ಭಾನುವಾರ, ನವೆಂಬರ್ 28, 2021
20 °C

ರೈಲ್ವೆ ಕೆಳಸೇತುವೆ ನಿರ್ಮಾಣಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿಪಟೂರು: ನಗರದ ಹೃದಯ ಭಾಗದಲ್ಲಿರುವ ಗಾಂಧಿನಗರ ರೈಲ್ವೆ ಗೇಟ್ ಬಳಿಯಲ್ಲಿ ಸುಮಾರು ವರ್ಷಗಳಿಂದ ಕೆಳಸೇತುವೆ ನಿರ್ಮಾಣ ಮಾಡಲಾಗುವುದು ಎಂದು ಆಶ್ವಾಸನೆ ನೀಡುತ್ತಾ ಬಂದಿದ್ದು, ತ್ವರಿತವಾಗಿ ನಿರ್ಮಾಣ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಕೆ.ಟಿ. ಶಾಂತಕುಮಾರ್ ಒತ್ತಾಯಿಸಿದರು.

ಗಾಂಧಿನಗರ ರೈಲ್ವೆ ಗೇಟ್ ಬಳಿ ಸ್ಥಳೀಯ ಮುಖಂಡರೊಂದಿಗೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು
ಮಾತನಾಡಿದರು.

ಹಲವಾರು ವರ್ಷಗಳಿಂದಲೂ ಕೆಳಸೇತುವೆ ಅಥವಾ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಇಲ್ಲಿನ ಜನರ ಒತ್ತಾಯಿಸುತ್ತಿದ್ದಾರೆ. ಆದರೆ, ಬೇಡಿಕೆ ಈಡೇರಿಲ್ಲ. ಈಗಾಗಲೇ ರೈಲ್ವೆ ಇಲಾಖೆಯಿಂದ ದ್ವಿಪಥ ಕಾಮಗಾರಿಯೂ ಚಾಲನೆಯಲ್ಲಿದೆ. ಹೆಚ್ಚಿನ ರೈಲುಗಳು ಓಡಾಡುತ್ತವೆ. ಇದರಿಂದಾಗಿ ಗಂಟೆಗಟ್ಟಲೇ ಗೇಟ್ ಹಾಕಲಾಗುತ್ತದೆ. ಇದರಿಂದಾಗಿ 5-6 ಕಿ.ಮೀ ಸುತ್ತಿಕೊಂಡು ನಗರಕ್ಕೆ ಬರುವಂತಹ ಸನ್ನಿವೇಶ ಎದುರಾಗಿದೆ ಎಂದು ದೂರಿದರು.

ಕಳೆದ 4-5 ವರ್ಷಗಳ ಹಿಂದೆಯೇ ಕೆಳಸೇತುವೆ ನಿರ್ಮಿಸುವುದಾಗಿ ಭರವಸೆ ನೀಡಿ ಗುದ್ದಲಿಪೂಜೆ ಮಾಡಲಾಗಿತ್ತು. ಅಲ್ಲದೇ ಕೆಳಸೇತುವೆಗೆ ಅಗತ್ಯವಿರುವ ಸ್ಲಾಬ್‍ ಸಿದ್ಧಪಡಿಸಿದ್ದರು. ಆದರೂ ಕಾಮಗಾರಿ ಮಾತ್ರ ಪ್ರಾರಂಭಿಸಿಲ್ಲ. ಜನರ ಬಗ್ಗೆ ಕಿಂಚಿತ್ತು ಕಾಳಜಿವಹಿಸಲು ಯಾವುದೇ ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.

ರೈಲ್ವೆ ಕೆಳ ಸತುವೆ ನಿರ್ಮಾಣದಿಂದ ಕೊಬ್ಬರಿ ಮಾರುಕಟ್ಟೆಗೆ ಬರಲು ಸಹ ಅನುಕೂಲವಾಗಲಿದೆ. ಜೊತೆಗೆ, ಗಾಂಧಿನಗರ ರೈಲ್ವೆ ನಿಲ್ದಾಣದಿಂದ ಗಾಂಧಿನಗರ ಸೇರಿದಂತೆ 40ಕ್ಕೂ ಹೆಚ್ಚು ಹಳ್ಳಿಗಳಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಇದಾಗಿದೆ. ತಾಲ್ಲೂಕಿನ ಪುಣ್ಯಕ್ಷೇತ್ರಗಳಾದ ಕೆರೆಗೋಡಿ-ರಂಗಾಪುರ ಸುಕ್ಷೇತ್ರ, ದಸರೀಘಟ್ಟದ ಚೌಡೇಶ್ವರಿ ದೇವಿ, ನಾಗರನವಿಲೆ, ಗಂಗನಘಟ್ಟ, ಎಂ. ಶಿವರ, ಕೆಂಬಾಳು ಸಂಪರ್ಕಿಸಲು ಅನುಕೂಲವಾಗುತ್ತದೆ. ಹಾಗಾಗಿ, ತ್ವರಿತವಾಗಿ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ನಾಸಿರ್ ಖಾನ್, ಮೆಹಬೂಬ್ ಖಾನ್, ಆಸಿಫ್, ಯಾಸಿನ್, ಇಮ್ರಾನ್, ಕಲಂದರ್, ಮೋಹನ್ ಬಾಬು, ಮಹಮದ್ ಬಿಲಾಲ್, ಫಹಾದ್ ಸೇರಿದಂತೆ ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು