ಮಂಗಳವಾರ, ಮಾರ್ಚ್ 2, 2021
18 °C
ನಾಡಿನ ನಾನಾ ಮಠಾಧೀಶರು ಹಾಗೂ ಜನಪ್ರತಿನಿಧಿಗಳಿಂದ ಸ್ವಾಮೀಜಿ ಅವರ ಸಾಧನೆಯ ಸ್ಮರಣೆ

ಶಿವಕುಮಾರ ಶ್ರೀ ಪುಣ್ಯಸ್ಮರಣೆಗೆ ಭಕ್ತರ ದಂಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಗುರುವಾರ ನಡೆಯಲಿರುವ ಸಿದ್ಧಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆಯಲ್ಲಿ ಪಾಲ್ಗೊಳ್ಳಲು ಬುಧವಾರವೇ ನಾಡಿನ ನಾನಾ ಭಾಗಗಳ ಭಕ್ತರು ಮಠಕ್ಕೆ ಬಂದರು.

ಶ್ರದ್ಧಾ ಭಕ್ತಿಯ ಕೇಂದ್ರವಾದ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಯಲ್ಲಿ ಭಕ್ತರ ಕಲರವ ಹೆಚ್ಚಿತ್ತು. ಗುರುವಾರ ಮುಂಜಾನೆಯೇ ನಾಡಿನ ನಾನಾ ಮಠಾಧೀಶರು ಕ್ರಿಯಾ ಸಮಾಧಿಯ ಸ್ಥಳದಲ್ಲಿ ರುದ್ರಾಭಿಷೇಕ ನೆರವೇರಿಸುವರು. 7.30ಕ್ಕೆ ಗದ್ದುಗೆಯಿಂದ ವಸ್ತುಪ್ರದರ್ಶನದ ಸ್ಥಳದವರೆಗೆ ಬೆಳ್ಳಿ ಪಲ್ಲಕ್ಕಿಯಲ್ಲಿ ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರದ ಮೆರವಣಿಗೆ ಜರುಗಲಿದೆ. ವೀರಗಾಸೆ, ನಂದಿಧ್ವಜ ಸೇರಿದಂತೆ ವಿವಿಧ ಕಲಾಪ್ರಕಾರಗಳು ಈ ಮೆರವಣಿಗೆಯನ್ನು ಕಳೆಗಟ್ಟಿಸಲಿವೆ.

11ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತರು ಭಾಗಿಯಾಗುವರು. ಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯವಹಿಸುವರು. ಅಧ್ಯಕ್ಷತೆವಹಿಸಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸ್ವಾಮೀಜಿ ಅವರ ಹುಟ್ಟೂರು ಮಾಗಡಿ ತಾಲ್ಲೂಕಿನ ವೀರಾಪುರದಲ್ಲಿನ ಶಿವಕುಮಾರ ಸ್ವಾಮೀಜಿ ಅವರ 111 ಅಡಿ ಎತ್ತರದ ಪ್ರತಿಮೆ ಮತ್ತು ಗ್ರಾಮದ ಸಮಗ್ರ ಅಭಿವೃದ್ಧಿ ಯೋಜನೆಯ ‘3ಡಿ’ ಚಿತ್ರ ಅನಾವರಣಗೊಳಿಸುವರು. ನಾಡಿನ ವಿವಿಧ ಮಠಾಧೀಶರು, ಸಚಿವರು ಪುಣ್ಯಸ್ಮರಣೆಗೆ ಸಾಕ್ಷಿಯಾಗುವರು.

ಪುಣ್ಯಸ್ಮರಣೆಯ ಹಿಂದಿನ ದಿನವಾದ ಬುಧವಾರ ಮಠದ ಆವರಣದಲ್ಲಿ ಕಾರ್ಯಗಳು ಲಗುಬಗೆಯಲ್ಲಿ ನಡೆದವು. ಶಿವಕುಮಾರ ಸ್ವಾಮೀಜಿ ತಮ್ಮ ಬದುಕಿನ ಉದ್ದಕ್ಕೂ ದಾಸೋಹಕ್ಕೆ ಪ್ರಾಮುಖ್ಯ ನೀಡಿದವರು. ಹಸಿದು ಬಂದ ಎಲ್ಲರಿಗೂ ಅನ್ನವನ್ನು ಇಟ್ಟುವರು. ಇಂತಿಪ್ಪ ದಾಸೋಹ ಪುರುಷರ ಸ್ಮರಣೆಯಲ್ಲಿ ಊಟ (ಪ್ರಸಾದ)ದ ವ್ಯವಸ್ಥೆಯೂ ಪ್ರಮುಖವಾಗಿದೆ. ಇದು ಅಚ್ಚುಕಟ್ಟಾಗಿ ನಡೆಯಬೇಕು ಎನ್ನುವ ಉದ್ದೇಶ ಮಠದ ಸಿಬ್ಬಂದಿಗೆ ಇದೆ.

ಈಗಾಗಲೇ 60 ಕ್ವಿಂಟಲ್ ಸಿಹಿ ಬೂಂದಿ, 10 ಕ್ವಿಂಟಲ್ ಕಾರ ಬೂಂದಿ, 20 ಕ್ವಿಂಟಲ್ ಮಾಲದಿಯನ್ನು ಬಾಣಸಿಗರು ಸಿದ್ಧಪಡಿಸಿದ್ದಾರೆ. ಬುಧವಾರವೂ ಈ ಸಿಹಿಯನ್ನು ಸಿದ್ಧಪಡಿಸಲಾಯಿತು. ಮಠದ ವಸ್ತುಪ್ರದರ್ಶನದ ಆವರಣದ ಎರಡು ಕಡೆ ಸೇರಿದಂತೆ ಆರು ಕಡೆಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ವಾಹನಗಳು ಮಠದ ಆವರಣ ಪ್ರವೇಶಿಸದಂತೆ ಬಂಡೆಪಾಳ್ಯದ ಹೊಲಗಳ ಬಳಿ ಹಾಗೂ ವಸ್ತುಪ್ರದರ್ಶನದ ಸ್ಥಳದ ಬಳಿ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆ.

ವಸತಿ ಶಾಲೆಯಲ್ಲಿರುವ ವಿದ್ಯಾರ್ಥಿಗಳು ಪುಣ್ಯಸ್ಮರಣೆಯ ಕೆಲಸ ಕಾರ್ಯಗಳಲ್ಲಿ ಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬೂಂದಿ ತಯಾರಿ ಸ್ಥಳ, ಈರುಳ್ಳಿ ಕತ್ತರಿಸುವುದು, ತರಕಾರಿ ಕತ್ತರಿಸುವುದು, ಪಾತ್ರೆಗಳನ್ನು ಜೋಡಿಸುವುದು, ಸ್ವಚ್ಛತೆ ಹೀಗೆ ನಾನಾ ಕೆಲಸಗಳಲ್ಲಿ ತೊಡಗಿದ್ದರು.

ಸಂಜೆ 5.30ರಿಂದ ರಾತ್ರಿ 8.30ರವರೆಗೆ ವೀಣಾ ವಾದನ ಕಛೇರಿ ಜರುಗಲಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ನಡೆಯಲಿವೆ.

ಎಸ್‌ಪಿ, ಎಡಿಸಿ ಪರಿಶೀಲನೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಬುಧವಾರ ಬೆಳಿಗ್ಗೆಯೇ ಕಾರ್ಯಕ್ರಮದ ನಡೆಯುವ ವೇದಿಕೆಯನ್ನು ಪರಿಶೀಲಿಸಿದರು. ಶಾಮಿಯಾನವನ್ನು ಅಳವಡಿಸುತ್ತಿದ್ದವರಿಗೆ ವ್ಯವಸ್ಥೆಗಳು ಈ ರೀತಿಯಲ್ಲಿ ಇರಬೇಕು ಎಂದು ಸೂಚಿಸಿದರು.

ಗಣ್ಯರು ಕೂರುವ ವೇದಿಕೆಯ ಕನಿಷ್ಠ ಅಂತರದಲ್ಲಿಯೇ ಗಣ್ಯರಿಗೆ ಮತ್ತು ಮಾಧ್ಯಮದವರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಇದು ತೀರಾ ವೇದಿಕೆಗೆ ಹತ್ತಿರವಾಗಿದೆ. ಇದನ್ನು ಸ್ವಲ್ಪ ಹಿಂದಕ್ಕೆ ಹಾಕಿ ಎಂದು ಸೂಚಿಸಿದರು. ನಂತರ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಯಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ದಾಸೋಹ ದಿನವಾಗಲಿ

ಶಿವಕುಮಾರ ಸ್ವಾಮೀಜಿ ಅವರ ಎರಡನೇ ಪುಣ್ಯಸ್ಮರಣೆಯ ಈ ಸಂದರ್ಭದಲ್ಲಿ ನಾಡಿನ ವಿವಿಧ ಮಠಾಧೀಶರು ಮತ್ತು ಭಕ್ತರು ಹಲವು ರೀತಿಯಲ್ಲಿ ಸರ್ಕಾರದ ಮುಂದೆ ಹಕ್ಕೊತ್ತಾಯಗಳನ್ನು ಮಂಡಿಸುತ್ತಿದ್ದಾರೆ.

ತುಮಕೂರಿನ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಶಾಲಾ, ಕಾಲೇಜುಗಳ ಪಠ್ಯದಲ್ಲಿ ಶಿವಕುಮಾರ ಶ್ರೀ ಅವರ ಬದುಕು, ಸಾಧನೆ ಸೇರಲಿ ಎಂದು ಆಗ್ರಹಿಸಿದ್ದಾರೆ. ಶಿವಗಂಗೆ ಹೊನ್ನಮ್ಮಗವಿ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಜ.21ನ್ನು ದಾಸೋಹ ದಿನ ಎಂದು ಸರ್ಕಾರ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ದಾಸೋಹದ ದಿನಕ್ಕಾಗಿ ಟ್ವಿಟರ್ ಅಭಿಯಾನ ಆರಂಭಿಸುವುದಾಗಿ ಭಕ್ತರು ಹೇಳಿದ್ದಾರೆ.


ಅಡುಗೆ ತಯಾರಿಯಲ್ಲಿ ತೊಡಗಿರುವ ಬಾಣಸಿಗರು

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು