮೀಣ ಭಾಗಗಳಿಂದ ಅನೇಕ ರೈತಜನ ತಾವು ಬೆಳೆದ ರಾಗಿ, ಅಕ್ಕಿ, ಕಾಳು, ತರಕಾರಿ ಮುಂತಾದವುಗಳನ್ನು ಸ್ವಇಚ್ಛೆಯಿಂದ ತಂದುಕೊಡುತ್ತಿದ್ದರು. ನಾನು ಮಠದ ಆವರಣದಲ್ಲಿ ತಿರುಗಾಡುತ್ತಿರುವಾಗ ರೈತರು, ಭಕ್ತರು ಬಂದು ಯಥಾಶಕ್ತಿ ತಮ್ಮ ಕಾಣಿಕೆ ಒಪ್ಪಿಸುತ್ತಿದ್ದುದನ್ನು ಕಾಣುತ್ತಿದ್ದೆ. ಶ್ರೀಕ್ಷೇತ್ರಕ್ಕೆ ಹಣ ಒದಗಿ ಬರುತ್ತಿದ್ದದ್ದು ಕಡಿಮೆಯೆಂದೇ ಹೇಳಬೇಕು. ಆದರೆ, ದವಸ-ಧಾನ್ಯ ಮಾತ್ರ ಹೆಚ್ಚಾಗಿ ಬರುತ್ತಿತ್ತು. ಹೀಗೆ ಬಂದ ದವಸ-ಧಾನ್ಯಾದಿಗಳನ್ನು ಒಂದೆಡೆ ಸಂರಕ್ಷಿಸುವ ಕೆಲಸ ಮತ್ತು ಬಂದ ದಾಸ್ತಾನನ್ನು ಲೆಡ್ಜರ್‌ನಲ್ಲಿ ಬರೆದುಕೊಂಡು ಚೀಟಿ ಕೊಡುವ ಪರಿಪಾಠವೂ ಇರುತ್ತಿತ್ತು. ಭಕ್ತಾದಿಗಳಿಂದ ಬಂದ ಪ್ರತಿ ವಸ್ತುವಿಗೂ ಮಠದ ಪಾರುಪತ್ಯೆಗಾರರು ಲೆಕ್ಕ ಇಡುತ್ತಿದ್ದರು. ರಾಗಿಯನ್ನು ಮಿಲ್ಲಿಗೆ ಹಾಕುವ ಮೊದಲು ಹತ್ತಾರು ಹೆಂಗಸರು ಅದನ್ನು ಕೇರಿ ಶುದ್ಧಿಗೊಳಿಸುತ್ತಿದ್ದರು. ಮಠದ ಆವರಣದಲ್ಲಿಯೇ ರಾಗಿಮಿಷನ್ ಇತ್ತು. ಅಲ್ಲಿ ಹಿಟ್ಟು ಮಾಡಿಕೊಡುತ್ತಿದ್ದರು.

ಪೂಜ್ಯ ಶ್ರೀಗಳು ಪ್ರತಿನಿತ್ಯ ಆರೇಳು ಸಲವಾದರೂ ಅಡುಗೆ ಮನೆಗೆ ಹೋಗಿ ತಪಶೀಲು ನಡೆಸುತ್ತಿದ್ದದ್ದುಂಟು. ಅಲ್ಲಿ ಮುದ್ದೆ ತೊಳೆಸುತ್ತಿದ್ದವರನ್ನು ಕಂಡು ಕಿರುನಗೆ ಬೀರಿದರೆ ಸಾಕು, ಅಡುಗೆ ಕೆಲಸ ಮಾಡುತ್ತಿದ್ದವರ ಉತ್ಸಾಹ ಹೆಚ್ಚಾಗುತ್ತಿತ್ತು. ರಾಗಿಮುದ್ದೆ ಮಾಡುವುದೂ ಅದನ್ನು ತೊಳೆಸಿ-ತಿರುಗಿಸಿ ಮುದ್ದೆ ಕಟ್ಟುವುದು ಸುಲಭದ ಕೆಲಸವಲ್ಲ. ಆಕಾಲಕ್ಕೆ ಕನಿಷ್ಠ ಹೊರಗಿನ ಭಕ್ತರ ಸಂಖ್ಯೆಯೇ ಕೆಲವೊಮ್ಮೆ ಐದುನೂರು ದಾಟುತ್ತಿತ್ತು. ಆದರೆ, ಶ್ರೀಕ್ಷೇತ್ರಕ್ಕೆ ಬಂದ ಪ್ರತಿಯೊಬ್ಬರೂ ಊಟಮಾಡಿಯೇ ಹೋಗುತ್ತಿದ್ದರು. ಅದು ‘ಊಟ’ ಎನಿಸದೆ, ‘ಪ್ರಸಾದ’ ಎಂದು ಜನ ಭಾವಿಸುತ್ತಿದ್ದರು. ನಿಜಕ್ಕೂ ಅದು ಪ್ರಸಾದವೇ. ಶ್ರೀಮಠದ ಅಡುಗೆ ಮನೆಯ ಬೆಂಕಿ ಎಂದೂ ಆರುತ್ತಿರಲಿಲ್ಲ. ಒಮ್ಮೊಮ್ಮೆ ಸ್ವಾಮಿಗಳು ಸಾರನ್ನು ಸೌಟಿನಲ್ಲಿ ಹಿಡಿದು ಪರಿಶೀಲಿಸುತ್ತಿದ್ದದ್ದುಂಟು. ಅವರು ಊಟ ಮಾಡುತ್ತಿದ್ದ ಸಭಾಂಗಣಕ್ಕೂ ಬರುತ್ತಿದ್ದರು. ಅವರು ಬರುವ ಹೆಜ್ಜೆಯ ಸಪ್ಪಳಕ್ಕೆ ಸಭಾಂಗಣವು ಮೌನದಲ್ಲಿ ಅದ್ದಿಹೋಗುತ್ತಿತ್ತು! ಪ್ರತಿ ಸಾಲಿನ ಮುಂದೆ ನಿಂತು ‘ಪ್ರಸಾದ’ ಬಡಿಸುತ್ತಿದ್ದುದನ್ನು ನೋಡುತ್ತಿದ್ದರು. ಇದು ಪ್ರತಿನಿತ್ಯದ ಕಾಯಕಯೋಗಿಯ ಮಹಾಕಾಯಕವೇ ಆಗಿರುತ್ತಿತ್ತು!

ಬದುಕು ಬೆಳಗಿಸಿದ ಮಹಾನುಭಾವ
ಶ್ರೀಸಿದ್ಧಗಂಗಾಮಠ ದಾಸೋಹಕ್ಕೂ ವಿದ್ಯಾದಾನಕ್ಕೂ ಹೆಸರಾಗಿತ್ತು. ಅತ್ತ ಉತ್ತರಕರ್ನಾಟಕ ಇತ್ತ ದಕ್ಷಿಣಕರ್ನಾಟಕ-ಇವುಗಳ ನಡುವಣ ಪ್ರದೇಶ ತುಮಕೂರು. ಇಲ್ಲಿ ಸಹಜವಾಗಿ ವೀರಶೈವ ಸಮುದಾಯದವರೇ ಹೆಚ್ಚು. ಗುಬ್ಬಿ, ಗೂಳೂರು ಮುಂತಾದ ಪ್ರದೇಶಗಳು ವೀರಶೈವ ಸಾಂಸ್ಕೃತಿಕ ಕೇಂದ್ರಗಳಾಗಿದ್ದವು. ಆದರೆ, ಇಲ್ಲಿದ್ದ ಹಲವು ಜಾತಿಜನಗಳು ತಮ್ಮ ಆಚಾರ-ವಿಚಾರಗಳನ್ನು ಮನೆಯಲ್ಲಿ ಇಟ್ಟುಕೊಳ್ಳುತ್ತಿದ್ದರೇ ವಿನಾ ಹೊರಗಡೆ ಅದನ್ನು ತರುತ್ತಿರಲಿಲ್ಲ. ಶ್ರೀಕ್ಷೇತ್ರದ ಭಕ್ತರಲ್ಲಿ ವೀರಶೈವೇತರರೇ ಹೆಚ್ಚು! ಅವರು ಶ್ರೀಮಠಕ್ಕೆ ದವಸ-ಧಾನ್ಯಗಳನ್ನು ತಂದು ಕೊಡುತ್ತಿದ್ದರು. ಇಲ್ಲಿ ಜಾತಿಭಾವನೆಗೆ ಅವಕಾಶ ಇರುತ್ತಿರಲಿಲ್ಲ. ಶ್ರೀಗಳು ಆಧುನಿಕ ಶಿಕ್ಷಣ ಪಡೆದವರೇ. ಅವರು ಹೆಚ್ಚಾಗಿ ಸ್ವಾಮಿ ವಿವೇಕಾನಂದರ ಪ್ರಭಾವಕ್ಕೆ ಒಳಗಾಗಿದ್ದರು. ಅನೇಕ ಬಾರಿ ವಿವೇಕಾನಂದರ ಮಾತುಗಳನ್ನು ಉದ್ಧರಿಸುತ್ತಲೇ ಇರುತ್ತಿದ್ದರು.

ಬಸವಣ್ಣ, ಸಿದ್ಧರಾಮ, ಅಲ್ಲಮಪ್ರಭು ಹಾಗೂ ನಿಜಗುಣ ಶಿವಯೋಗಿಗಳ ವಚನಗಳನ್ನು ಹೇಳಿ ವ್ಯಾಖ್ಯಾನ ಮಾಡುತ್ತಿದ್ದುದುಂಟು! ಸಂಸ್ಕೃತ ಸುಭಾಷಿತಗಳನ್ನು ಹೇಳಿ ತಮ್ಮ ಮಾತನ್ನು ಮುಗಿಸುತ್ತಿದ್ದರು. ಹೀಗೆ ಶ್ರೀಕ್ಷೇತ್ರವು ಅಕ್ಷರದಾಸೋಹಕ್ಕೆ ಪ್ರಾಧಾನ್ಯ ನೀಡುತ್ತಿತ್ತು. ಸ್ವಾಮಿಗಳು ಅಕ್ಷರ ಮತ್ತು ಅನ್ನ ಎರಡನ್ನೂ ಸಮಾನವಾಗಿಯೇ ಭಾವಿಸಿದ್ದರು. ಶ್ರೀಸಿದ್ಧಗಂಗಾಕ್ಷೇತ್ರ ಇವೆರಡಕ್ಕೂ ಪ್ರಾಧಾನ್ಯ ನೀಡಿತ್ತು. ಅವರ ಅನ್ನದ ಋಣ ಮತ್ತು ವಿದ್ಯೆಯ ಋಣದಲ್ಲಿ ಲಕ್ಷಾಂತರ ಜನರು ಬದುಕಿದ್ದಾರೆ. ಅವರ ಹೆಸರಲ್ಲಿ ತಮ್ಮ ಮನೆಗಳನ್ನು ಬೆಳಗಿಸಿಕೊಂಡಿದ್ದಾರೆ. ಅವರು ಮಹಾಯೋಗಿಗಳಾಗಿ ಸದಾ ನಮ್ಮನ್ನು ಹರಸುತ್ತಲೇ ಇರುತ್ತಾರೆ.

ಬರಹ ಇಷ್ಟವಾಯಿತೆ?

 • 22

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !